ನವದೆಹಲಿ,ಮಾ.9- ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರಿಗೆ ತಮ್ಮ ಪಾನೀಯ ಕಂಪನಿಗಾಗಿ ಬಾಟ್ಲಿಂಗ್ ಘಟಕವನ್ನು ಸ್ಥಾಪಿಸಲು ಕಥುವಾ ಜಿಲ್ಲೆಯಲ್ಲಿ ಉಚಿತವಾಗಿ ಭೂಮಿ ಮಂಜೂರು ಮಾಡಿರುವುದು ಜಮ್ಮು ಮತ್ತು ಕಾಶ್ಮೀರದ ವಿರೋಧ ಪಕ್ಷದ ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ.
ಸರ್ಕಾರದ ಈ ನಿರ್ಧಾರದ ವಿರುದ್ಧ ವಿರೋಧ ಪಕ್ಷಗಳು ಸಮರ ಸಾರಿರುವ ಸಂದರ್ಭದಲ್ಲೇ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವು ಈ ವಿಷಯದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದೆ.
ವರದಿಗಳ ಪ್ರಕಾರ, ಮುರಳೀಧರನ್ ಅವರ ಸಿಲೋನ್ ಬೇವರೇಜಸ್ ಕಂಪನಿಗೆ ಕಥುವಾದಲ್ಲಿ 1,600 ಕೋಟಿ ರೂ.ಗಳ ಬಾಟಲಿ ತುಂಬುವ ಮತ್ತು ಅಲ್ಯೂಮಿನಿಯಂ ಕ್ಯಾನ್ ಉತ್ಪಾದನಾ ಘಟಕಕ್ಕಾಗಿ 25.75 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂಬ ಮಾಹಿತಿ ಇದೆ.
ಬಜೆಟ್ ಅಧಿವೇಶನದ ಪ್ರಶೋತ್ತರ ವೇಳೆಯಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಸಿಪಿಐ (ಎಂ) ನ ಹಲವಾರು ಶಾಸಕರು ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದರು. ಸಿಪಿಐ (ಎಂ) ಶಾಸಕ ಎಂವೈ ತಾರಿಗಾಮಿ ಅವರು ಭೂಮಿಯನ್ನು ಉಚಿತವಾಗಿ ಹಂಚಿಕೆ ಮಾಡಿರುವುದನ್ನು ಪ್ರಶ್ನಿಸಿದರು ಮತ್ತು ಸರ್ಕಾರದಿಂದ ಉತ್ತರವನ್ನು ಕೋರಿದ್ದಾರೆ.