ಬೆಂಗಳೂರು, ಸೆ. 10: ಗಲಭೆ ಪೀಡಿತ ನೇಪಾಳದ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಮೂಲದ ದಂಪತಿ ಸೇರಿದಂತೆ ಹಲವಾರು ಕನ್ನಡಿಗರು ಸಿಲುಕಿಕೊಂಡಿದ್ದು, ಊಟ ತಿಂಡಿ ಇಲ್ಲದೆ ಪರದಾಡುವಂತಾಗಿದೆ.ನೇಪಾಳ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವುದಾಗಿ ದಂಪತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಶಾ ಫೌಂಡೇಶನ್‌ನಿಂದ 130 ಜನರೊಂದಿಗೆ ಬೆಂಗಳೂರಿನ ರಜನಿ ಮಸ್ಕಿ ಮತ್ತು ರಘುವೀರ್ ಯಾವಗಲ್ ದಂಪತಿ ಮಾನಸಸರೋವರಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಸದ್ಯ ನೇಪಾಳದಲ್ಲಿ ಭುಗಿಲೆದ್ದಿರುವ ಉದ್ವೇಗದಿಂದಾಗಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 24 ಗಂಟೆಗೂ ಹೆಚ್ಚು ಕಾಲ ಸಿಲುಕಿಹಾಕಿಕೊಂಡಿದ್ದಾರೆ.
ನಮಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ನಮ್ಮನ್ನು ಹೊರಗೆ ಬಿಡುತ್ತಿಲ್ಲ. ಊಟವಿಲ್ಲ, ನೀರಿಲ್ಲ ಮತ್ತು ತಿನ್ನಲು ಏನನ್ನಾದರೂ ಖರೀದಿಸಲು ಸಹ ಯಾವುದೇ ಅಂಗಡಿಗಳು ತೆರೆದಿಲ್ಲ ಎಂದು ಅವರು ತಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವವರಲ್ಲಿ ಅನೇಕರು ಕರ್ನಾಟಕದವರಿದ್ದು, ವಿಶೇಷವಾಗಿ ಬೆಂಗಳೂರಿನವರು. ಎಲ್ಲರೂ ಮನೆಗೆ ಹಿಂದಿರುಗಲು ಸಹಾಯಕ್ಕಾಗಿ ಅಂಗಲಾಚುತ್ತಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ನಾವು ರಾತ್ರಿ 10.30 ರ ಸುಮಾರಿಗೆ ಹೋಟೆಲ್ ತಲುಪಿದೆವು. ಎಲ್ಲೆಡೆ ಹೊಗೆ ತುಂಬಿತ್ತು, ಮರದ ಹಲಗೆಗಳು ಮತ್ತು ಟೈರ್‌ಗಳು ಉರಿಯುತ್ತಿದ್ದವು. ಬೀದಿಗಳಲ್ಲಿ ಹೆಚ್ಚು ಜನರಿರಲಿಲ್ಲ ಎಂದು ರಜನಿ ಹೇಳಿದ್ದಾರೆ. ಮರುದಿನ ಅಂದರೆ ಮಂಗಳವಾರ ಬೆಂಗಳೂರಿಗೆ ಮಧ್ಯಾಹ್ನ 1 ಗಂಟೆಗೆ ವಿಮಾನ ಇದ್ದಿದ್ದರಿಂದ ಅವರು ಏರ್‌ಪೋರ್ಟ್‌ಗೆ ತೆರಳಿದರು. ಆದರೆ ಅಷ್ಟರಲ್ಲಿ ಗೇಟ್‌ಗಳು ಮುಚ್ಚಲಾಗಿತ್ತು. ವಿಮಾನಗಳು ರದ್ಧಾಗಿರುವುದನ್ನು ತಿಳಿದು ಬೇಸವಾಯಿತು ಎಂದಿದ್ದಾರೆ.
ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ಸಾವಿರಾರು ಜನರಿದ್ದು, ಅದರಲ್ಲಿ ಸುಮಾರು 200 ಜನರು ಕರ್ನಾಟಕದವರು ಇರಬಹುದು ಎಲ್ಲ ಕನ್ನಡಿಗರನ್ನ ಸುರಕ್ಷಿತವಾಗಿ ಕರೆಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಈ ಮಧ್ಯೆ, ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದು, ಎಲ್ಲರನ್ನೂ ಕ್ಷೇಮವಾಗಿ ವಾಪಸ್ ಕರೆಸಿಕೊಳ್ಳುತ್ತೇವೆ ಯಾವುದೇ ಆತಂಕ ಬೇಡ ಎಂದು ಅವರು X ಮಾಡಿದ್ದಾರೆ.