Thursday, November 21, 2024
Homeರಾಜ್ಯ"ಕನ್ನಡ ನಾಮಫಲಕ ಅಳವಡಿಸಿಕೊಳ್ಳದಿದ್ದರೆ ಬೃಹತ್ ಕಂಪೆನಿಗಳಿಗೆ ಬೀಗ ಹಾಕ್ತಿವಿ" : ಎಚ್ಚರಿಕೆ

“ಕನ್ನಡ ನಾಮಫಲಕ ಅಳವಡಿಸಿಕೊಳ್ಳದಿದ್ದರೆ ಬೃಹತ್ ಕಂಪೆನಿಗಳಿಗೆ ಬೀಗ ಹಾಕ್ತಿವಿ” : ಎಚ್ಚರಿಕೆ

Kannada Board should be put in Karnataka

ಬೆಂಗಳೂರು, ಅ.25– ಕರ್ನಾಟಕದಲ್ಲಿ ವಹಿವಾಟಿದ್ದಾಗ ಕನ್ನಡದಲ್ಲೇ ನಾಮಫಲಕ ಪ್ರದರ್ಶಿಸಬೇಕೆಂದು ಬೃಹತ್ ಕಂಪೆನಿಗಳಿಗೆ ಹೈಕೋರ್ಟ್ ಸೂಚನೆ ನೀಡಿರುವ ಕ್ರಮವನ್ನು ಪಾಲಿಸದಿದ್ದರೆ ಕಂಪೆನಿಗಳ ಮುಂದೆ ಬೃಹತ್ ಹೋರಾಟ ನಡೆಸಬೇಕಾಗುತ್ತದೆ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ರೀಟೇಲರ್ರಸ ಅಸೋಸಿಯೇಷನ್ ಆಫ್ ಇಂಡಿಯಾ, ಆದಿತ್ಯ ಬಿರ್ಲಾ, ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್, ಆಡಿದಾಸ್ ಇಂಡಿಯಾ ಮಾರ್ಕೆಟಿಂಗ್ ಪ್ರೈ.ಲಿಮಿಟೆಡ್, ಟೈಟಾನ್ ಕಂಪೆನಿ ಲಿಮಿಟೆಡ್ ಸೇರಿ 24 ಖಾಸಗಿ ಸಂಸ್ಥೆಗಳು ಕನ್ನಡದಲ್ಲಿ ನಾಮಫಲಕ ಅಳವಡಿಸಿಕೊಳ್ಳಬೇಕೆಂದು ಹೈಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ, ಕನ್ನಡಪರ ಹೋರಾಟಗಾರರಾದ ಡಾ.ಸಾ.ರಾ.ಗೋವಿಂದು ಅವರು ಈ ಸಂಜೆಯೊಂದಿಗೆ ಮಾತನಾಡಿ, ಕನ್ನಡ ವಿರೋಧಿ ಧೋರಣೆಯ ಕಂಪೆನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಳೆಯಿಂದ ಕನ್ನಡದಲ್ಲಿ ನಾಮಫಲಕ ಅಳವಡಿಸಿಕೊಳ್ಳದಿದ್ದರೆ ಕಂಪೆನಿಗಳ ಮುಂದೆ ಹೋರಾಟ ಮಾಡಲಾಗುವುದು. ಇಂತಹ ಕನ್ನಡ ವಿರೋಧಿ ಕಂಪೆನಿಗಳೊಂದಿಗೆ ಕನ್ನಡಿಗರಾರೂ ವಹಿವಾಟು ನಡೆಸದಂತೆ ಕರೆ ನೀಡಲಾಗುವುದು ಎಂದು ಅವರು ಹೇಳಿದರು.

ಕನ್ನಡ ಫಲಕಗಳಿಗಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡಿ ನ್ಯಾಯ ಪಡೆಯಬೇಕಾಗಿರುವುದು ದುರದೃಷ್ಟಕರವಾಗಿದೆ. ಕರ್ನಾಟಕದಲ್ಲಿದ್ದ ಮೇಲೆ ಕನ್ನಡ ನಾಮಫಲಕಗಳ ಅಳವಡಿಕೆ ಕಡ್ಡಾಯ. ನ್ಯಾಯಾಲಯದ ಸೂಚನೆ ನಂತರವೂ ಈ ಕಂಪೆನಿಗಳು ಕನ್ನಡ ನಾಮಫಲಕಗಳನ್ನು ಅಳವಡಿಸಲು ಹಿಂದೇಟು ಹಾಕಿದರೆ ನಾವು ನಾಳೆಯಿಂದಲೇ ಆ ಕಂಪೆನಿಗಳ ಮುಂದೆ ಬೃಹತ್ ಹೋರಾಟ ಮಾಡುತ್ತೇವೆ. ಅವರು ಇದಕ್ಕೆ ಬಗ್ಗದಿದ್ದರೆ ಕಂಪೆನಿಗಳಿಗೆ ಬೀಗ ಹಾಕಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕದಲ್ಲಿ ವಾಣಿಜ್ಯ ವಹಿವಾಟು ನಡೆಸುವ ಈ ಕಂಪನಿಗಳು ಇಲ್ಲಿನ ನೆಲ, ಜಲ ಸೇರಿದಂತೆ ಎಲ್ಲವನ್ನೂ ಬಳಸಿಕೊಂಡು ಲಾಭ ಗಳಿಸಿಕೊಳ್ಳುತ್ತಿವೆ. ಆದರೆ, ನಾಡಿನ ಭಾಷೆಯನ್ನು ನಿರ್ಲಕ್ಷ್ಯ ಮಾಡುವ ಇಂತಹ ಕಂಪೆನಿಗಳು ಇರುವುದಕ್ಕೆ ಯೋಗ್ಯವಲ್ಲ ಎಂದು ಕಿಡಿಕಾರಿದ್ದಾರೆ.

ಕನಿಷ್ಟ ಕನ್ನಡದಲ್ಲಿ ನಾಮಫಲಕ ಅಳವಡಿಸಿಕೊಳ್ಳುವುದಿಲ್ಲವೆಂದರೆ ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನೆಷ್ಟು ದಿನ ನಾವು ಸಹಿಸಿಕೊಳ್ಳಲು ಸಾಧ್ಯ? ನಮ ಸಿಟ್ಟು ರಟ್ಟೆಗೆ ಬರುವಷ್ಟರಲ್ಲಿ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸಾ.ರಾ.ಗೋವಿಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಹೈಕೋರ್ಟ್ ನೀಡಿರುವ ಸೂಚನೆ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡವೇ ಪ್ರಧಾನ ಎಂಬುದನ್ನು ಸಾಬೀತು ಮಾಡಿದೆ. ಕೂಡಲೇ ಈ ಕಂಪೆನಿಗಳು ಎಚ್ಚೆತ್ತು ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಆ ಕಂಪೆನಿಗಳೊಂದಿಗೆ ಯಾವುದೇ ವ್ಯಾಪಾರ-ವಹಿವಾಟುಗಳನ್ನೂ ಕನ್ನಡಿಗರು ಮಾಡಬಾರದು ಎಂದು ಅವರು ಹೇಳಿದ್ದಾರೆ.

ನ್ಯಾಯಾಲಯ ಸೂಚನೆ ನೀಡಿದ 24 ಕಂಪೆನಿಗಳಲ್ಲದೆ ರಾಜಧಾನಿ ಬೆಂಗಳೂರಿನಲ್ಲಿರುವ ಎಲ್ಲ ಕಂಪೆನಿಗಳೂ ಕನ್ನಡದಲ್ಲಿ ನಾಮಫಲಕಗಳನ್ನು ಈ ಕೂಡಲೇ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಬೇಕು ಎಂದು ಅವರು ಹೇಳಿದ್ದಾರೆ.

RELATED ARTICLES

Latest News