Wednesday, August 20, 2025
Homeರಾಜ್ಯಅತಿವೃಷ್ಠಿ ಹಾನಿ ಕುರಿತು ಗಿರುವ ಅತಿವೃಷ್ಠಿ ಹಾನಿ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ...

ಅತಿವೃಷ್ಠಿ ಹಾನಿ ಕುರಿತು ಗಿರುವ ಅತಿವೃಷ್ಠಿ ಹಾನಿ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ

Joint survey by Revenue and Agriculture Department on flood damage

ಬೆಂಗಳೂರು,ಆ.20- ಮಲೆನಾಡು, ಹಾಸನ, ಬೆಳಗಾವಿ ಹಾಗೂ ಕಲಬುರಗಿ ವಿಭಾಗ ಸೇರಿದಂತೆ ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಠಿ ಹಾನಿ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಗುವುದು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ವಿಧಾನಸಭೆಗೆ ತಿಳಿಸಿದರು.

ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಸಿಮೆಂಟ್‌ ಮಂಜು, ಆಡಳಿತ ಪಕ್ಷದ ಶಾಸಕರಾದ ಅಲ್ಲಮಪ್ರಭು ಪಾಟೀಲ್‌ ಮತ್ತು ಜಿ.ಟಿ.ಪಾಟೀಲರ್‌ರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ವಾಡಿಕೆಗಿಂತ ಹೆಚ್ಚು ಮಳೆಯಾಗಿ ವಿವಿಧ ಬೆಳೆಗಳು ಹಾನಿಯಾಗಿವೆ. ಜಂಟಿ ಸರ್ವೆ ನಂತರ ಎನ್‌ಡಿಆರ್‌ಎಫ್‌, ಎಸ್‌‍ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ, ಪರಿಹಾರ ಒದಗಿಸಲಾಗುವುದು. ಏಪ್ರಿಲ್‌, ಮೇ ತಿಂಗಳಿನಿಂದಲೂ ಮಳೆ ಜಾಸ್ತಿಯಾಗಿ ರಾಜ್ಯದ ಹಲವೆಡೆ ರೈತರಿಗೆ ತೊಂದರೆಯಾಗಿರುವುದನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿದೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಹೆಸರು, ಉದ್ದು ಸೇರಿದಂತೆ ಹಲವು ಬೆಳೆಗಳು ಹಾನಿಗೀಡಾಗಿವೆ. ರಾಜ್ಯದಲ್ಲಿ ಮೊದಲ ಬಾರಿಗೆ ಗುಲ್ಬರ್ಗ ಜಿಲ್ಲೆಗೆ 650 ಕೋಟಿ ರೂ. ಗೂ ಹೆಚ್ಚು ಬೆಳೆವಿಮೆ ಪರಿಹಾರ ದೊರೆಯುತ್ತಿದೆ. ಅರ್ಧ ಹಣ ಬಿಡುಗಡೆಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಹತ್ತನೇ ಒಂದು ಭಾಗಕ್ಕಿಂತ ಪರಿಹಾರ ಮೊತ್ತ ಹೆಚ್ಚಾದರೆ ರಾಜ್ಯಸರ್ಕಾರ ನೀಡಬೇಕಾಗುತ್ತದೆ. ಸುಮಾರು 28 ಲಕ್ಷ ರೈತರು ಬೆಳೆವಿಮೆ ನೋಂದಣಿ ಮಾಡಿಸಿದ್ದಾರೆ. ರೈತರು ಬೆಳೆವಿಮೆ ಕಂತಿನ ಶೇ.2 ರಷ್ಟು ಭರಿಸಿದರೆ, ಕೇಂದ್ರ ಮತ್ತು ರಾಜ್ಯಸರ್ಕಾರಗಳು ಶೇ.90ರಷ್ಟು ಭರಿಸಲಿವೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ವರದಿ ಬಂದಿದ್ದು, ತಕ್ಷಣ ಕಲಬುರಗಿ ಜಿಲ್ಲೆಯ ಬೆಳೆ ವಿಮೆ ಪರಿಹಾರವನ್ನು ರೈತರಿಗೆ ಬಿಡುಗಡೆ ಮಾಡಲಾಗುವುದು ಎಂದರು.

ಬೆಳಗಾವಿ ವಿಭಾಗದಲ್ಲಿ ಸವಳು ಜವಳು ಸಮಸ್ಯೆ ಹೆಚ್ಚಾಗಿದೆ. ಅನುದಾನ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯಲಾಗಿದೆ. ರಾಜ್ಯಸರ್ಕಾರದಿಂದಲೂ ಆದ್ಯತೆ ಮೇಲೆ ಸವಳು ಜವಳು ಸಮಸ್ಯೆಗೆ ಪರಿಹಾರಕ್ಕೆ ಒತ್ತು ನೀಡಲಾಗುವುದು ಎಂದು ಸಚಿವರು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಸಿಮೆಂಟ್‌ ಮಂಜು, ಸಕಲೇಶಪುರ ಭಾಗದಲ್ಲಿ ಭಾರೀ ಮಳೆಯಿಂದ ಕಾಫಿ, ಏಲಕ್ಕಿ ಸೇರಿದಂತೆ ಹಲವು ಬೆಳೆಗಳು ಹಾನಿಯಾಗಿದ್ದು, ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಅಲ್ಲಮಪ್ರಭು ಪಾಟೀಲ್‌ ಮಾತನಾಡಿ, ಬಿತ್ತನೆ ಮಾಡಿದ ಹೆಸರು, ಉದ್ದು, ಹತ್ತಿ, ಸೋಯಾಬಿನ್‌ ಸೇರಿದಂತೆ ಎಲ್ಲಾ ಬೆಳೆಗಳು ಹಾನಿಯಾಗಿವೆ. ರೈತರಿಗೆ ಪರಿಹಾರ ಒದಗಿಸಬೇಕು. ಎಲ್ಲಾ ರೈತರಿಗೂ ಬೆಳೆ ವಿಮೆ ದೊರೆಯುವಂತೆ ಅಭಿಯಾನ ಕೈಗೊಳ್ಳಬೇಕು. ಬಾಕಿ ಇರುವ ಅರ್ಧದಷ್ಟು ಬೆಳೆ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಶಾಸಕ ಜಿ.ಟಿ.ಪಾಟೀಲ್‌ ಮಾತನಾಡಿ, ಬೀಳಗಿ ಕ್ಷೇತ್ರದಲ್ಲಿ ಸವಳು ಜವಳು ಹೆಚ್ಚಾಗಿದ್ದು, ಹೆಚ್ಚು ಹಣ ಬಿಡುಗಡೆ ಮಾಡಬೇಕು ಎಂದರು.ಬಸವರಾಜು ಮತ್ತಿಮೋಳು ಮಾತನಾಡಿ, ಭಾರೀ ಮಳೆಯಿಂದ ಬಿತ್ತಿದ ಬಿತ್ತನೆ ಬೀಜಗಳು ಹಾಳಾಗಿವೆ. ಪ್ರತೀ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

RELATED ARTICLES

Latest News