ಬೆಂಗಳೂರು, ಜೂ.29- ಯಾವಾಗಲೂ ನ್ಯಾಯವನ್ನು ಕಾಪಾಡಬೇಕು, ನ್ಯಾಯವನ್ನು ಎತ್ತಿ ಹಿಡಿದರೆ ಆ ನ್ಯಾಯ ನಿಮನ್ನು ಕಾಪಾಡುತ್ತದೆ ಎಂದು ಗೃಹರಕ್ಷಕ ದಳ ಮತ್ತು ಅಗ್ನಿಶಾಮಕ ದಳದ ಡಿಜಿಪಿ ಕಮಲ್‌ಪಂಥ್ ಇಂದಿಲ್ಲಿ ತಿಳಿಸಿದರು.ಕೋರಮಂಗಲದ ಕೆಎಸ್‌ಆರ್‌ಪಿ ಪರೇಡ್ ಮೈದಾನದಲ್ಲಿ ಹಮಿಕೊಂಡಿದ್ದ ಬೀಳ್ಕೊಡುಗೆ ಕವಾಯತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಧರ್ಮೋ ರಕ್ಷತಿ ರಕ್ಷಿತಃ ಅಂದರೆ ನ್ಯಾಯವನ್ನು ಕಾಪಾಡಿದರೆ ಆ ನ್ಯಾಯ ನಿಮನ್ನು ಕಾಪಾಡುತ್ತದೆ. ನ್ಯಾಯ ಕೊಂದರೆ ಅದು ನಿಮನ್ನು ಕೊಲ್ಲುತ್ತದೆ ಎಂದು ವಿವರವಾಗಿ ತಿಳಿಸಿದರು.ಕರ್ನಾಟಕ ರಾಜ್ಯ ಪೊಲೀಸ್‌ಗೆ ಇಡೀ ದೇಶದಲ್ಲೇ ಉತ್ತಮವಾದ ಹೆಸರಿದೆ. ಹಾಗಾಗಿ ನೀವೆಲ್ಲರೂ ಅದಕ್ಕೆ ಬದ್ಧರಾಗಿ, ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸಿ ಎಂದರು.
ಪೊಲೀಸ್ ಇಲಾಖೆಗೆ ತರುಣರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಲಾಖೆಯನ್ನು ಅವರು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆಂಬ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
1990ರಲ್ಲಿ ಕರ್ನಾಟಕ ಪೊಲೀಸ್ ಕೇಡರ್ ಅಧಿಕಾರಿಯಾಗಿ ಆಯ್ಕೆಯಾಗಿ ಕರ್ನಾಟಕ ಪೊಲೀಸ್ ಸೇವೆಗೆ ಬಂದಾಗ ರಾಜ್ಯದ ಪರಿಸ್ಥಿತಿ ಹಾಗೂ ದೇಶದ ಪರಿಸ್ಥಿತಿ ಹೇಗಿತ್ತು ಎಂಬುವುದನ್ನು ವಿವರಿಸಿದ ಅವರು ನಾನು ಪೊಲೀಸ್ ಸೇವೆಗೆ ಸೇರುವುದು ನಮ ತಾಯಿಗೆ ಇಷ್ಟವಿರಲಿಲ್ಲ. ನಾನು ಅಖಿಲ ಭಾರತ ಪೊಲೀಸ್ ಸೇವೆಗೆ ಆಯ್ಕೆಯಾದಾಗ ಬಹಳ ಆತಂಕ ಇತ್ತು. ಏಕೆಂದರೆ ನನಗೆ ಭಾಷೆಯ ಸಮಸ್ಯೆಯಾಗಿತ್ತು.

ನಾನು ಹಿರಿಯ ಹಾಗೂ ಕಿರಿಯ ಅಧಿಕಾರಿಗಳು, ರಾಜ್ಯದ ಜನರಿಂದ ಭಾಷೆ ಕಲಿತೆ. ಕರ್ನಾಟಕ ರಾಜ್ಯದ ಜನರು ನನಗೆ ಸಹಕಾರ ನೀಡಿದರು ಎಂದು ಸರಿಸಿದರು.ನಾನು ಪೊಲೀಸ್ ಇಲಾಖೆಗೆ ಸೇರಿದ ಸಂದರ್ಭದಲ್ಲಿ ಕೆಎಸ್‌ಆರ್‌ಪಿ ತುಕಡಿಗಳು ಹೇಗೆ ಕರ್ತವ್ಯ ನಿರ್ವಹಿಸಿದರು ಎಂಬುದನ್ನು ವಿವರಿಸಿದ ಅವರು, ಮೆಣಸಿನ ಹಾಡ್ಯದಲ್ಲಿ ನಡೆದ ನಕ್ಸಲ್ ಕಾರ್ಯಾಚರಣೆ ವೇಳೆ 600 ಮಂದಿ ಸಿಬ್ಬಂದಿ ಜೊತೆ ಆ ಸ್ಥಳಕ್ಕೆ ಹೋಗಿ ಸಂಜೆಯೇ ಅಲರ್ಟ್ ಆದೆವು. ಬೆಳಗಾಗುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿದಾಗ ಬಹಳ ಆತಂಕ ಇತ್ತು. ಹಗಲಿರುಳು ಕರ್ತವ್ಯ ನಿಭಾಯಿಸಿದೆವು.ಏಕೆಂದರೆ ನಾವು ಒಬ್ಬ ನಾಗರಿಕನಿಗೂ ತೊಂದರೆಯಾಗದಂತೆ ಕಾರ್ಯಾಚರಣೆ ಮಾಡಬೇಕಾಗಿತ್ತು ಎಂದು ಅಂದಿನ ಘಟನೆಯನ್ನು ಮೆಲುಕು ಹಾಕಿದ್ದರು.
ಕರ್ನಾಟಕದಲ್ಲಿನ ಸಾಮ್ಯತೆ, ಸೌಜನ್ಯತೆ, ಸಂಸ್ಕೃತಿ, ಸಭ್ಯತೆ ಬೇರೆಲ್ಲೂ ಇಲ್ಲ. ರಾಜ್ಯದ ಜನತೆ ನಮಗೆ ನೀಡಿದ ಪ್ರೀತಿ, ವಿಶ್ವಾಸದಿಂದ ಉತ್ತಮ ಸೇವೆ ಸಲ್ಲಿಸಲು ಅವಕಾಶವಾಯಿತು ಎಂದರು.ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡಿದಾಗ ಇದ್ದಂತಹ ಸಮಸ್ಯೆಯನ್ನು ಎಲ್ಲಾ ಸಿಬ್ಬಂದಿಯ ಸಹಕಾರದಿಂದ ಬಗೆಹರಿಸಲು ಸಾಧ್ಯವಾಯಿತು. ಒಬ್ಬ ವ್ಯಕ್ತಿಯಿಂದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ. ಕಾನ್‌ಸ್ಟೆಬಲ್‌ನಿಂದ ಎಸ್ಪಿ ವರೆಗೂ ತಂಡವಾಗಿ ಕೆಲಸ ಮಾಡಿದಾಗ ಮಾತ್ರ ಉತ್ತಮ ರೀತಿಯಲ್ಲಿ ಆ ಸಮಸ್ಯೆ ಬಗೆಹರಿಯುತ್ತದೆ. ನಾನು ಎನ್ನದೇ ಪ್ರತಿಯೊಬ್ಬರೂ ಇಲಾಖೆಯಲ್ಲಿ ಒಗ್ಗೂಡಿ ಕರ್ತವ್ಯ ನಿಭಾಯಿಸಬೇಕೆಂದರು.

ನಾನು ಸಿದ್ಧಾಂತ ಇಟ್ಟುಕೊಂಡು 34 ವರ್ಷ ಸುದೀರ್ಘವಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿರುವುದು ತೃಪ್ತಿ ತಂದಿದೆ. ಸಿಬಿಐನಲ್ಲೂ ಕರ್ತವ್ಯ ನಿಭಾಯಿಸಿದೆ. ನ್ಯಾಯ, ನೀತಿ, ಪ್ರಾಮಾಣಿಕತೆಯಿಂದ ಕೆಲಸ ಮಾಡಲು ನನಗೆ ಎಲ್ಲಾ ಹಿರಿಯ- ಕಿರಿಯ ಅಧಿಕಾರಿಗಳು ಸಹಕಾರ ಕೊಟ್ಟರು. ರಾಜ್ಯದ ಜನರು ಒಳ್ಳೆಯವರು. ಅವರ ಪ್ರೀತಿ- ವಿಶ್ವಾಸದಿಂದ ನಾನು ಉತ್ತಮ ಸೇವೆ ಸಲ್ಲಿಸಲು ಅವಕಾಶವಾಯಿತು.
ಸರ್ಕಾರ ನನಗೆ ಹಲವಾರು ಜವಾಬ್ದಾರಿಗಳನ್ನು ಕೊಟ್ಟಿತು. ಆ ಜವಾಬ್ದಾರಿಗಳನ್ನು ನಾನು ಪ್ರಾಮಾಣಿಕತೆಯಿಂದ ನಿಭಾಯಿಸಿದ್ದೇನೆಂಬ ತೃಪ್ತಿ ನನಗಿದೆ.ಇಷ್ಟು ವರ್ಷ ಸುದೀರ್ಘ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ರಾಜ್ಯದ ಜನತೆಗೆ ಹಾಗೂ ಇಲಾಖೆಯ ಎಲ್ಲಾ ಹಿರಿಯ- ಕಿರಿಯ ಅಧಿಕಾರಿಗಳಿಗೆ ವಂದನೆ ಸಲ್ಲಿಸುವುದಾಗಿ ಕಮಲ್‌ಪಂಥ್ ಹೇಳಿದರು.
