Friday, October 3, 2025
Homeರಾಜ್ಯಕಲ್ಯಾಣ ಕರ್ನಾಟಕ ಪ್ರವಾಹ : ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಸಿದ್ದರಾಮಯ್ಯ

ಕಲ್ಯಾಣ ಕರ್ನಾಟಕ ಪ್ರವಾಹ : ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಸಿದ್ದರಾಮಯ್ಯ

Kalyan Karnataka floods: CM Siddaramaiah conducts aerial survey

ಬೆಂಗಳೂರು, ಸೆ.30- ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕ ಭಾಗದ 6-7 ಜಿಲ್ಲೆಗಳು ಜಲಾವೃತವಾಗಿದ್ದು, ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ. ಪರಿಹಾರ ಕಾರ್ಯಗಳಿಗೆ ತತ್ವಾರ ಎದುರಾಗಿದೆ. ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್‌, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆಗಳಲ್ಲಿ ಜಲ ಪ್ರಳಯದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಗಳು ಜಲ ದಿಗ್ಬಂಧನಕ್ಕೊಳಗೊಂಡಿವೆ. ಊರು ಕೆರೆಯಂತಾಗಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಮನೆಯಲ್ಲಿದ್ದ ದವಸ ಧಾನ್ಯಗಳು, ಎಲೆಕ್ಟ್ರಾನಿಕ್‌ ಸಲಕರಣೆಗಳು ನೀರಿನಿಂದ ಹಾನಿಗೊಳಗಾಗಿವೆ.

ಕಳೆದ ನಾಲ್ಕೈದು ದಿನಗಳಿಂದಲೂ ನೆರೆ ಹಾವಳಿ ನಿರಂತರವಾಗಿದೆ. ಭೀಮಾ ನದಿ ಪಾತ್ರದಲ್ಲಿ ಜನ ಪರದಾಡುವಂತಾಗಿದೆ. ಜೊತೆಗೆ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ, ಪರಿಹಾರ ಕಾರ್ಯಗಳಿಗೂ ಕಷ್ಟವಾಗಿದೆ. ಬೆಳೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಇನ್ನೂ ಕೆಲವು ಕಡೆ ನೀರು ನಿಂತು ಕೊಳೆಯಲಾರಂಭಿಸಿವೆ. ರಸ್ತೆ ಸೇತುವೆಗಳು ಹಾನಿಗೊಳಗಾಗಿವೆ. ಜಿಲ್ಲಾಡಳಿತಗಳು ಪುನರ್ವಸತಿ ಕೇಂದ್ರಗಳನ್ನು ತೆರೆದು ಜನರಿಗೆ ನೀರು, ಆಹಾರ, ವೈದ್ಯಕೀಯ ನೆರವು ಒದಗಿಸುತ್ತಿವೆ. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಮಹಾರಾಷ್ಟ್ರದ ಜಲಾಶಯಗಳಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರನ್ನು ಹರಿಯ ಬಿಟ್ಟಿರುವುದರಿಂದಾಗಿ ಮತ್ತಷ್ಟು ಪ್ರವಾಹಪರಿಸ್ಥಿತಿ ಎದುರಾಗಿದೆ. ಜನ ಜಾನುವಾರುಗಳ ಪ್ರಾಣ ರಕ್ಷಣೆಗೆ ಸವಾಲಿನ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಖ್ಯಮಂತ್ರಿಯಿಂದ ಸಮೀಕ್ಷೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನೆರೆಬಾಧಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದು, ಮಧ್ಯಾಹ್ನ ಕಲಬುರಗಿಯಲ್ಲಿ ಯಾದಗಿರಿ, ವಿಜಯಪುರ, ಕಲಬುರಗಿ, ಬೀದರ್‌ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.

ವೈಮಾನಿಕ ಸಮೀಕ್ಷೆಯಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಸೇರಿದಂತೆ ಹಲವು ಸಚಿವರು ಉಪಸ್ಥಿತರಿದ್ದರು.

ನೆರೆ ಸಂತ್ರಸ್ಥ ಪ್ರದೇಶಗಳಿಗೆ ರಾಜ್ಯಸರ್ಕಾರವೇ ತ್ವರಿತ ಸ್ಪಂದನೆ ನೀಡಿದ್ದು, ಮತ್ತಷ್ಟು ಸಹಾಯಕ್ಕಾಗಿ ಜನ ಯಾಚಿಸುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರ ಏಕಾಏಕಿ ಹೆಚ್ಚುವರಿ ನೀರು ಹರಿಯ ಬಿಟ್ಟಿರುವುದರಿಂದ ಕರ್ನಾಟಕದಲ್ಲಿ ಸಮಸ್ಯೆಗಳಾಗುತ್ತಿವೆ ಎಂಬ ಅಸಮಾಧಾನ ನಾಯಕರಿಂದ ಕೇಳಿ ಬರುತ್ತಿವೆ.

RELATED ARTICLES

Latest News