ನವಲಗುಂದ,ಜು.11- ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆ ಮಹದಾಯಿ ಕಳಸಾ-ಬಂಡೂರಿ ಜಾರಿ ಮಾಡಲು ಗೋವಾ ಸರ್ಕಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಪ್ರವಾಹ ಪ್ರಾಧಿಕಾರ ಮೂಲಕ ಯೋಜನೆ ತಡೆಯಲು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಮಹದಾಯಿ ಹೋರಾಟಗಾರ ಹಾಗೂ ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಮಹದಾಯಿ ಹತ್ತಿರ ವಿರುವ ವಿಆರ್‌ಡಿ ಆಣೆಕಟ್ಟು ಎತ್ತರಕ್ಕೆ ರಾಜ್ಯದ ವಿರೋಧವಿದೆ ಎಂದು ಅವರು ಹೇಳಿದರು.
ಗೋವಾ ಸರ್ಕಾರ ಒತ್ತಡದ ಮೆರೆಗೆ ಕೇಂದ್ರ ಸರ್ಕಾರ ರಚಿಸಿರುವ ಕೇಂದ್ರ ಮಹದಾಯಿ ಪ್ರವಾಹ ಪ್ರಾಧಿಕಾರದ ನಿಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಬಾರಿ ಮಳೆಯಾಗುವ ಸಂದರ್ಭದಲ್ಲಿ ಮಹದಾಯಿ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸುವ ಉದ್ದೇಶ ಏನು? ಎಂಬ ವಿಷಯವನ್ನು ರಾಜ್ಯದ ಸಂಸದರು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಮಹದಾಯಿ ನ್ಯಾಯಧೀಕರಣ ನ್ಯಾಯಮೂರ್ತಿ ಪಾಂಚಾಳ ಅವರು ಅಂತಿಮ ತೀರ್ಪು ನೀಡಿ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಉಪಯೋಗಿಸಲು ಆದೇಶಿಸಿದೆ.
ನೀರು ಉಪಯೋಗಿಸಲು ಕಳಸಾ ನಾಲಾ ತಿರುವು ಯೋಜನಯಡಿ 1.72 ಟಿಎಂಸಿ ಹಾಗೂ ಬಂಡೂರ ನಾಲಾ ತಿರುವು ಯೋಜನೆ ಅಡಿ 2.18 ಟಿಎಂಸಿ ಕುಡಿಯುವ ನೀರಿನ (ಲಿಫ್‌್ಟ ಯೋಜನೆಗಳು) ಮಾಡಲು ಯಾವದೇ ತೊಂದರೆ ಇಲ್ಲ. ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ 27/02/2020 ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ನಂತರ ಡಿಪಿಆರ್ ತಯಾರಿಸಲು 29/12/2022 ರಂದು ಅನುಮತಿ ಸಹ ನೀಡಿದೆ.
ಮಹದಾಯಿ ಕಳಸಾ-ಬಂಡೂರಿ ಯೋಜನೆ ಪ್ರದೇಶದಲ್ಲಿ 26.925 ಹಾಗೂ ಬಂಡೂರ ಯೋಜನೆಗೆ 28.447 ಹೆಕ್ಟೇರ್ ಬೇಕಾಗಿದ್ದ ಅರಣ್ಯ ಭೂಮಿಗೆ ಬದಲಾಗಿ ರಾಜ್ಯ ಸರ್ಕರ ಪರ್ಯಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿದೆ. ಗೋವಾ ಕುಂಟು ನೆಪ ನೀಡಿ ಅಲ್ಲಿ ಹುಲಿ ಕಾರಿಡಾರ್ ಇದೆ ಎಂದು ಈ ಯೋಜನೆಯನ್ನು ಮುಂದೂಡಲು ಪ್ರಯತ್ನಿಸುತ್ತಿದೆ.
ಅದಕ್ಕೆ ರಾಜ್ಯ ಸರ್ಕಾರ ಅರಣ್ಯ ಪರಿಸರ ಉನ್ನತ ಸಮಿತಿ ಅನುಮೋದನೆ ಪಡೆಯಲು 30/01/2024 ರಂದು 77ನೇ ಎಸ್ ಸಿ-ಎನ್‌ಬಿಡಬ್ಲ್ಯೂಎಲ್ ಸಭೆಯಲ್ಲಿ ಮಂಡಿಸಿದೆ. ಆದರೆ ಕೇಂದ್ರ ಸರ್ಕಾರ ಅನುಮತಿ ನೀಡದೇ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ಮುಂಡೂಡಿ ಕಾಲಹರಣ ಮಾಡುವ ಬದಲು ರಾಜ್ಯದ ಹಿತದೃಷ್ಟಿಯಿಂದ ಅನುಮತಿ ನೀಡಬೇಕು ಎಂದರು.
ರಾಜ್ಯದ ನೆಲ ಜಲದ ಪ್ರಶ್ನೆ ಬಂದಾಗ ಹಿಂದಿನಿಂದಲೂ ರಾಜಕೀಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಒಗ್ಗಟ್ಟಾಗಿ ನಿರ್ಣಯ ತೆಗೆದುಕೊಂಡಿದ್ದು ಈಗ ರಾಜ್ಯದ ಎಲ್ಲಾ ಸಂಸದರು, ಕೇಂದ್ರ ಸಚಿವರು ಒಗ್ಗಟ್ಟಾಗಿ ಈ ಯೋಜನೆ ಜಾರಿಗೆ ಪ್ರಯತ್ನಿಸದಿದ್ದರೆ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರ ಅನುಮತಿ ನೀಡುವ ನಿರೀಕ್ಷೆಯ ಮೇಲೆ ಕಳಸಾ-ಬಂಡೂರಿ ನಾಲಾ ತಿರುವ ಯೋಜನೆಗಳಿಗೆ (ಲಿಫ್‌್ಟ ಯೋಜನೆಗಳು) ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ ಕೇಂದ್ರ ಸರ್ಕಾರ ಅರಣ್ಯ ಮತ್ತು ವನ್ಯಜೀವಿ ಪರಿಸರ ಇಲಾಖೆಯಿಂದ ಅನುಮೋದನೆ ಪಡೆದ ತಕ್ಷಣ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡು ಕಾಮಗಾರಿ ಪ್ರಾರಂಭಿಸಲು ನಿರ್ಧರಿಸಿದ್ದಾರೆ ಎಂದರು.