Friday, November 22, 2024
Homeರಾಜ್ಯಕರ್ನಾಟಕದಿಂದ ಅಯೋಧ್ಯೆಗೆ ಆಸ್ತಾ ಸ್ಪೆಷಲ್ ಎಕ್ಸ್‌ಪ್ರೆಸ್‌ ರೈಲು ಸಂಚಾರ

ಕರ್ನಾಟಕದಿಂದ ಅಯೋಧ್ಯೆಗೆ ಆಸ್ತಾ ಸ್ಪೆಷಲ್ ಎಕ್ಸ್‌ಪ್ರೆಸ್‌ ರೈಲು ಸಂಚಾರ

ಬೆಂಗಳೂರು,ಜ.23- ಕರ್ನಾಟಕದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಭೇಟಿ ನೀಡುವ ನಿರೀಕ್ಷೆ ಇರುವ ಹಿನ್ನಲೆಯಲ್ಲಿ ನೈಋತ್ಯ ರೈಲ್ವೆ ವಿಭಾಗವು ಕರ್ನಾಟಕ ಮತ್ತು ಗೋವಾವನ್ನು ಅಯೋಧ್ಯಾ ಧಾಮದೊಂದಿಗೆ ಸಂಪರ್ಕಿಸಲು ಆಸ್ತಾ ಸ್ಪೆಷಲ್ ಎಕ್ಸ್‍ಪ್ರೆಸ್ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ನೀಡಿದೆ. ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ ನೆರವೇರಿದ್ದು, ಮಂಗಳವಾರದಿಂದ ಸಾರ್ವಜನಿಕರೂ ಬಾಲ ರಾಮನ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ, ವಿವಿಧ ರಾಜ್ಯಗಳಿಂದ ಅಯೋಧ್ಯೆಗೆ ತೆರಳುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

ಎರಡು ರೈಲುಗಳು ಮೈಸೂರಿನಿಂದ (ಎಸ್‍ಎಂವಿಟಿ ಬೆಂಗಳೂರು ಮೂಲಕ), ಮತ್ತು ಎಸ್‍ಎಂವಿಟಿ ಬೆಂಗಳೂರು, ತುಮಕೂರು, ಚಿತ್ರದುರ್ಗ, ಬೆಳಗಾವಿ (ಧಾರವಾಡ ಮತ್ತು ಹುಬ್ಬಳ್ಳಿ ಮೂಲಕ) ಮತ್ತು ವಾಸ್ಕೋಡಗಾಮಾ (ರತ್ನಗಿರಿ ಮತ್ತು ಪನ್ವೇಲ್) ಮೂಲಕ ತಲಾ ಒಂದು ರೈಲು ಅಯೋಧ್ಯೆಗೆ ಸಂಚರಿಸಲಿದೆ. ಪ್ರಯಾಣಿಕರು ಇಂಡಿಯನ್ ರೈಲ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾಪೆರ್ರೇಷನ್ (ಐಆರ್‍ಸಿಟಿಸಿ ಅಪ್ಲಿಕೇಶನ್ ಅಥವಾ ವೆಬ್‍ಸೈಟ್) ಮೂಲಕ ಟಿಕೆಟ್‍ಗಳನ್ನು ಕಾಯ್ದಿರಿಸಬೇಕು. ಕೌಂಟರ್‍ನಲ್ಲಿ ಯಾವುದೇ ಟಿಕೆಟ್‍ಗಳನ್ನು ನೀಡಲಾಗುವುದಿಲ್ಲ ಎಂದು ನೈಋತ್ಯ ರೈಲ್ವೆ ಈಗಾಗಲೇ ತಿಳಿಸಿದೆ.

ಈ ರೈಲುಗಳು ಸೀಮಿತ ಟ್ರಿಪ್‍ಗಳನ್ನು ಹೊಂದಿದ್ದರೂ, ರೈಲ್ವೆ ಮಂಡಳಿಯು ಬೇಡಿಕೆಯ ಆಧಾರದ ಮೇಲೆ ಅವುಗಳನ್ನು ವಿಸ್ತರಿಸಲು ನಿರ್ಧರಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಕಿಂಗ್ ಮತ್ತು ದರ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ರೈಲ್ವೆ ತಿಳಿಸಿದೆ.

ರೈಲು ಸಂಖ್ಯೆ 06203 : ಇದು ತುಮಕೂರನ್ನು ಅಯೋಧ್ಯಾ ಧಾಮದೊಂದಿಗೆ ಸಂಪರ್ಕಿಸುತ್ತದೆ. ಈ ರೈಲು ಬುಧವಾರ (ಫೆಬ್ರವರಿ 7 ಮತ್ತು 21) ತುಮಕೂರಿನಿಂದ ಮತ್ತು ಫೆಬ್ರವರಿ 10 ಮತ್ತು 24 ರಂದು ಅಯೋಧ್ಯಾಧಾಮದಿಂದ ಹೊರಡಲಿದೆ. ಇದು 22 ಕೋಚ್‍ಗಳನ್ನು ಹೊಂದಿದ್ದು, 2,726 ಕಿಮೀ ಏಕಮುಖ ಸಂಚಾರ ಇದರದ್ದಾಗಿರಲಿದೆ.

ರೈಲು ಸಂಖ್ಯೆ 06204 : ಇದು ಭಾನುವಾರ (ಫೆಬ್ರವರಿ 11 ಮತ್ತು 25) ಚಿತ್ರದುರ್ಗದಿಂದ ಮತ್ತು ಬುಧವಾರದಂದು (ಫೆಬ್ರವರಿ 14 ಮತ್ತು 28) ಅಯೋಧ್ಯಾಧಾಮದಿಂದ ಹೊರಡಲಿದೆ. ಇದು 22 ಕೋಚ್‍ಗಳನ್ನು ಹೊಂದಿದ್ದು, 2,483 ಕಿಮೀ ಏಕಮುಖ ಸಂಚಾರ ಒಳಗೊಂಡಿರಲಿದೆ.

ರೈಲು ಸಂಖ್ಯೆ 06205 : ಇದು ವಾಸ್ಕೋಡಗಾಮಾವನ್ನು ದರ್ಶನ್ ನಗರದೊಂದಿಗೆ (ಅಯೋಧ್ಯೆಯ ಸಮೀಪವಿರುವ ರೈಲು ನಿಲ್ದಾಣ) ಸಂಪರ್ಕಿಸುತ್ತದೆ. ರೈಲು ಸೋಮವಾರ (ಫೆಬ್ರವರಿ 12 ಮತ್ತು 26) ವಾಸ್ಕೋಡಗಾಮಾದಿಂದ ಮತ್ತು ಶುಕ್ರವಾರ (ಫೆಬ್ರವರಿ 16 ಮತ್ತು ಮಾರ್ಚ್ 1) ದರ್ಶನ್ ನಗರದಿಂದ ಹೊರಡಲಿದೆ. ಇದು ಮಜೋರ್ಡಾ, ಮಡಗಾಂವ್, ಕರ್ಮಾಲಿ, ರತ್ನಗಿರಿ, ಪನ್ವೇಲ್, ವಾಪಿ, ಕೋಟಾ, ತುಂಡ್ಲಾ, ಪ್ರಯಾಗ್‍ರಾಜ್ ಮತ್ತು ಮಿರ್ಜಾಪುರ ಮೂಲಕ ಹಾದುಹೋಗುತ್ತದೆ. ಇದು 22 ಕೋಚ್‍ಗಳನ್ನು ಹೊಂದಿದ್ದು, 2,791 ಕಿ.ಮೀ. ಏಕಮುಖ ಸಂಚಾರ ಒಳಗೊಂಡಿರಲಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಇರಬೇಕು ; ಮಸ್ಕ್

ರೈಲು ಸಂಖ್ಯೆ 06206 : ಇದು ಮೈಸೂರನ್ನು ಅಯೋಧ್ಯೆಯೊಂದಿಗೆ ಸಂಪರ್ಕಿಸುತ್ತದೆ ಮತ್ತು ತಲಾ ಒಂದು ಪ್ರವಾಸವನ್ನು ಮಾಡಲಿದೆ. ಇದು ಶನಿವಾರ (ಫೆಬ್ರವರಿ 17) ಮೈಸೂರಿನಿಂದ ಮತ್ತು ಮಂಗಳವಾರ (ಫೆಬ್ರವರಿ 20) ಅಯೋಧ್ಯಾಧಾಮದಿಂದ ಹೊರಡಲಿದೆ. ಇದು ಕೆಎಸ್‍ಆರ್ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಬೀರೂರು, ಚಿತ್ರದುರ್ಗ, ತೋರಣಗಲ್, ಹೊಸಪೇಟೆ, ಕೊಪ್ಪಳ, ಗದಗ, ಬಾದಾಮಿ, ಬಾಗಲಕೋಟೆ ಮತ್ತು ಬಿಜಾಪುರ, ಕಲಬುರಗಿ, ವಾಡಿ, ಬಲ್ಹರ್ಷಾ, ನಾಗಪುರ, ಜಬಲ್‍ಪುರ ಮತ್ತು ಪ್ರಯಾಗರಾಜ್ ಮೂಲಕ ಹಾದು ಹೋಗಲಿದೆ. ಇದು 22 ಕೋಚ್‍ಗಳನ್ನು ಹೊಂದಿದ್ದು, 3,004 ಕಿ.ಮೀ. ಏಕಮುಖ ಸಂಚಾರ ಒಳಗೊಂಡಿರಲಿದೆ.

ರೈಲು ಸಂಖ್ಯೆ 06207 : ಇದು ಶನಿವಾರ (ಫೆಬ್ರವರಿ 17) ಬೆಳಗಾವಿಯಿಂದ ಮತ್ತು ಮಂಗಳವಾರ (ಫೆಬ್ರವರಿ 20) ಅಯೋಧ್ಯಾಧಾಮದಿಂದ ಹೊರಡಲಿದೆ. ಇದು ಧಾರವಾಡ, ಹುಬ್ಬಳ್ಳಿ, ಗದಗ, ಬಳ್ಳಾರಿ, ರಾಯಚೂರು, ಯಾದಗಿರಿ, ಸಿಕಂದರಾಬಾದ್, ಬಲ್ಹರ್ಷಾ ಮತ್ತು ಪ್ರಯಾಗರಾಜ್ ಮೂಲಕ ಚಲಿಸುತ್ತದೆ. ಇದು 22 ಕೋಚ್‍ಗಳನ್ನು ಹೊಂದಿದ್ದು, 2462 ಕಿ.ಮೀ ಏಕಮುಖ ಸಂಚಾರ ಒಳಗೊಂಡಿರಲಿದೆ.

RELATED ARTICLES

Latest News