Saturday, August 16, 2025
Homeರಾಜ್ಯಕೆ.ಎನ್‌. ರಾಜಣ್ಣ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು : ಸಿದ್ಧಗಂಗಾ ಶ್ರೀಗಳ ಆಗ್ರಹ

ಕೆ.ಎನ್‌. ರಾಜಣ್ಣ ಅವರನ್ನು ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು : ಸಿದ್ಧಗಂಗಾ ಶ್ರೀಗಳ ಆಗ್ರಹ

K.N. Rajanna should be reinstated in the cabinet: Siddaganga Sri demands

ಬೆಂಗಳೂರು, ಆ.16– ಕೆ.ಎನ್‌. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವುದು ತೀವ್ರ ಆಘಾತ ಉಂಟು ಮಾಡಿದ್ದು, ಮರಳಿ ರಾಜಣ್ಣ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮೀಜಿ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಜಿಲ್ಲೆಯಿಂದ ಕೆ.ಎನ್‌. ರಾಜಣ್ಣ ಮತ್ತು ಡಾ. ಜಿ.ಪರಮೇಶ್ವರ್‌ ಸಚಿವ ಸಂಪುಟದಲ್ಲಿದ್ದರು. ಇಬ್ಬರು ಉತ್ತಮ ಕೆಲಸ ಮಾಡುತ್ತಿದ್ದರು. ಏಕಾಏಕಿ ರಾಜಣ್ಣ ಅವರನ್ನು ವಜಾಗೊಳಿಸಿರುವುದು ತೀವ್ರ ಆಘಾತ ತಂದಿದೆ ಎಂದರು.
ಸಹಕಾರಿ ಕ್ಷೇತ್ರದಿಂದಲೇ ಮೇಲೆ ಬಂದ ರಾಜಣ್ಣ ರೈತರಿಗೆ, ಜನಸಾಮಾನ್ಯರಿಗೆ ಹಾಗೂ ಸಂಘಟನೆಗಳಿಗೆ ಹೆಚ್ಚು ಸಹಾಯ ಮಾಡಬಹುದು ಎಂಬ ಕಾರಣಕ್ಕಾಗಿ ಸಹಕಾರ ಖಾತೆ ಪಡೆದು ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದ ಹಾಗೆ ಅಧಿವೇಶನದ ಆರಂಭ ದಿನವೇ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದನ್ನು ಕೇಳಿ ಆಘಾತವಾಯಿತು. ಪಕ್ಷದ ಹೈಕಮಾಂಡ್‌ನ ನಿರ್ಧಾರದಂತೆ ಸಂಪುಟದಿಂದ ವಜಾಗೊಳಿಸುವುದಾಗಿ ತಿಳಿಸಲಾಗಿದೆ ಎಂದರು.

ರಾಜಣ್ಣ ನೇರ, ನಿಷ್ಟೂರವಾದಿ ಸ್ವಭಾವದವರು. ಅವರ ಒಂದು ಮಾತಿನ ಸಂದರ್ಭವನ್ನು ಬಳಸಿಕೊಂಡು ಸಂಪುಟದಿಂದ ಕೈಬಿಟ್ಟಿರುವುದನ್ನು ಮರು ಚಿಂತನೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಶೀಘ್ರದಲ್ಲೇ ಕಗ್ಗಂಟು ಬಗೆ ಹರಿಯಲಿದೆ. ರಾಜಣ್ಣ ಮತ್ತೆ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ವಿಚಾರಗಳಲ್ಲೂ ಮಾತನಾಡುತ್ತಿದ್ದರು. ಆದರೆ ರಾಜಣ್ಣ ಅವರ ವಿಷಯದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಹೈಕಮಾಂಡ್‌ ನೀರ್ಧಾರವಾಗಿರುವುದರಿಂದ ಯಾರು ಮಾತನಾಡಬಾರದು ಎಂದು ಹೇಳುತ್ತಿರುವುದಾಗಿ ತಿಳಿದು ಬಂದಿದೆ.

ಸಿದ್ದರಾಮಯ್ಯ ಹೈಕಮಾಂಡ್‌ ಅಲ್ಲ. ಹೈಕಮಾಂಡ್‌ನ ನಿರ್ಧಾರವನ್ನು ಅವರು ಒಪ್ಪಿಕೊಂಡಿರಬಹುದು. ಆದರೆ ರಾಜಣ್ಣ ಅವರನ್ನು ಮರಳಿ ಸಂಪುಟಕ್ಕೆ ತೆಗೆದುಕೊಂಡು ಜನ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

RELATED ARTICLES

Latest News