ಬೆಂಗಳೂರು,ಅ.15- ಕರ್ನಾಟಕದಲ್ಲಿ ಮುಖ್ಯಮಂತ್ರಿ ಕುರ್ಚಿಯ ಗೊಂದಲ ತೀವ್ರವಾಗುತ್ತಿರುವ ನಡುವೆಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಒಂದಷ್ಟು ಅಸಮಾಧಾನಿತರಿಗೆ ದೂರು ಹೇಳಿಕೊಳ್ಳಲು ವೇದಿಕೆ ದೊರೆತಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಮುಡಾ ಪ್ರಕರಣದ ವಿರುದ್ಧ ಮುಖ್ಯಮಂತ್ರಿ ಬದಲಾವಣೆ ಕುರಿತು ಹೆಚ್ಚಿನ ಚರ್ಚೆಗಳಾಗುತ್ತಿವೆ. ಈ ನಡುವೆ ಸಾಮಾನ್ಯ ಕಾರ್ಯಕರ್ತರ ಸಮಸ್ಯೆಗಳ ಬಗ್ಗೆ ಸದ್ದೇ ಇಲ್ಲದಂತಾಗಿದೆ. ಬಹಳಷ್ಟು ನಿಗಮಮಂಡಳಿಗಳಿಗೆ ಈವರೆಗೂ ನೇಮಕಾತಿ ಪೂರ್ಣಗೊಂಡಿಲ್ಲ. ಕೆಲವೊಂದಕ್ಕೆ ಅಧ್ಯಕ್ಷ, ಉಪಾಧ್ಯಕ್ಷರನ್ನು ನೇಮಿಸಲಾಗಿದೆಯೇ ಹೊರತು ಸದಸ್ಯ, ಕಾರ್ಯಕರ್ತರ ನೇಮಕಾತಿ ಪೂರ್ಣಗೊಂಡಿಲ್ಲ.
ಈ ಬಗ್ಗೆ ಯಾವ ಪ್ರಮುಖ ನಾಯಕರೂ ಪ್ರಸ್ತಾಪಿಸಿಲ್ಲ. ಎಲ್ಲರಿಗೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆಯೇ ದೊಡ್ಡ ಚರ್ಚೆಯಾಗುತ್ತಿದೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರ ಬಗ್ಗೆ ಯಾರೂ ಚಿಂತೆ ಮಾಡುತ್ತಿಲ್ಲ ಎಂಬ ಆಕ್ಷೇಪಗಳು ತೀವ್ರಗೊಳ್ಳುತ್ತಿವೆ.
ಈ ಹಂತದಲ್ಲಿ ರಾಜ್ಯಕ್ಕೆ ಆಗಮಿಸುತ್ತಿರುವ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ತಮ್ಮ ಅಳಲು ಹೇಳಿಕೊಳ್ಳಲು ಒಂದಷ್ಟು ಮಂದಿ ಸಿದ್ಧರಾಗಿದ್ದಾರೆ. ಇವರ ಜೊತೆಗೆ ಕೆಲವು ಸಚಿವರು, ಶಾಸಕರು ತಮ್ಮದೇ ಆದ ಸಮಸ್ಯೆಗಳ ಚರ್ಚೆಗೆ ವೇಣುಗೋಪಾಲ್ ಅವರ ಸಮಯ ಕೇಳಿದ್ದಾರೆ.
ಆದರೆ ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸುತ್ತಿರುವುದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನ ಹಾಗೂ ತೆರಿಗೆ ಹಂಚಿಕೆಯಲ್ಲಾಗಿರುವ ಅನ್ಯಾಯಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ. ನಿಯೋಗದೊಂದಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರೊಂದಿಗೆ ನಾಳೆ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ.
ಈ ನಡುವೆ ಕಾರ್ಯಕರ್ತರು ಹಾಗೂ ಪ್ರಮುಖ ನಾಯಕರು ತಮ್ಮ ಭೇಟಿಗೂ ಸಮಯ ನೀಡಬೇಕು ಎಂದು ಮನವಿ ಮಾಡಿರುವುದು ಕುತೂಹಲ ಕೆರಳಿಸಿದೆ.ಕೆಲವು ಶಾಸಕರು ಸಚಿವರ ನಡವಳಿಕೆಗಳ ಬಗ್ಗೆ ದೂರಿನ ಉದ್ದನೆಯ ಪಟ್ಟಿಯನ್ನೇ ಹೊಂದಿದ್ದು, ಅದನ್ನು ವೇಣುಗೋಪಾಲ್‌ರ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈವರೆಗೂ ಕೆ.ಸಿ.ವೇಣುಗೋಪಾಲ್‌ರವರು ಯಾರಿಗೂ ಸಮಯ ನೀಡಿಲ್ಲ.
ಕೇವಲ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ. ಈ ನಡುವೆ ಅನಧಿಕೃತವಾಗಿ ಕೆಲವರು ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಚಿವರ ಪ್ರತ್ಯೇಕ ಸಭೆ, ಕೆಲವು ಶಾಸಕರ ಗೊಂದಲ ಹೇಳಿಕೆಗಳ ನಡುವೆ ಪಕ್ಷದ ಪ್ರಮುಖ ನಾಯಕರಾದ ವೇಣುಗೋಪಾಲ್ ರಾಜ್ಯ ಮುಖಂಡರೊಂದಿಗೆ ಚರ್ಚೆ ನಡೆಸಿ ಎಲ್ಲದಕ್ಕೂ ತೆರೆ ಎಳೆಯುವ ಸಾಧ್ಯತೆಯೂ ಇದೆ.
ದಸರಾ ನಂತರ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಕಾಂಗ್ರೆಸ್‌ನಲ್ಲಿ ಒಂದು ಬಣ ತೆರೆಮರೆಯಲ್ಲಿ ವದಂತಿಗಳನ್ನು ಹಬ್ಬಿಸುತ್ತಿವೆ. ಇದಕ್ಕೂ ಕಡಿವಾಣ ಹಾಕುವ ಅಗತ್ಯವಿದೆ ಎಂದು ಸಿದ್ದರಾಮಯ್ಯನವರ ಬೆಂಬಲಿಗರು ಪದೆಪದೆ ಪ್ರಸ್ತಾಪಿಸುತ್ತಿದ್ದಾರೆ.
ಕೆ.ಸಿ.ವೇಣುಗೋಪಾಲ್ ಇವೆಲ್ಲವನ್ನೂ ಸರಿಪಡಿಸಿಯೇ ದೆಹಲಿಗೆ ಹೋಗುತ್ತಾರೋ ಅಥವಾ ತಮ್ಮ ಪಾಡಿಗೆ ತಾವು ಸಂಸತ್‌ನ ಸಾರ್ವಜನಿಕ ಲೆಕ್ಕ ಪತ್ರಗಳ ಸಮತಿಯ ಉಸ್ತುವಾರಿಯನ್ನಷ್ಟೇ ನೋಡಿಕೊಂಡು ಹೋಗುತ್ತಾರೋ ಎಂಬುದನ್ನು ಕಾದುನೋಡಬೇಕಿದೆ