ಕೊಪ್ಪಳ,ಏ.15- ಜಾತಿಗಣತಿಯ ವರದಿಯನ್ನಾಧರಿಸಿಯೇ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಮೀಸಲಾತಿ ಪರಿಷ್ಕರಣೆಯಾಗಬೇಕಾದರೆ ಮತ್ತೊಂದು ಆಯೋಗ ರಚನೆಯಾಗಬೇಕಿದೆ ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರೂ ಆಗಿರುವ ಬಸವರಾಜರಾಯರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ಆಯೋಗ ನಡೆಸಿದ ಸಮೀಕ್ಷೆಯ ವರದಿ ಸರ್ಕಾರದ ಬಳಿ ಇದೆ. ಅದರ ಅಧ್ಯಯನ ನಡೆಯುತ್ತಿದೆ. ಇದೇ 17 ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಶಿಯಲ್ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಇದ್ದಾರೆ. ಅವರು ಯಾವುದೇ ಸಮುದಾಯಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.
ಜಾತಿಗಣತಿಗೆ ಸಂಬಂಧಪಟ್ಟಂತಹ ಮಾಹಿತಿಗಳು ಸತ್ಯವೋ, ಸುಳ್ಳೋ ಗೊತ್ತಿಲ್ಲ, ಆತುರಕ್ಕೆ ಬಿದ್ದು ವ್ಯತಿರಿಕ್ತವಾಗಿ ಮಾತನಾಡಬಾರದು. ಲಿಂಗಾಯತ-ವೀರಶೈವ ಸಮುದಾಯ ಒಂದು ಕೋಟಿಗೂ ಹೆಚ್ಚಿನ ಜನಸಂಖ್ಯೆಯಿದೆ. ಆದರೆ ಸಮೀಕ್ಷೆ ವೇಳೆ ಉಪಜಾತಿಗಳು ಲಿಂಗಾಯಿತ-ವೀರಶೈವ ಎಂದು ಬರೆಸಬೇಕಿತ್ತು. ಸರಿಯಾಗಿ ನಮೂದಿಸದೇ ಇರುವುದು ಯಾರ ತಪ್ಪು? ಎಂದು ಪ್ರಶ್ನಿಸಿದರು.
ಸಂಪುಟದಲ್ಲಿ ಚರ್ಚೆ ಮಾಡಿದ ಬಳಿಕ ಈ ಉಪಪಂಗಡಗಳನ್ನು ಸೇರ್ಪಡೆ ಮಾಡುವ ತಿದ್ದುಪಡಿಗಳನ್ನು ಮಾಡಲು ಅವಕಾಶವಿದೆ. ಲಿಂಗಾಯತರು ವೀರಶೈವ ಸಮುದಾಯದ ಶಾಸಕರು, ಪ್ರಮುಖರ ಸಭೆಯ ಬಗ್ಗೆ ತಮಗೆ ಮಾಹಿತಿ ಇಲ್ಲ, ಬಹುಶಃ ಶ್ಯಾಮನೂರು ಶಿವಶಂಕರಪ್ಪ ಅವರಂತಹ ಹಿರಿಯರು ಸಭೆ ಕರೆಯಬಹುದು. ವರದಿಯ ಬಗ್ಗೆ ಶಂಕರಬಿದರಿ ಮಾತನಾಡಿರುವುದನ್ನು ನೋಡಿದ್ದೇನೆ. ಅವರ ಜೊತೆಯೂ ನಾನು ಚರ್ಚೆ ಮಾಡುತ್ತೇನೆ ಎಂದರು.
ದೇಶದಲ್ಲಿ ಜಾತಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಅವಕಾಶವಿಲ್ಲ. ಸಂವಿಧಾನದ ಪರಿಚ್ಛೇದ-16 ಉಪಕಲಂ-4 ರ ಅನುಸಾರ ಪ್ರವರ್ಗಗಳೆಂದು ಪರಿಗಣಿಸಿದರೆ ಮಾತ್ರ ಮೀಸಲಾತಿ ನೀಡಲು ಸಾಧ್ಯ. ಯಾವ ಜಾತಿಯನ್ನು ಬೇಕಾದರೂ ಪ್ರವರ್ಗಕ್ಕೆ ಸೇರಿಸಲು ಸರ್ಕಾರಕ್ಕೆ ಅವಕಾಶವಿದೆ. ಈ ಹಿಂದೆ ವೆಂಕಟಸ್ವಾಮಿ ಆಯೋಗದ ವರದಿಯನ್ನು ಆಗಿನ ಸರ್ಕಾರ ತಿರಸ್ಕಾರ ಮಾಡಿತ್ತು. ಅನಂತರ ಚಿನ್ನಯಲ್ಲಪ್ಪರೆಡ್ಡಿ ವರದಿಯನ್ನು ಆಧರಿಸಿ ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪ್ರವರ್ಗ ಪಟ್ಟಿಗೆ ಸೇರಿಸಿ ಶೇ.4 ರಷ್ಟು ಮೀಸಲಾತಿ ನೀಡಲಾಯಿತು. ಆ ಸಮುದಾಯದಲ್ಲೂ ಹಿಂದುಳಿದವರು, ಆರ್ಥಿಕವಾಗಿ ಸಂಕಷ್ಟದಲ್ಲಿರುವವರು ಇದ್ದಾರೆ. ಧರ್ಮ, ಜಾತಿ ಆಧಾರದ ಮೇಲೆ ಸಮಾಜ ವಿಭಜಿಸುವುದು ಸರಿಯಲ್ಲ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕಿದೆ ಎಂದರು.
ಕಾಂತರಾಜು ಆಯೋಗದ ವರದಿ ಆಧರಿಸಿ ರಾಜ್ಯದಲ್ಲಿ ಶೇ.85.1ರಷ್ಟು ಮಿಸಲಾತಿ ನೀಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ವರದಿಯನ್ನು ಆಧರಿಸಿ ಏಕಾಏಕಿ ಮೀಸಲಾತಿ ನೀಡಲು ಅವಕಾಶವಿಲ್ಲ, ಬದಲಾಗಿ ಮತ್ತೊಂದು ಆಯೋಗ ಮಾಡಬೇಕು. ಯಾವ ಜಾತಿಗಳನ್ನು, ಯಾವ ಪ್ರವರ್ಗಕ್ಕೆ ಸೇರಿಸಬೇಕು ಎಂಬುದನ್ನು ನಿರ್ಧರಿಸಿ ಮೀಸಲಾತಿಯನ್ನು ಮರುಪರಿಷ್ಕರಣೆ ಮಾಡಬೇಕು. ಅನಂತರ ಅದನ್ನು ಸಂವಿಧಾನದ ಷಡ್ಯೂಲ್-9ಕ್ಕೆ ಸೇರ್ಪಡೆ ಮಾಡಬೇಕು. ಆಗ ಮೀಸಲಾತಿ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ ಮೀಸಲಾತಿ ಮಿತಿ ಶೇ.50 ದಾಟುವಂತಿಲ್ಲ. ತಮಿಳುನಾಡು ಶೇ.69 ರಷ್ಟು, ಜಾರ್ಖಂಡ್ ಶೇ.55 ರಷ್ಟು ಮೀಸಲಾತಿ ನೀಡಿವೆ. ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಆ ಎರಡು ರಾಜ್ಯಗಳಿಗೆ ಮೀಸಲಾತಿ ಹೆಚ್ಚಳಕ್ಕೆ ಅವಕಾಶ ನೀಡಿತ್ತು. ಕೇಂದ್ರ ಸರ್ಕಾರ ಇಡಬ್ಲ್ಯೂಎಸ್ ಮೂಲಕ ಶೇ.10 ರಷ್ಟು ಮೀಸಲಾತಿ ನೀಡಿದೆ. ಇದನ್ನೂ ಕೂಡ ಪರಿಗಣಿಸಬೇಕಿದೆ ಎಂದರು.
ತುಂಬಾ ಜನರಿಗೆ 2-ಎ, 3-ಎ, 3-ಬಿ ಎಂಬ ವರ್ಗಗಳ ಬಗ್ಗೆಯೇ ಮಾಹಿತಿ ಇಲ್ಲ, ರಾಜ್ಯದಲ್ಲಿ ಬ್ರಾಹ್ಮಣ, ನಗರ್ತ, ಜೈನ ಹೊರತುಪಡಿಸಿ ಒಕ್ಕಲಿಗ, ಲಿಂಗಾಯತ, ವೀರಶೈವ ಸೇರಿದಂತೆ ಎಲ್ಲಾ ಜಾತಿಗಳೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿವೆ. ಮೀಸಲಾತಿ ಪ್ರಮಾಣದಲ್ಲಷ್ಟೇ ವ್ಯತ್ಯಾಸವಿದೆ. ಮೀಸಲಾತಿ ಪಟ್ಟಿಯಲ್ಲಿರುವುದರಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಆದರೆ ಆದಾಯದ ಮಿತಿ 8 ಲಕ್ಷ ಇದೆ ಎಂದು ಹೇಳಿದರು.
ಕಾಂತರಾಜು ಆಯೋಗದ ವರದಿಯಿಂದ ಎಲ್ಲಾ ಸಮುದಾಯಗಳಿಗೂ ಒಳ್ಳೆಯದಾಗಲಿದೆ. ಅನಗತ್ಯವಾಗಿ ಗೊಂದಲ ಸೃಷ್ಟಿಸಬಾರದು. ಮೀಸಲಾತಿ ಪರಿಷ್ಕರಣೆಯಾದರೂ ಕೂಡ ಉದ್ಯೋಗ ಸಿಗುವುದು ಕಷ್ಟಸಾಧ್ಯ. ರಾಜ್ಯದಲ್ಲಿರುವುದೇ 7,10,000 ಮಂಜೂರಾದ ಹುದ್ದೆಗಳು. ಅದರಲ್ಲಿ 3.50 ಲಕ್ಷ ಶಿಕ್ಷಕರೇ ಇದ್ದಾರೆ. ಸರ್ಕಾರಿ ನೌಕರಿಯ ಮೀಸಲಾತಿ ಅಂತಹ ಪರಿಣಾಮ ಬೀರುವುದಿಲ್ಲ ಎಂದರು.
ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ. ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ಬಡಿಗೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೀಡಿರುವ ಹೇಳಿಕೆ ಆಕ್ಷೇಪಾರ್ಹ. ಇದು ಶಾಸಕರಾಗಿರುವವರ ಬಾಯಲ್ಲಿ ಬರುವ ಮಾತಲ್ಲ, ಅವರು ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.