ನವದೆಹಲಿ, ಜೂ.3 –ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಜುಲೈ 3ರವರೆಗೆ ವಿಸ್ತರಿಸಿದೆ.ಕವಿತಾ ವಿರುದ್ಧ ಪ್ರೊಡಕ್ಷನ್ ವಾರೆಂಟ್ ಹೊರಡಿಸಿದ ಹಿಂದಿನ ಆದೇಶದ ಅನ್ವಯ ಕವಿತಾ ಅವರನ್ನುಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಂತರ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರು ಕಸ್ಟಡಿಯನ್ನು ವಿಸ್ತರಿಸಿದರು.
ಕಳೆದ ಮೇ 29 ರಂದುಬಿಆರ್‌ಎಸ್ ನಾಯಕಿ ವಿರುದ್ಧದ ಚಾರ್ಜ್ ಶೀಟ್‌ನ ಬಗ್ಗೆ ಮಾಹಿತಿ ಪಡೆದ ನಂತರ ನ್ಯಾಯಾಲಯವು ವಾರಂಟ್‌ಗಳನ್ನು ಹೊರಡಿಸಿತ್ತು.ನ್ಯಾಯಾಲಯವು ಮೂವರು ಸಹ ಆರೋಪಿಗಳಾದ ಪ್ರಿನ್ಸ್ , ದಾಮೋದರ್ ಮತ್ತು ಅರವಿಂದ್ ಸಿಂಗ್ ಅವರಿಗೆ ಜಾಮೀನು ನೀಡಿದೆ.ಇಡಿ ತನಿಖೆಯ ಸಮಯದಲ್ಲಿ ಮೂವರು ಆರೋಪಿಗಳನ್ನು ಬಂಧಿಸದೆ ಚಾರ್ಜ್ ಶೀಟ್ ಮಾಡಲಾಗಿದೆ.
ಇಡಿ ಮತ್ತು ಸಿಬಿಐ ದಾಖಲಿಸಿರುವ ಎರಡು ಪ್ರಕರಣಗಳಲ್ಲಿ ಕವಿತಾ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ, ನಂತರ ಅದನ್ನು ರದ್ದುಗೊಳಿಸಲಾಯಿತು.ಮಾರ್ಚ್ 15 ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್ ನಿವಾಸದಿಂದ ಇಡಿ ಕವಿತಾ (46) ಅವರನ್ನು ಬಂಧಿಸಿತು. ಪ್ರಸ್ತುತ ಆಕೆ ತಿಹಾರ್ ಜೈಲಿನಲ್ಲಿದ್ದಾರೆ.