ಚಿಕ್ಕಮಗಳೂರು,ಮಾ.14- ಕಾಫಿನಾಡಿನಲ್ಲಿ ಕಾಡಾನೆಗಳ ಉಪಟಳ ಕಡಿಮೆಯಾಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ದಾಳಿಗೆ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಜಿಲ್ಲೆಯ ಮೂಡಿಗೆರೆ ಸಮೀಪ ಬಾಳೂರು ಸಮೀಪದ ಹೊರಟ್ಟಿಯಲ್ಲಿ ಹಾಗೂ ಜಾವಳಿಯ ಸಂಪ್ಲಿ ಬಳಿ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಬಾಳೂರು ಹೊರಟ್ಟಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್, ಅವರ ಪತ್ನಿ ಸರೋಜ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಕೋಣ ದಾಳಿ ನಡೆಸಿ ತಿವಿದು ಗಾಯಗೊಳಿಸಿದೆ.ಅವರನ್ನು ಮೂಡಿಗೆರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅರಣ್ಯ ಉಪ ವಲಯ ಅರಣ್ಯಾಧಿಕಾರಿ ಚರಣ್ , ಮೋಸಿನ್, ಗ್ರಾಮಸ್ಥ ರಘುಪತಿ ಭೇಟಿ ನೀಡಿ ದಾಳಿಯಾದ ಸ್ಥಳ ಪರಿಶೀಲನೆ ಮಾಡಿ ಪರಿಹಾರದ ಭರವಸೆ ನೀಡಿದ್ದಾರೆ. ಜಾವಳಿಯ ಸಮೀಪದ ಸಂಪ್ಲಿ ಬಳಿ ಕಾಡುಕೋಣ ದಾಳಿಯಿಂದ ಟಿಂಬರ್ ಕಾರ್ಮಿಕರೊಬ್ಬರು ಗಾಯಗೊಂಡಿದ್ದಾರೆ.
ಜಾವಳಿ ಬಳಿ ಗ್ರಾಮ ಪಂಚಾಯಿತಿ ಸದಸ್ಯ ಪ್ರತೀಶ್ ಮೇಲೆ ಕಾಡುಕೋಣ ದಾಳಿ ನಡೆಸಿ ಬಲಭಾಗದ ಪಕ್ಕೆ ಮುರಿದಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಪವಲಯ ಅರಣ್ಯ ಅಧಿಕಾರಿ ಚಂದನ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.