ಕಲಬುರಗಿ,ಏ.3- ನಗರದಲ್ಲಿ ಕರಳು ಹಿಂಡುವ ಘಟನೆಯೊಂದು ನಡೆದಿದ್ದು, ಕೌಟುಂಬಿಕ ಕಲಹದಿಂದ ಜೆಸ್ಕಾಂ ನೌಕರ ತನ್ನ ಪತ್ನಿ ಹಾಗೂ ಇಬ್ಬರು ಎಳೆಯ ಮಕ್ಕಳನ್ನು ಕೊಲೆಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘನಘೋರ ಘಟನೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಹಳೇ ಜೀವರ್ಗಿ ರಸ್ತೆಯ ಗಾಬರೆ ಲೇಔಟ್ನ ಅಪಾರ್ಟ್ ಮೆಂಟ್ನಲ್ಲಿ ನೆಲೆಸಿದ್ದ ಸಂತೋಷ್ (45) ಎಂಬಾತನೇ ಪತ್ನಿ ಶೃತಿ(35) ಹಾಗೂ ಮಕ್ಕಳಾದ ಮುನಿಶ್ (9) ಮತ್ತು 3 ತಿಂಗಳ ಅನಿಶ್ ನನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವವರು.
ಜೆಸ್ಕಾಂನಲ್ಲಿ ಹಿರಿಯ ಸಹಾಯಕ ಲೆಕ್ಕಾಧಿಕಾರಿಯಾಗಿ ಸಂತೋಷ್ ಕೆಲಸ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪತ್ನಿ ಕುಟುಂಬದವರ ಜೊತೆ ಮನಸ್ತಾಪ ಉಂಟಾಗಿ ಅವರೊಂದಿಗೆ ಜಗಳವಾಡಿಕೊಂಡಿದ್ದರು. ಅಲ್ಲದೆ ಪತಿ ಕುಟುಂಬದವರಿಂದಲೂ ದೂರವಿದ್ದರು ಹಾಗಾಗಿ ಸಂಬಂಧಿಕರಾರೂ ಅಷ್ಟಾಗಿ ಬರುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.
ನಿನ್ನೆ ಎಂದಿನಂತೆ ಕೆಲಸಕ್ಕೆ ಹೋಗಿದ್ದ ಸಂತೋಷ್ ಸಂಜೆ 6 ಗಂಟೆ ಸುಮಾರಿನಲ್ಲಿ ಮನೆಗೆ ಬಂದಾಗ ಯಾವುದೋ ವಿಚಾರವಾಗಿ ಪತ್ನಿ ಜೊತೆ ಜಗಳವಾಗಿದೆ. ಆ ಸಂದರ್ಭದಲ್ಲಿ ತಾಳೆಕಳೆದುಕೊಂಡು ಪತ್ನಿ ಹಾಗೂ ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಈ ವಿಷಯವನ್ನು ಮೊಬೈಗೆ ಕರೆ ಮಾಡಿ ತನ್ನ ಕುಟುಂಬಕ್ಕೆ ತಿಳಿಸಿ ತದ ನಂತರ ಆತನೂ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾತ್ರಿ 10 ಗಂಟೆ ಸುಮಾರಿಗೆ ಸುದ್ದಿ ತಿಳಿದು ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ದೊರೆತ ಡೆತ್ನೋಟನ್ನು ವಶಕ್ಕೆ ಪಡೆದಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ನಿಖರ ಕಾರಣದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಹತ್ತು ವರ್ಷದ ಹಿಂದೆ ಸಂತೋಷ್ ಹಾಗೂ ಶೃತಿ ಅವರ ಮದುವೆಯಾಗಿದ್ದು, ಇಬ್ಬರು ಮುದ್ದಾದ ಮಕ್ಕಳಿದ್ದರು. ಈ ಮಕ್ಕಳನ್ನು ನೋಡಿಕೊಂಡೇ ಅವರ ಭವಿಷ್ಯ ರೂಪಿಸಿಕೊಂಡು ತಮ್ಮ ಬೇಸರ ಅಥವಾ ಇನ್ನಾವುದೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ಆದರೆ ಸಂತೋಷ್ ಅವರ ದುಡುಕಿನ ನಿರ್ಧಾರದಿಂದಾಗಿ ತಾನೂ ಸೇರಿದಂತೆ ತನ್ನ ಕುಟುಂಬವನ್ನೇ ಬಲಿಪಡೆದುಕೊಂಡಿರುವುದು ದುರ್ದೈವ. ಹಲವಾರು ವರ್ಷಗಳಿಂದ ದೂರವಿದ್ದ ಸಂಬಂಧಿಕರು ಈ ಸುದ್ದಿ ತಿಳಿಯುತ್ತಿದ್ದಂತೆ ಮನೆ ಬಳಿ ಆಗಮಿಸಿ ಮೃತ 3 ತಿಂಗಳ ಮಗುವನ್ನು ಹಿಡಿದು ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.