ಮರಾಠ ನಿಗಮ ವಿರುದ್ಧ ಕನ್ನಡಿಗರ ಕಿಚ್ಚು : ಸಾವಿರಾರು ಹೋರಾಟಗಾರರು ಪೊಲೀಸರ ವಶಕ್ಕೆ

Spread the love

ಬೆಂಗಳೂರು, ಡಿ.5- ಮರಾಠ ಅಭಿವೃದ್ಧಿ ನಿಗಮದ ವಿರುದ್ಧ ಕನ್ನಡಿಗರ ಕಿಚ್ಚು ಹೆಚ್ಚಾಗಿದ್ದು, ನಿಗಮ ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಕನ್ನಡ ಪರ ಸಂಘಟನೆಗಳ ಮುಖಂಡರಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಟಿ.ಎ.ನಾರಾಯಣಗೌಡ, ಕೆ.ಆರ್.ಕುಮಾರ್, ಪ್ರವೀಣ್‍ಕುಮಾರ್ ಶೆಟ್ಟಿ, ಶಿವರಾಮೇಗೌಡ ಸೇರಿದಂತೆ ಸಾವಿರಾರು ಕಾರ್ಯಕರ್ತರನ್ನು ವಿವಿಧೆಡೆ ಪೊಲೀಸರು ವಶಕ್ಕೆ ಪಡೆದರು.

ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಒಕ್ಕೂಟ ಕರೆ ಕೊಟ್ಟಿದ್ದ ರಾಜ್ಯ ಬಂದ್‍ಗೆ ಇಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ವಿವಿಧ ಜಿಲ್ಲೆಗಳಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ ಕಾವು ಹೆಚ್ಚಾಗಿತ್ತು. ರಾಜಧಾನಿ ಬೆಂಗಳೂರಿನ ಟೌನ್‍ಹಾಲ್ ಬಳಿ ಪ್ರತಿಭಟನೆ, ಧರಣಿ ನಡೆಸಲು ಮುಂದಾದ ವಾಟಾಳ್ ನಾಗರಾಜ್, ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಸಾ.ರಾ.ಗೋವಿಂದು, ಕನ್ನಡ ಸೇನೆಯ ಕೆ.ಆರ್.ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದರೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಟಿ.ಎ.ನಾರಾಯಣಗೌಡ ಹಾಗೂ ಕರವೇ ಕಾರ್ಯಕರ್ತರನ್ನು ಮೌರ್ಯ ವೃತ್ತದ ಬಳಿ ಪೊಲೀಸರು ವಶಕ್ಕೆ ಪಡೆದರು.

ಮೇಕ್ರಿ ವೃತ್ತದ ಬಳಿ ರಸ್ತೆ ತಡೆ ನಡೆಸಲು ಮುಂದಾದ ಕರವೇ ರಾಜ್ಯಾಧ್ಯಕ್ಷ ಪ್ರವೀಣ್‍ಶೆಟ್ಟಿ ಹಾಗೂ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು. ಅತ್ತಿಬೆಲೆ ಬಳಿ ರಸ್ತೆತಡೆ ನಡೆಸಿ ಪ್ರತಿಭಟಿಸಿದ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್ ದೇವು ಅವರನ್ನು ಪೊಲೀಸರು ವಶಕ್ಕೆ ಪಡೆದರು.  ಟೌನ್‍ಹಾಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ಅವರು, 25 ಸಾವಿರಕ್ಕೂ ಹೆಚ್ಚು ಕನ್ನಡಪರ ಹೋರಾಟಗಾರರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ರಾಜ್ಯದ ವಿವಿಧೆಡೆ ಸಾವಿರಾರು ಹೋರಾಟಗಾರರನ್ನು ಬಂಧಿಸಿ ಬಂದ್ ವಿಫಲಗೊಳಿಸುವ ಯತ್ನವನ್ನು ಸರ್ಕಾರ ಮಾಡಿದೆ. ಮಫ್ತಿಯಲ್ಲಿ ಪೊಲೀಸರು, ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಂದ್ ಮಾಡದಂತೆ ಹೆದರಿಸಿ ಪಿತೂರಿ ಮಾಡಿದ್ದಾರೆ. ಆದರೂ ನಮ್ಮ ಬಂದ್ ಯಶಸ್ವಿಯಾಗಿದೆ ಎಂದರು. ಚಳವಳಿಗಾರರನ್ನು ಹತ್ತಿಕ್ಕುವ ಕೆಲಸವನ್ನು ಯಡಿಯೂರಪ್ಪ ಮಾಡಿ ಹೀನಾಯವಾಗಿ ವರ್ತಿಸಿದ್ದಾರೆ ಎಂದು ಸಿಎಂ ವಿರುದ್ಧ ಹರಿಹಾಯ್ದರು. ಬಿಜೆಪಿ, ಆರ್‍ಎಸ್‍ಎಸ್, ಕನ್ನಡ ವಿರೋಧಿ ಧೋರಣೆ ಅನುಸರಿಸಿ ಹಿಂದಿಗೆ ಮಾನ್ಯತೆ ನೀಡಿವೆ. ಒಂದು ವರ್ಷ ಇದೇ ಸರ್ಕಾರವಿದ್ದರೆ ಕರ್ನಾಟಕಕ್ಕೆ ಉಳಿಗಾಲವಿಲ್ಲ ಎಂದು ಕಿಡಿಕಾರಿದರು.

ನಮ್ಮ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ. ಕನ್ನಡ ಒಕ್ಕೂಟದ ವತಿಯಿಂದ ಬುಧವಾರ ಸಭೆ ಸೇರುತ್ತೇವೆ. ಅಲ್ಲಿ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ಹೇಳಿದರು.  ಸಾ.ರಾ.ಗೋವಿಂದು ಮಾತನಾಡಿ, ಯಾವ ಸರ್ಕಾರವಿದ್ದರೂ ಧರಣಿ, ಪ್ರತಿಭಟನೆ, ಮೆರವಣಿಗೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿರಲಿಲ್ಲ. ಆದರೆ, ಈ ಸರ್ಕಾರ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಿದೆ. ನಮ್ಮ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ, ನಿರಂತರವಾಗಿರುತ್ತದೆ. ಮರಾಠ ಅಭಿವೃದ್ಧಿ ನಿಗಮ ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಪೆÇಲೀಸರಿಂದ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಇದು ಸಫಲವಾಗುವುದಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕೆ.ಆರ್.ಕುಮಾರ್ ತಿಳಿಸಿದರು. ಅತ್ತ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರನ್ನು ಮೌರ್ಯ ಸರ್ಕಲ್ ಬಳಿಯೇ ಪೊಲೀಸರು ವಶಕ್ಕೆ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ನಾರಾಯಣಗೌಡ ಅವರು, ನಮ್ಮ ನಾಡಪರ ಹೋರಾಟವನ್ನು ನಾವು ನಿಲ್ಲಿಸುವುದಿಲ್ಲ. ಪೊಲೀಸರ ಬಲ ಪ್ರಯೋಗದಿಂದೇನೂ ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ನಮ್ಮ ಮೇಲೆ ಈಗಾಗಲೇ ಹಲವು ಪ್ರಕರಣಗಳಿವೆ. ಇನ್ನೂ ನೂರು ಪ್ರಕರಣಗಳಾದರೂ ನಾವು ಹೆದರುವುದಿಲ್ಲ. ಭಾಷಾ ಅಲ್ಪ ಸಂಖ್ಯಾತರ ಓಲೈಕೆಗಾಗಿ ಸರ್ಕಾರ ಕನ್ನಡಿಗರ ಹಿತಾಸಕ್ತಿಯನ್ನು ಬಲಿ ಕೊಡುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.

ಭಾಷೆಗೊಂದು ನಿಗಮ, ಜಾತಿಗೊಂದು ನಿಗಮವನ್ನು ಸರ್ಕಾರ ಮಾಡುತ್ತಿದೆ. ಅಲ್ಲದೆ, ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರು ತಮಿಳರಿಗೂ ನಿಗಮ ರಚನೆ ಮಾಡುತ್ತೇವೆ ಎಂದು ಅವಿವೇಕದ ಹೇಳಿಕೆ ನೀಡಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ರಸ್ತೆ, ಬಸ್ ತಡೆ ಪ್ರಯತ್ನ, ಟೈರ್‍ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ, ಧರಣಿ, ರ್ಯಾಲಿ, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ, ಬೆಂಗಳೂರಿನ ಹೊರವಲಯದ ಚಂದಾಪುರದಲ್ಲಿ ಬಿಎಂಟಿಸಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದನ್ನು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

ಮಲ್ಲೇಶ್ವರಂನ ಕುವೆಂಪು ವೃತ್ತದಲ್ಲಿ ಬೆಳಗ್ಗೆ ಪ್ರತಿಭಟನೆ ನಡೆಸಲು ಮುಂದಾದ 20 ಜನ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಮೈಸೂರು, ರಾಮನಗರ, ಮಂಡ್ಯ, ಬೆಳಗಾವಿ, ರಾಯಚೂರು, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಯಿತು.

ಕೊಪ್ಪಳದಲ್ಲಿ ಕನ್ನಡಪರ ಹೋರಾಟಗಾರರು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಮಂಡ್ಯದಲ್ಲಿ ಎಮ್ಮೆ, ಕಬ್ಬಿನ ಜಲ್ಲೆಗಳನ್ನು ಹಿಡಿದು ಪ್ರತಿಭಟನಾಕಾರರು ಆಗಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಗದಗ-ಹುಬ್ಬಳ್ಳಿ ರಸ್ತೆ ಬಂದ್ ಮಾಡಿ ತಮಟೆ ಬಾರಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಚಿತ್ರದುರ್ಗದಲ್ಲಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಬಸ್ ತಡೆಯಲು ಮುಂದಾದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಉಡುಪಿ, ದಾವಣಗೆರೆ, ರಾಯಚೂರು ಭಾಗಗಳಲ್ಲಿ ಬಂದ್ ಬಿಸಿ ಅಷ್ಟಾಗಿ ತಟ್ಟಿರಲಿಲ್ಲ. ಈ ಭಾಗದ ಕನ್ನಡಪರ ಹೋರಾಟಗಾರರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ರ್ಯಾಲಿ ನಡೆಸಿ ಪ್ರತಿಭಟಿಸಿ ಮರಾಠ ಅಭಿವೃದ್ಧಿ ನಿಗಮ ರದ್ದುಮಾಡುವಂತೆ ಮನವಿ ಸಲ್ಲಿಸಿದರು.  ರಾಮನಗರದಲ್ಲಿ ಸರ್ಕಾರದ ನಾಡವಿರೋಧಿ ಧೋರಣೆ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಐಜೂರು ವೃತ್ತದಲ್ಲಿ ರಾಜ್ಯ ಸರ್ಕಾರ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಳಿಸ್ವಾಮಿ ಅವರ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡಪರ, ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕಲಬುರಗಿ, ಹಾಸನ, ಧಾರವಾಡ, ಕೋಲಾರದಲ್ಲೂ ಕನ್ನಡಪರ ಸಂಘಟನೆಗಳು ಮರಾಠ ಅಭಿವೃದ್ಧಿ ನಿಗಮದ ವಿರುದ್ಧ ಪ್ರತಿಭಟನೆ ನಡೆಸಿದವು. ಬಹುತೇಕ ಕಡೆ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Facebook Comments