Tuesday, February 25, 2025
Homeಇದೀಗ ಬಂದ ಸುದ್ದಿತಂಟೆಗೆ ಬಂದ್ರೆ ಸುಮ್ಮನಿರಲ್ಲ : ಮರಾಠಿ ಪುಂಡರ ವಿರುದ್ಧ ಸಿಡಿದೆದ್ದ ಕನ್ನಡಿಗರು, ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ

ತಂಟೆಗೆ ಬಂದ್ರೆ ಸುಮ್ಮನಿರಲ್ಲ : ಮರಾಠಿ ಪುಂಡರ ವಿರುದ್ಧ ಸಿಡಿದೆದ್ದ ಕನ್ನಡಿಗರು, ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ

Kannadigas who had erupted against Marathi Goons

ಬೆಳಗಾವಿ,ಫೆ.25- ಭಾಷೆ ವಿವಾದವನ್ನು ಮುಂದಿಟ್ಟುಕೊಂಡು ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಗೂಂಡಾವರ್ತನೆ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದು, ಗಡಿ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ) ಹಾಗೂ ಪ್ರವೀಣ್ ಶೆಟ್ಟಿ ಬಣ ಪ್ರತ್ಯೇಕವಾಗಿ ಬೆಳಗಾವಿಯಲ್ಲಿ ಎಂಇಎಸ್‌ನ ಪುಂಡಾಟಿಕೆ ವಿರುದ್ಧ ಪ್ರತಿಭಟನೆ ನಡೆಸಿ ಸ್ವಾಭಿಮಾನಿ ಕನ್ನಡಿಗರನ್ನು ಕೆಣಕಿದರೆ ಹುಷಾರ್ ಎಂಬ ಸಂದೇಶವನ್ನು ರವಾನಿಸಿವೆ. ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎರಡೂ ಬಣದ ಸಾವಿರಾರು ಕಾರ್ಯಕರ್ತರು ಕೈಯಲ್ಲಿ ಕನ್ನಡ ಬಾವುಟ ಹಿಡಿದುಕೊಂಡು ಶಾಂತಿ, ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಕನ್ನಡಿಗರ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಅಬ್ಬರಿಸಿದರು.

ರಾಜಕೀಯವಾಗಿ ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್‌ನ ಮರಾಠಿ ಗೂಂಡಾಗಳ ದಬ್ಬಾಳಿಕೆಯನ್ನು ಶಾಶ್ವತವಾಗಿ ಕೊನೆಗಾಣಿಸುವ ಸಮಯ ಬಂದಿದೆ. ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಭಾಷೆ, ಗಡಿ, ನೆಲಜಲ ವಿಷಯ ಬಂದಾಗ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ರವಾನೆ ಮಾಡಿದರು.

ಬೆಳಗಾವಿಯಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡ ಭಾಷೆಗೆ ಇಲ್ಲಿ ಮೊದಲ ಆದ್ಯತೆ. ಹೊರಗಡೆಯಿಂದ ಬಂದಿರುವ ಮರಾಠಿಗರು ಕನ್ನಡ ಕಲಿತು ಸೌಹಾರ್ದತೆಯಿಂದ ಬದುಕಬೇಕೆ ವಿನಃ ಮರಾಠಿ ಕಲಿಯುವಂತೆ ಕನ್ನಡಿಗರನ್ನು ಒತ್ತಾಯಿಸುವುದನ್ನು ಸಹಿಸುವುದಿಲ್ಲ, ಬೆಳಗಾವಿಯ ನೆಲ ವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮಳಂತಹ ಧೀರರಿಗೆ ಜನ್ಮಕೊಟ್ಟ ನಾಡು ಎಂಬುದನ್ನು ಮರಾಠಿಗರು ಮರೆಯಬಾರದು ಎಂದು ಪ್ರತಿಭಟನಾನಿರತರು ಗುಡುಗಿದ್ದಾರೆ.

ಬೆಳಗಾವಿ ನಗರದಲ್ಲಿ ಎಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸುತ್ತಿದ್ದವು. ಭಾಷೆ ವಿವಾದವನ್ನು ಎಂಇಎಸ್ ಪುಂಡಾಟಿಕೆಯನ್ನು ವಿರೋಧಿಸಿ ಗಡಿನಾಡು ಬೆಳಗಾವಿ ಕನ್ನಡಿಗರ ಹೆಮ್ಮೆಯ ಪ್ರತೀಕವಾಗಿ ನಿಂತಿದ್ದ ಕನ್ನಡಪರ ಸಂಘಟನೆಗಳ ಹೋರಾಟವನ್ನು ಪಕ್ಷಾತೀತವಾಗಿ ಬೆಂಬಲಿಸಿದ್ದು, ವಿಶೇಷವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿ ನಗರದಾದ್ಯಂತ ಭಾರೀ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನಾನಿರತ ಕನ್ನಡಿಗರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, ಒಬ್ಬ ಕನ್ನಡಿಗ ಆಸ್ಪತ್ರೆಯಲ್ಲಿ ಕಣ್ಣೀರು ಹಾಕುವುದು ನೋಡಿ ಬಹಳಷ್ಟು ಹಿಂಸೆ ಅನ್ನಿಸಿತು ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಕಂಡಕ್ಟ‌ರ್ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಅವರಿಗೆ ಇನ್ನೂ ತುಂಬಾ ಎದೆ ನೋವಿದೆ. ನೋವು ಕಡಿಮೆಯಾಗಿಲ್ಲ ಎಂದು ಕಣ್ಣೀರು ಹಾಕಿದರು. ಇಲ್ಲಿನ ಜಿಲ್ಲಾಡಳಿತ ಈ ಕೃತ್ಯ ಎಸಗಿದವರ ವಿರುದ್ಧ ಮುಲಾಜಿಲ್ಲದೇ ಗೂಂಡಾ ಕಾಯ್ದೆ ಹಾಕಬೇಕು. ಆರು ತಿಂಗಳು ಇಲ್ಲವೇ ಒಂದು ವರ್ಷ ಅವರನ್ನು ಜೈಲಿನಲ್ಲಿಡಬೇಕು. ಅದೇ ರೀತಿ ಅವರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ನೀವು ಕಣ್ಣೀರು ಹಾಕಬೇಡಿ ಎಂದು ಕಂಡಕ್ಟರ್ ಅವರಿಗೆ ಹೇಳಿದ್ದೇನೆ. ಸರ್ಕಾರ ಅವರನ್ನು ಹೇಗೆ ನಡೆಸಿಕೊಳ್ಳುತ್ತದೆಯೋ ಗೊತ್ತಿಲ್ಲ. ಆದರೆ, ಇಲ್ಲಿ ಅವರಿಗೆ ಚಿಕಿತ್ಸೆ ಸರಿ ಇಲ್ಲ ಎಂದಾದರೆ ಬೆಂಗಳೂರಿನ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಅದರ ಸಂಪೂರ್ಣ ವೆಚ್ಚವನ್ನು ಕರವೇ ಭರಿಸಲಿದೆ. ಚಾಲಕ ತಮ್ಮ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಒಬ್ಬ ಚಾಲಕ, ನಿರ್ವಾಹಕರನ್ನು ಬಸ್‌ನಿಂದ ಕೆಳಗಿಳಿಸಿ ಬಣ್ಣ ಹಾಕಿ, ಅವರಿಗೆ ಹಾರ ಹಾಕಿ ಜೈ ಮಹಾರಾಷ್ಟ್ರ ಅಂತಾ ಘೋಷಣೆ ಕೂಗಿಸುತ್ತೀರಿ. ಇಡೀ ಬೆಳಗಾವಿಯಲ್ಲಿರುವ ಪ್ರತಿಯೊಬ್ಬ ಮರಾಠಿಗನ ಬಾಯಿಯಿಂದಲೂ ಕರ್ನಾಟಕಕ್ಕೆ ಜೈ ಎನಿಸುವ ಕಾಲ ಬೇಗ ಬರುತ್ತದೆ. ಇದನ್ನೆಲ್ಲ ಬಿಟ್ಟು ಬಿಡಿ. ಬೆಳಗಾವಿಯಲ್ಲಿ ಎಂಇಎಸ್ ಸಂಪೂರ್ಣ ಅಂತ್ಯವಾಗಿದೆ. ಆ ಹೊಟ್ಟೆ ಉರಿಗೆ ಇಂಥ ಆಟ ಶುರು ಮಾಡಿದ್ದಾರೆ. ಬೆಳಗಾವಿ ಅಷ್ಟೇ ಅಲ್ಲದೇ ಇಡೀ ಕರ್ನಾಟಕದಲ್ಲಿ ಎಂಇಎಸ್ ಇಲ್ಲದಂತೆ ಮಾಡೋವರೆಗೂ ಕರವೇ ಹೋರಾಟ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೋ ರಾಜ್ಯದಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾಧಿಕಾರಿ ಇಲ್ಲಿಯ ಆಡಳಿತ ಭಾಷೆ ಕನ್ನಡ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೋ ರಾಜ್ಯದಿಂದ ಬಂದು ಇಲ್ಲಿ ಕರ್ನಾಟಕದ ಬೆಳಗಾವಿ ಗಡಿ ವಿಚಾರ ಸುಪ್ರೀಂಕೋರ್ಟ್ ನಲ್ಲಿ ಇರುವಾಗ ಎಂಇಎಸ್‌ನವರು ಮರಾಠಿಯಲ್ಲಿ ದಾಖಲೆ ಕೊಟ್ಟರೆ ನಾಳೆ ಕರ್ನಾಟಕಕ್ಕೆ ಭಾರಿ ತೊಂದರೆ ಆಗುತ್ತದೆ. ನಿಮ್ಮ ಎಲ್ಲ ವ್ಯವಹಾರ, ಕಾಗದಪತ್ರಗಳನ್ನು ಕರ್ನಾಟಕದ ನೆಲದಲ್ಲಿ ನೀವು ಕನ್ನಡದಲ್ಲಿ ಕೊಡಬೇಕು. ಅವರು ಮರಾಠಿಯಲ್ಲಿ ಕೇಳುತ್ತಾರೆ. ಮತ್ತೊಬ್ಬರು ಮತ್ತೊಂದು ಭಾಷೆಯಲ್ಲಿ ಕೇಳುತ್ತಾರೆ ಎಂದರೆ ಜಿಲ್ಲಾಧಿಕಾರಿ ಕೊಡಬಾರದು ಎಂದು ಒತ್ತಾಯಿಸಿದರು.

ಕರವೇ ಮುಖಂಡ ಪ್ರವೀಣ್ ಶೆಟ್ಟಿ ಮಾತನಾಡಿ, ಎಂಇಎಸ್ ಮತ್ತು ಶಿವಸೇನೆಯ ಗೂಂಡಾಗಳು ಹಲ್ಲೆ ನಡೆಸಿ ಪೋಕೋ ಕೇಸ್ ಹಾಕಿದ್ದು ಕೇವಲ ಕಂಡಕ್ಟರ್ ಮೇಲೆ ಅಲ್ಲ, ಇಡೀ ಕರ್ನಾಟಕದ ಮೇಲೆ, ನಾವು ಕರ್ನಾಟಕದಲ್ಲಿದ್ದೀವೋ ಅಥವಾ ಬೇರೆ ರಾಜ್ಯದಲ್ಲಿದ್ದೀವೋ? ಮರಾಠಿ ಪುಂಡರು ಕನ್ನಡಿಗರ ಸ್ವಾಭಿಮಾನ ಹತ್ತಿಕ್ಕಲು ಬಿಡೋದಿಲ್ಲ, ಕಂಡಕ್ಟರ್ ವಿರುದ್ದ ಹಾಕಿರುವ ಕೇಸನ್ನು ವಾಪಸ್ಸು ಪಡೆದಯಬೇಕು ಮತ್ತು ಅದನ್ನು ಹಾಕಿದ ಇನ್‌ಸ್ಪೆಕ್ಟರ್‌ನ್ನು ಸಸ್ಪೆಂಡ್ ಮಾಡಬೇಕೆಂದು ಹೇಳಿದರು.

ಇಲ್ಲ ನಾನು ಹೋಗುತ್ತೇನೆ ಅನ್ನುವುದಾದರೆ ಇಲ್ಲಿ ಕೆಲಸ ಮಾಡುವುದು ಸರಿಯಲ್ಲ. ನಿಮ್ಮ ರಾಜ್ಯಕ್ಕೆ ವಾಪಸ್ ಹೋಗುವವರೆಗೂ ಕರವೇ ಹೋರಾಟ ಮಾಡಲಿದೆ. ಅದು ಆಗೋದು ಬೇಡ ಎಂದರೆ ಕನ್ನಡದಲ್ಲಿ ಆಡಳಿತ ನಡೆಸಬೇಕು. ಅದನ್ನು ಬಿಟ್ಟು ಮರಾಠಿಗರನ್ನು ಓಲೈಸಲು ಮುಂದಾದರೆ ಜಿಲ್ಲಾಧಿಕಾರಿ ವಿರುದ್ದ ಇಡೀ ಕರ್ನಾಟಕದಲ್ಲಿ ಕರವೇ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.

RELATED ARTICLES

Latest News