ಬೆಳಗಾವಿ,ಫೆ.22– ಬಸ್ ಚಾಲಕರೊಬ್ಬರ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹದೇವ್ ಹಲ್ಲೆಗೊಳಗಾದ ಬಸ್ ಚಾಲಕರು ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಬೆಳಗಾವಿಯಿಂದ ಸುಳೇಬಾವಿಗೆ ಹೋಗುತ್ತಿದ್ದಾಗ ಹುಡುಗ, ಹುಡುಗಿ ಮರಾಠಿಯಲ್ಲಿ ಟಿಕೆಟ್ ಕೇಳಿದ್ದಾರೆ. ಆ ವೇಳೆ ನನಗೆ ಮರಾಠಿ ಬರಲ್ಲ ಕನ್ನಡದಲ್ಲಿ ಮಾತನಾಡಿ ಎಂದು ಕಂಡಕ್ಟರ್ ಹೇಳಿದ್ದಕ್ಕೆ ಪ್ರತಿಯಾಗಿ ಬಸ್‌ನಲ್ಲಿದ್ದ ಮರಾಠಿ ಯುವಕರು ಕಂಡಕ್ಟಗೆರ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಬಸ್ ಒಳಗೆ ಹಿಗ್ಗಾಮುಗ್ಗಾ ಥಳಿಸಿ ಮರಾಠಿ ಭಾಷೆಯಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದಲ್ಲದೇ ಸ್ನೇಹಿತರಿಗೆ ಪೋನ್ ಮಾಡಿ ನಿಲ್ದಾಣದ ಬಳಿ ಬರುವಂತೆ ಹೇಳಿದ್ದಾರೆ.
ಮುಂದಿನ ನಿಲ್ದಾಣವಾದ ಬಾಳೆಕುಂದ್ರಿಯ ಕೆಎಚ್ ಗ್ರಾಮದ ನಿಲ್ದಾಣಕ್ಕೆ ಬಸ್ ಬರತ್ತಿದ್ದಂತೆ ಇನ್ನಷ್ಟು ಮಂದಿ ಮರಾಠಿ ಪುಂಡರು ಅಲ್ಲಿಗೆ ಬಂದು ಏಕಾಏಕಿ ಬಸ್ ಹತ್ತಿ ಮತ್ತೆ ಚಾಲಕ ಹಾಗೂ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿ ಶರ್ಟ್ ಹಿಡಿದು ಎಳೆದಾಡಿ ಕುತ್ತುಗೆ ಹಿಚುಕಿ ಕೊಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದರು.
ಈ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ನಿನ್ನೆ ಮಧ್ಯಾಹ್ನವೇ ಪ್ರಕರಣ ದಾಖಲಾಗಿದ್ದು, ಹಲ್ಲೆಗೊಳಗಾದ ಕಂಡಕ್ಟರ್ ಮತ್ತು ಚಾಲಕರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ನಾಲ್ವರನ್ನು ಬಂಧಿಸಿ ಉಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಈ ಮಧ್ಯೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮರಾಠಿ ಪುಂಡರ ವಿರುದ್ಧ ಕೆರಳಿದ್ದು, ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಹಲ್ಲೆಗೆ ಕಾರಣವಾದ ಬಾಳೆಕುಂದ್ರಿ ಗ್ರಾಮದತ್ತ ಬಾಳೆಕುಂದ್ರಿ ಚಲೊ ಪ್ರತಿಭಟನೆಯನ್ನು ಇಂದು ನಡೆಸಿದರು.