ಬೆಂಗಳೂರು, ಆ.11– ಮತಗಳ್ಳತನ ಆರೋಪಕ್ಕೆ ವ್ಯತಿರಿಕ್ತವಾಗಿ ಮಾತನಾಡಿದ್ದ ಕಾರಣಕ್ಕೆ ತಲೆ ತಂಡಕ್ಕೆ ಒಳಗಾಗಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ರಾಜೀನಾಮೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಪಾಲರು ಅಂಗೀಕಾರಿಸಿದ್ದಾರೆ.
ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಎರಡನೇ ಪರಿಶಿಷ್ಟ ಪಂಗಡದ ಸಚಿವರ ತಲೆದಂಡವಾಗಿದೆ. ನಿನ್ನೆಯಿಂದ ನಡೆದಿದ್ದ ಬಿರುಸಿನ ರಾಜಕೀಯ ಬೆಳವಣಿಗೆಗಳು ಇಂದು ತಾರ್ಕಿಕ ಅಂತ್ಯಕ್ಕೆ ತಲುಪಿವೆ. ಇಂದು ಮಧ್ಯಾಹ್ನದ ವೇಳೆಗೆ ರಾಜಣ್ಣ ನೀಡಿದ್ದ ರಾಜೀನಾಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಿದ್ದರು. ಸಂಜೆಯ ವೇಳೆಗೆ ರಾಜೀನಾಮೆ ಅಂಗೀಕರಾವಾಗಿದೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ಬೆಂಗಳೂರಿನಲ್ಲಿ ಪ್ರತಿಭಟನೆ ಕೂಡ ಮಾಡಿದ್ದರು. ಆದರೆ, ರಾಜಣ್ಣ ಅವರು ಮತಗಳವು ಆರೋಪದ ವಿಚಾರದಲ್ಲಿ ರಾಹುಲ್ ಗಾಂಧಿ ಅವರ ನಿಲುವಿಗೆ ವ್ಯಕ್ತಿರಿಕ್ತ ಹೇಳಿಕೆ ನೀಡಿ ಪಕ್ಷಕ್ಕೆ ಹಾಗೂ ಹೈಕಮಾಂಡ್ ಕೋಪಕ್ಕೆ ಗುರಿಯಾಗಿದ್ದರು.
ಈ ಮೊದಲು ರಾಜಣ್ಣ ಪಕ್ಷಕ್ಕೆ ವಿರುದ್ಧವಾಗಿ ಅದರಲ್ಲೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ವಿರುದ್ಧ ಪದೇ ಪದೇ ಹೇಳಿಕೆ ನೀಡಿದ್ದರು. ಕಳೆದ ಅಧಿವೇಶನದಲ್ಲಿ ರಾಜ್ಯದಲ್ಲಿ ಸಿಡಿ ಫ್ಯಾಕ್ಟರಿ ಇದೆ ಎಂದು ಹೇಳಿಕೆ ನೀಡಿ ಭಾರೀ ವಿವಾದ ಸೃಷ್ಟಿಸಿದ್ದರು. ಎಲ್ಲವನ್ನೂ ಸಹಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಮುಜುಗರವಾಗಿತ್ತು. ಮತಗಳ್ಳತನದ ವಿರುದ್ಧ ಇಡೀ ಕಾಂಗ್ರೆಸ್ ಪಕ್ಷವೇ ವಿರುದ್ಧವಾಗಿ ನಿಂತಿದ್ದಾಗ ರಾಜಣ್ಣ ಮತಗಳ್ಳತನಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂಬರ್ಥದಲ್ಲಿ ಹೇಳಿದ್ದರು. ಡಿ.ಕೆ.ಶಿವಕುಮಾರ್ ಬಿಬಿಎಂಪಿ ಉಸ್ತುವಾರಿ ಸಚಿವರಾಗಿರುವುದರಿಂದ ಮತದಾರರ ಪಟ್ಟಿ ಪರಿಷ್ಕರಣೆಯ ಲೋಪಕ್ಕೆ ಡಿ.ಕೆ.ಶಿವಕುಮಾರ್ ಕಾರಣ ಎಂಬ ಸಂದೇಶ ನೀಡಲು ರಾಜಣ್ಣ ಯತ್ನಿಸಿದ್ದರು. ಆದರೆ ಅದರ ಪರಿಣಾಮ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಾನಿಯುಂಟು ಮಾಡಿತ್ತು.
ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಹಾಗೂ ಪಕ್ಷದಿಂದ ಉಚ್ಛಾಟಿಸುವಂತೆ ಕಾಂಗ್ರೆಸ್ ನ ಒಂದು ಬಣ ಬಲವಾಗಿ ಪ್ರತಿಪಾದಿಸಿತ್ತು. ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಡಬೇಕು, ಇಲ್ಲವಾದರೆ ನೀವೇ ಹೊಣೆಗಾರರಾಗಬೇಕಾಗುತ್ತದೆ. ರಾಜಣ್ಣ ಅವರನ್ನು ಪಕ್ಷದಿಂದ ಉಚ್ಛಾಟಿಸುವುದು ಖಚಿತ ಎಂಬ ಸಂದೇಶ ರವಾನಿಸಿತ್ತು.ಅನಿವಾರ್ಯವಾಗಿ ಸಿದ್ದರಾಮಯ್ಯ ಅವರ ಕಚೇರಿಯಿಂದ ಕರೆ ಹೋಗಿ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು. ಇದರಿಂದ ಬೇಸರಗೊಂಡ ರಾಜಣ್ಣ ಮುಖ್ಯಮಂತ್ರಿಯವರು ಕೂಗಳೆತೆಯ ದೂರದಲ್ಲಿದ್ದರೂ ಭೇಟಿ ಮಾಡದೆ, ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯವರ ಕೈಗೆ ರಾಜೀನಾಮೆ ಪತ್ರ ನೀಡಿ ಬಂದಿದ್ದರು.
ಮುಂದಿನ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ರಾಜಣ್ಣ ಅವರ ಪುತ್ರರೂ ಆಗಿರುವ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರ ಜೊತೆ ಚರ್ಚೆ ನಡೆಸಿದರು. ನಂತರ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಿದ್ದರು. ಅಂತಿಮವಾಗಿ ರಾಜಣ್ಣ ಅವರ ತಲೆದಂಡವಾಗಿದೆ.
ಈ ಹಿಂದೆ ಕ್ರೀಡಾ ಸಚಿವರಾಗಿದ್ದ ಬಳ್ಳಾರಿಯ ಬಿ.ನಾಗೇಂದ್ರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಜೀನಾಮೆ ನೀಡಿದ್ದರು. ಈಗ ರಾಜಣ್ಣ ರಾಜೀನಾಮೆ ನೀಡಿದ್ದಾರೆ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು ಎಂಬುದು ಕಾಕತಾಳಿಯವಾಗಿದೆ.
ಸತ್ಯ ಹೇಳಿದ್ದಕ್ಕೆ ರಾಜಣ್ಣ ಅವರ ರಾಜೀನಾಮೆ ಪಡೆಯಲಾಗಿದೆ ಎಂದು ಬಿಜೆಪಿ ಟೀಕಿಸಿದೆ. ಸಿದ್ದರಾಮಯ್ಯ ಅವರ ಬಣದ ಸಚಿವರನ್ನು ಗುರಿಯಾಗಿಸಿ ಸಂಪುಟದಿಂದ ಕೈ ಬಿಡಲಾಗುತ್ತಿದೆ ಎಂಬ ಟೀಕೆಗಳು ಕೇಳಿ ಬಂದಿವೆ. ಡಿ.ಕೆ.ಶಿವಕುಮಾರ್ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಸಿದ್ದರಾಮಯ್ಯ ಬಣದ ಸಚಿವರನ್ನು ವಜಾ ಮಾಡಿಸುತ್ತಿದ್ದಾರೆ ಎಂದು ಟೀಕಿಸಲಾಗುತ್ತಿದೆ.
- ರಕ್ತದ ಕ್ಯಾನ್ಸರ್ ರೋಗಿಗಳಿಗೆ ಆಶಾಕಿರಣವಾದ “ಕಾರ್ ಟಿ-ಸೆಲ್ ಥೆರಪಿ”: ಕಿರಣ್ ಮಂಜುಂದಾರ್ ಶಾ
- ಕೆ.ಎನ್.ರಾಜಣ್ಣ ತಲೆದಂಡ : ಸಚಿವ ಸ್ಥಾನದ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲರು
- ಸಚಿವ ಶಿವರಾಜ್ ತಂಗಡಗಿ ವಿರುದ್ಧ ಸ್ಪೀಕರ್ ಖಾದರ್ ಗರಂ
- ಸ್ಮಾರ್ಟ್ ಮೀಟರ್ ಅವ್ಯವಹಾರ : ಮೇಲ್ಮನೆಯಲ್ಲಿ ಗದ್ದಲ-ಕೋಲಾಹಲ
- ಗೋ ಹತ್ಯೆಗೈದು ವಿಕೃತಿ ಮೆರೆದ ಕಿಡಿಗೇಡಿಗಳು