ಬೆಂಗಳೂರು, ಜು. 12: ಪತ್ನಿ ಅಪರ್ಣಾಳನ್ನು ಕಳೆದುಕೊಂಡ ನೋವಿನಲ್ಲಿ ಪತಿ ನಾಗರಾಜು ಅವರು ರಚಿಸಿದ ಶೋಕ ಕವನ
ಬೆಳಗಿಕೊಂಡಿರೆಂದು
ಕಿಡಿ ತಾಕಿಸಿ ಹೊರಟಿತು
ಹೆಣ್ಣು
ಚಿತ್ತು ತೆಗೆದು
ಬತ್ತಿಯ ನೆತ್ತಿ ಚೆನ್ನಾಗಿಸಿ
ತಿರುಪಿ ತಿದ್ದಿ
ಇರು
ತುಸುವಿರೆಂದು ಕರೆದರೂ
ನಿಲ್ಲದೆಯೇ
ಬೇರಾವುದೋ ಕರೆಗೆ
ತಣ್ಣಗೆ ಓಗೊಟ್ಟ ಮೇರೆ
ಯಲ್ಲಿ
ಒಂದೇ ಒಂದು
ನಿಮಿಷ
ಬಂದೇನೆಂದು ಕಡೆಗಳಿಗೆ
ಯ ಸೆರಗಿನ ಬೆನ್ನಿನಲ್ಲಿ
ಅಂದು.
ಕಾದಿದ್ದೇನೆ
ಈಗ ಬಂದಾಳೆಂದು
ಆಗ ಬಂದಾಳೆಂದು
ಮರಳಿ
ಜೀವ ತಂದಾಳೆಂದು
ಇದು
ಮೂರನೇ ದಿವಸ
ಇಷ್ಟಾಗಿ
ಬೆಳಗಲಿಟ್ಟ ಕಿರಿಸೊಡರ
ಬೆಳಕು ನಾನು
ಉರಿವುದಷ್ಟೇ ಕೆಲಸ
ಇರುವ ತನಕ. ನಾಗರಾಜ್ ಅವರ ಫೇಸ್‌ಬುಕ್ ಬರಹ
ಅಪರ್ಣಾ ಇಹಲೋಕದ ವ್ಯಾಪಾರವನ್ನು ತ್ಯಜಿಸಿ ಸ್ವರ್ಗಸ್ಥಳಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ನಾನು ಮತ್ತು ಅವಳ ನಾಲ್ಕನೇ ಹಂತದಲ್ಲಿದ್ದ ಶ್ವಾಸಕೋಶದ ಕ್ಯಾನರ್ ವಿರುದ್ಧ ಸೆಣಸುತ್ತಿದ್ದೇವು. ಈ ಹೋರಾಟದಲ್ಲಿ ನಾವಿಬ್ಬರೂ ಸೋತಿದ್ದೇವೆ. ಅತ್ಯಂತ ವಿಷಾದದಿಂದ ಈ ಮಾತುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಅಪರ್ಣಾಳಿಗೆ ಬರುವ ಅಕ್ಟೋಬರ್‌ಗೆ 58 ವರ್ಷ ತುಂಬುತ್ತಿತ್ತು. ಎಲ್ಲರ ಪ್ರೀತಿ ಸಹಕಾರ ಇರಲಿ ಎಂದು ಅವರ ಪತಿ ವಸ್ತಾರೆ ನಾಗರಾಜು ಅವರು ಅಪರ್ಣಾ ಅವರ ಅಂತಿಮ ವಿದಾಯದ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ನೋವು ತೋಡಿಕೊಂಡ ರೀತಿ.