Thursday, July 4, 2024
Homeರಾಜ್ಯಕನ್ನಡದ ಖ್ಯಾತ ಸಾಹಿತಿ ನಾಡೋಜ ಡಾ.ಕಮಲ ಹಂಪನಾ ಇನ್ನಿಲ್ಲ

ಕನ್ನಡದ ಖ್ಯಾತ ಸಾಹಿತಿ ನಾಡೋಜ ಡಾ.ಕಮಲ ಹಂಪನಾ ಇನ್ನಿಲ್ಲ

ಬೆಂಗಳೂರು,ಜೂ.22-ಕನ್ನಡದ ಖ್ಯಾತ ಸಾಹಿತಿ , ಮಹಿಳಾ ಪರ ಗಟ್ಟಿ ದನಿಯಾಗಿದ್ದ ನಾಡೋಜ ಡಾ.ಕಮಲಹಂಪನಾ(89) ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಜರಾಜೇಶ್ವರಿನಗರದಲ್ಲಿರುವ ಅವರ ಹಿರಿಯ ಪುತ್ರಿ ರಾಜಶ್ರೀ ಅವರ ನಿವಾಸದಲ್ಲಿ ಇದ್ದ ಅವರಿಗೆ ನಿನ್ನೆ ರಾತ್ರಿ ಹೃದಯಾಘಾತವಾಗಿದ್ದು ಅವರನ್ನು ಎಂಎಸ್‌‍ ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನಜಾವ ಮೃತಪಟ್ಟಿದ್ದಾರೆ.

ಮೃತರು ಪತಿ ಸಾಹಿತಿ ಹಂಪ ನಾಗರಾಜಯ್ಯ, ಮೂವರು ಮಕ್ಕಳು ಹಾಗೂ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ. ಕಮಲಾಹಂಪನಾ ಅವರ ಪಾರ್ಥಿವ ಶರೀರವನ್ನು ರಾಜಾಜಿನಗರದ 18ನೇ ಕ್ರಾಸ್‌‍ನಲ್ಲಿರುವ ಅವರ ಸ್ವಂತ ನಿವಾಸ ಸನಿಮಗೆ ತರಲಾಗುವುದು. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಮಲಾ ಹಂಪನಾ ಅವರ ಇಚ್ಛೆಯಂತೆ ರಾಮಯ್ಯ ಮೆಡಿಕಲ್‌ ಕಾಲೇಜಿಗೆ ದೇಹದಾನ ಮಾಡಲಾಗುವುದು ಅವರ ಕುಟುಂಬದವರು ತಿಳಿಸಿದ್ದಾರೆ.ಕಮಲಾ ಹಂಪನಾ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ, ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಸಚಿವರು, ಶಾಸಕರು ಸೇರಿದಂತೆ ಅನೇಕ ಗಣ್ಯರು, ಸಾಹಿತ್ಯಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಬೆಂಗಳೂರಿನ ದೇವನಹಳ್ಳಿಯಲ್ಲಿ 1931ರ ಅಕ್ಟೋಬರ್‌ 28ರಂದು ಶ್ರೀರಂಗಧಾಮ ನಾಯಕ್‌ ಮತ್ತು ಲಕ್ಷ್ಮಮ ದಂಪತಿಯ ಪುತ್ರಿಯಾಗಿ ಕಮಲ ಹಂಪನಾ ಜನಿಸಿದರು.ತುಮಕೂರು ಮತ್ತು ಮೈಸೂರಿನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ 1956ರಲ್ಲಿ ಕನ್ನಡ ಅಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದರು.

ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾನಿಲಯಗಳಲ್ಲಿ ಸೇವೆ ಸಲ್ಲಿಸಿದ್ದರು. ತಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿದ್ದ ಪ್ರೊ.ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿಯಾಗಿದ್ದಾರೆ.

ಅವರ ಧೀರ್ಘಕಾಲಿಕ ಹಾಗೂ ಮೌಲಿಕ ಕೊಡುಗೆಗೆ ಸಂದ ಗೌರವಗಳಲ್ಲಿ ಪ್ರಮುಖವಾದುವು ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷತೆ, ಸರ್ಕಾರದ ಪುರಸ್ಕಾರವಾದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ.

ಡಾ.ಕಮಲಾ ಹಂಪನಾ ಅವರ ಬರವಣಿಗೆಯ ಹರಹು ದೊಡ್ಡದು. ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್‌ ಸಂಪುಟಗಳು ಹೊರಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ಪ್ರಕಟವಾದ 60ಕ್ಕೂ ಹೆಚ್ಚು ಕೃತಿಗಳಲ್ಲಿ ಸೃಜನಶೀಲ ಕೃತಿಗಳೂ ಸೇರಿವೆ.

ನಾಟಕ, ಕತೆಗಳು ಮತ್ತು ವಚನಗಳಲ್ಲಿ ಸೃಷ್ಟಿಶಕ್ತಿಯ ವಿನ್ಯಾಸ ಕೆನೆಕಟ್ಟಿದೆ. ಬಿಂದಲಿ, ಬುಗುಡಿ ಹಾಗೂ ಬಯಲು ಇವು ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ ಹಾಗೂ ಅತ್ತಿಮಬ್ಬೆ ಅಂಡ್‌ ಚಾಲುಕ್ಯಾಸ್‌‍ ಹಾಗೂ ಜೈನಿಸಮ್‌ ಅಂಡ್‌ ಅದರ್‌ ಎಸ್ಸೇಸ್‌‍ ಎಂಬ ಎರಡು ಇಂಗ್ಲಿಷ್‌ ಪುಸ್ತಕಗಳನ್ನು ರಚಿಸಿದ್ದಾರೆ.

ಜೀವಪರ ಸಂವೇದನೆ, ಸಾಮಾಜಿಕ ಬದ್ಧತೆ, ಸಾಂಸೃತಿಕ ಕಾಳಜಿಯನ್ನು ಪ್ರಭಾವಶಾಲಿಯಾಗಿ ಬಿಂಬಿಸುವ ಕಮಲಾ ಹಂಪನಾ ಕನ್ನಡದ ಹೆಮೆ. ಕರ್ನಾಟಕ ಸರ್ಕಾರ ಅವರ ಕುರಿತ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದೆ. ಜಗತ್ತಿನ ಆಯ್ದು ಆದರ್ಶ ಜೋಡಿಗಳನ್ನು ಆಧರಿಸಿ ಜರ್ಮನಿಯ ಯಾಸೇಮಿನ್‌ ನಿರ್ದೇಶಿಸಿರುವ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರದಲ್ಲಿ ಇಡೀ ಭಾರತದ ಪರವಾಗಿ ಕಮಲಾ-ಹಂಪನಾ ಜೋಡಿ ಆಯ್ಕೆಯಾಗಿ ಸೇರಿರುವುದು. ಇವೆಲ್ಲದಕ್ಕೂ ಕಿರೀಟಪ್ರಾಯವಾಗಿದೆ.

ಕಮಲ ಹಂಪನಾ ಪಟ್ಟ ಶ್ರಮ, ನಡೆಸಿದ ನಿರಂತರ ಹೋರಾಟ, ಮಾಡಿದ ಸಾಧನೆಗಳು ಹಲವಾರು. ಅವರ ಪರಿಶ್ರಮದ ಫಲವಾಗಿ ಕರ್ನಾಟಕ ಸರ್ಕಾರ ಪ್ರತಿವರ್ಷ ಲೇಖಕಿಯೊಬ್ಬರಿಗೆ ಮೂರು ಲಕ್ಷ ನಗದನ್ನೂ ಒಳಗೊಂಡ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು ನೀಡುತ್ತಿದೆ.

ಅವರ ಪ್ರಯತ್ನದಿಂದಲೇ ಮಹಿಳಾ ವಿಶ್ವವಿದ್ಯಾಲಯ ಸಾಕಾರಗೊಂಡಿತು. ವೀರಮಹಿಳೆ ರಾಣಿ ಅಬ್ಬಕ್ಕದೇವಿಯ ಪ್ರತಿಮೆ ಪ್ರತಿಷ್ಠಾಪನೆಗೊಂಡಿತು. ಬೇರು ಬೆಂಕಿ ಬಿಳಲು ಬೃಹತ್‌ ಗ್ರಂಥ ಕಮಲಾ ಹಂಪನಾ ಅವರ ಜೀವನಯಾನದ ಹೃದಯಸ್ಪರ್ಶಿ ಸಂಕಥನವಾಗಿದೆ.

RELATED ARTICLES

Latest News