Tuesday, July 2, 2024
HomeಮನರಂಜನೆBIG NEWS : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್

BIG NEWS : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್

ಬೆಂಗಳೂರು,ಜೂ.11- ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು ಕೊಲೆ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ಇಂದು ಬೆಳಿಗ್ಗೆ ಮೈಸೂರಿನ ಹೋಟೆಲ್‌ ಒಂದರಲ್ಲಿ ಅವರನ್ನು ಬಂಧಿಸಲಾಗಿದೆ.ಇಂದು ಬೆಳಿಗ್ಗೆ ಬೆಳಕಿಗೆ ಬಂದ ಈ ಸುದ್ದಿ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ್ದು, ಅಭಿಮಾನಿಗಳನ್ನು ದಂಗು ಬಡಿಯುವಂತೆ ಮಾಡಿದೆ.

ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ(33) ಅವರು ನಟಿ ಪವಿತ್ರಾಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು ಎಂಬ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಅವರಿಗೆ ಕರೆ ಮಾಡಿದ ದರ್ಶನ್‌ ಅವರು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರುವಂತೆ ಸೂಚಿಸಿದ್ದರು ಎನ್ನಲಾಗಿದೆ.

ಅದರಂತೆ ರೇಣುಕಾಸ್ವಾಮಿಯನ್ನು ಜೂ.8 ರಂದು ನಗರಕ್ಕೆ ಕರೆತಂದು ಅಲ್ಲಿಂದ ಕಾಮಾಕ್ಷಿಪಾಳ್ಯದ ದರ್ಶನ್‌ ಆಪ್ತ ವಿನಯ್‌ ಎಂಬುವರ ಷೆಡ್‌ನಲ್ಲಿ ಕೂಡಿಹಾಕಿ ರಾತ್ರಿ ಐದಾರು ಮಂದಿ ಸೇರಿ ಹಲ್ಲೆ ನಡೆಸಿದ್ದರು. ತಲೆ, ಕತ್ತು ಹಾಗೂ ಮುಖಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ರಾಡ್‌ನಿಂದ ಹಲ್ಲೆ ನಡೆಸಿರುವ ಕಾರಣಕ್ಕೆ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ.

ನಂತರ ಶವವನ್ನು ಕಾಮಾಕ್ಷಿಪಾಳ್ಯ ವ್ಯಾಪ್ತಿಯ ಸುಮನಹಳ್ಳಿಯ ಮೋರಿಯೊಂದರಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಜೂ.9ರಂದು ಬೆಳಿಗ್ಗೆ ನಾಯಿ ಶವವನ್ನು ಎಳೆದಾಡುತ್ತಿದ್ದಾಗ ಸಮೀಪದ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯೊಬ್ಬರು ಸಮೀಪ ಹೋಗಿ ನೋಡಿದಾಗ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ತಕ್ಷಣ ಈ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಕೊಲೆಯಾದ ವ್ಯಕ್ತಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬುದು ಗೊತ್ತಾಗಿದೆ.

ಈ ಮೊದಲು ಇದು ಆತಹತ್ಯೆ ಎಂಬಂತೆ ಮೇಲ್ನೋಟಕ್ಕೆ ಕಂಡುಬಂದಿತ್ತು. ನಂತರ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕೊಲೆ ಎಂಬುದು ಗೊತ್ತಾಗಿದೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿ ರೇಣುಕಾಸ್ವಾಮಿಯ ಪೂರ್ವಾಪರ ಮಾಹಿತಿಯನ್ನು ಕಲೆ ಹಾಕಿ ಅವರ ಮೊಬೈಲ್‌ನಲ್ಲಿರುವ ಕರೆಪಟ್ಟಿ ಮತ್ತು ಸಿಸಿಟಿವಿಗಳ ಜಾಡು ಹಿಡಿದು ತನಿಖೆ ಮುಂದುವರೆಸಿದ ಪೊಲೀಸರು ವಿನಯ್‌ ಹಾಗೂ ಇತರ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಅವರು ನೀಡಿದ ಮಾಹಿತಿ ಪ್ರಕಾರ ಹಲ್ಲೆ ನಡೆಸಿದ ಐವರ ತಂಡದಲ್ಲಿ ನಟ ದರ್ಶನ್‌ ಕೂಡ ಇದ್ದರು ಎಂದು ಹೇಳಲಾಗಿದೆ. ಹಲವು ಆಯಾಮಗಳಲ್ಲಿ ಕೂಲಂಕುಷವಾಗಿ ಮಾಹಿತಿ ಕಲೆಹಾಕಿದಾಗ ಆರೋಪಿಗಳೊಂದಿಗೆ ನಟ ದರ್ಶನ್‌ ಸಹ ಸಂಪರ್ಕದಲ್ಲಿರುವುದನ್ನು ಮತ್ತು ಹಲ್ಲೆ ನಡೆಸಿದ ಸಂದರ್ಭದಲ್ಲಿ ಅವರೂ ಸಹ ಆ ತಂಡದಲ್ಲಿ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ.

ಕೊಲೆಯಂತಹ ಗಂಭಿರ ಸ್ವರೂಪದ ಪ್ರಕರಣ ಆಗಿರುವುದರಿಂದ ಇಂದು ಬೆಳಿಗ್ಗೆ ಮೈಸೂರಿನಲ್ಲಿ ದರ್ಶನ್‌ರನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆತಂದಿದ್ದು, ಬೌರಿಂಗ್‌ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.
ರೇಣುಕಾಸ್ವಾಮಿಯವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಪೋಷಕರು ಹಾಗೂ ಸಂಬಂಧಿಕರು ನಗರಕ್ಕೆ ಬಂದಿದ್ದು, ಕಾಮಾಕ್ಷಿಪಾಳ್ಯ ಪೊಲೀಸ್‌‍ ಠಾಣೆ ಮುಂದೆ ಅವರ ದುಃಖ ಮುಗಿಲು ಮುಟ್ಟಿತ್ತು.

ಹಿನ್ನಲೆ :
ನಟಿ ಪವಿತ್ರಗೌಡ ಅವರು ದರ್ಶನ್‌ ಜೊತೆಗಿದ್ದ ಫೋಟೊ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಹತ್ತು ವರ್ಷಗಳ ನಿರಂತರ ಪಯಣ ಎಂದು ಹೇಳಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಎರಡು ತಿಂಗಳ ಹಿಂದೆ ಕಾವೇರಿದ ಚರ್ಚೆಗೂ ಕಾರಣವಾಗಿತ್ತು. ಈ ನಡುವೆ ರೇಣುಕಾಸ್ವಾಮಿ ಅವರು ಪವಿತ್ರಗೌಡರನ್ನು ನಿಂದಿಸಿದ್ದರು ಎಂದು ತಿಳಿದುಬಂದಿದೆ.

ನಟಿ ವಿಚಾರಣೆ :
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪವಿತ್ರಾಗೌಡ ಅವರನ್ನು ಕೂಡ ಕರೆತರಲಾಗಿದ್ದು, ಆರ್‌.ಆರ್‌.ನಗರ ಠಾಣೆಯ ಪೊಲೀಸರು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

RELATED ARTICLES

Latest News