ಬೆಂಗಳೂರು,ಫೆ.19- ರಾಜ್ಯ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಮಾರ್ಚ್ 3 ರಿಂದ ಆರಂಭವಾಗಲಿದೆ. ಮಾ.3 ರಂದು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರು ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ವಿಧಾನಸಭೆಯ ಸಭಾಂಗಣದಲ್ಲಿ ಭಾಷಣ ಮಾಡಲಿದ್ದಾರೆ.
ಮಾ.4 ರಿಂದ 6 ರವರೆಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ನಡೆಯಲಿದೆ. ಜೊತೆಗೆ ಸರ್ಕಾರಿ ಕಾರ್ಯಕಲಾಪಗಳು ಜರುಗಲಿವೆ. ಮಾ.7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಮುಂಗಡ ಪತ್ರವನ್ನು ಮಂಡನೆ ಮಾಡಲಿದ್ದಾರೆ.
ಮಾ.10 ರಿಂದ ಬಜೆಟ್ ಮೇಲಿನ ಚರ್ಚೆ ಹಾಗೂ ಸರ್ಕಾರಿ ಕಾರ್ಯಕಲಾಪಗಳು ಜರುಗಲಿವೆ.
ಮಾ.3 ರಿಂದ ಮಾ.21 ರವರೆಗೆ ಅಧಿವೇಶನ ನಡೆಸಲು ಸಮಯ ನಿಗದಿಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಮೇಲಿನ ಚರ್ಚೆಗೆ ಮಾರ್ಚ್ ಅಂತ್ಯಕ್ಕೆ ಉತ್ತರ ನೀಡುವುದಾಗಿ ಈಗಾಗಲೇ ಹೇಳಿದ್ದಾರೆ.
ಹೀಗಾಗಿ ಅಧಿವೇಶನ ಆರಂಭವಾದ ನಂತರ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿಯ ಸಭೆಯಲ್ಲಿ ಅಧಿವೇಶನ ಎಷ್ಟು ದಿನ ನಡೆಸಬೇಕು ಎಂಬ ಬಗ್ಗೆ ನಿರ್ಧಾರ ಮಾಡಲಾಗುವುದು. ಈಗ ಉಭಯ ಸದನಗಳ ಸಚಿವಾಲಯಗಳು ಪ್ರಕಟಿಸಿರುವ ಮಾಹಿತಿ ಪ್ರಕಾರ ಒಟ್ಟು 15 ದಿನಗಳ ಕಾಲ ಅಧಿವೇಶನ
ನಿಗದಿಯಾಗಿದೆ.