Saturday, March 22, 2025
Homeಇದೀಗ ಬಂದ ಸುದ್ದಿKarnataka Bandh : ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ

Karnataka Bandh : ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ

ಬೆಂಗಳೂರು, ಮಾ.22– ಎಂಇಎಸ್ ಪುಂಡರ ಅಟ್ಟಹಾಸ ಖಂಡಿಸಿ ಕನ್ನಡಿಗರ ಮೇಲಿನ ದೌರ್ಜನ್ಯ ವಿರೋಧಿಸಿ, ಮಹದಾಯಿ, ಮೇಕೆದಾಟು ಯೋಜನೆಗಳ ಜಾರಿಗೆ ಆಗ್ರಹಿಸಿ ಸೇರಿದಂತೆ 20 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕನ್ನಡಪರ ಸಂಘಟನೆಗಳ ಒಕ್ಕೂಟ ಇಂದು ಕರೆ ಕೊಟ್ಟಿದ್ದ ಕರ್ನಾಟಕ ಬಂದ್‌ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಗಾವಿ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಗಿದ್ದರೆ, ರಾಜಧಾನಿ ಬೆಂಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೊಳ್ಳೇಗಾಲ, ಹಾಸನ, ಧಾರವಾಡ, ಚಿಕ್ಕಮಗಳೂರು, ತುಮ ಕೂರು, ಕೋಲಾರ, ಗದಗ, ಕೊಪ್ಪಳ, ಬಳ್ಳಾರಿ, ಹಾವೇರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಕಡೆ ಕನ್ನಡಪರ ಸಂಘಟನೆಗಳವರು ಪ್ರತಿಭಟನೆ ನಡೆಸಿ ಎಂಇಎಸ್ ಪುಂಡರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನ ಆನಂದರಾವ್ ವೃತ್ತದ ಬಳಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ತಡೆದು ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು. ಅಲ್ಲದೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಸಹಕರಿಸಲು ಮನವಿ ಮಾಡಿದರು.ಬಹುತೇಕ ಕಡೆ ರಾಜ್ಯ ರಸ್ತೆ ಸಾರಿಗೆ ಬಸ್ಗಳು ಬಿಎಂಟಿಸಿ ಬಸ್‌ಗಳು, ಆಟೋ, ಟ್ಯಾಕ್ಸಿ, ಓಲಾ, ಕ್ಯಾಬ್‌ಗಳು ಸಂಚರಿಸುತ್ತಿದ್ದವು. ಅಂಗಡಿಮುಂಗಟ್ಟುಗಳು, ಹೋಟೆಲ್‌ಗಳು ಎಂದಿನಂತೆ ನಡೆಯುತ್ತಿದ್ದವು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಪ್ರಯಾಣಿಕರಿಗೆ ಬೆಳ್ಳಂಬೆಳಿಗ್ಗೆ ಬಂದ್ ಬಿಸಿ ತಟ್ಟಿದಂತಿತ್ತು. ಬಂದ್ ಪರಿಣಾಮವೇನಾದರೂ ಆಗಬಹುದು ಎಂದು ಪ್ರಯಾಣಿಕರು ಬೆಳಗ್ಗೆಯೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಸ್ಸು, ಕಾರುಗಳ ಮೂಲಕ ತೆರಳುತ್ತಿದ್ದ ದೃಶ್ಯ ಕಂಡುಬಂದಿತು.

ಮೈಸೂರಿನಲ್ಲಿ ಸಾರಿಗೆ ಬಸ್‌ನಿಲ್ದಾಣದ ಬಳಿ ಬಸ್‌ಗಳಿಗೆ ಅಡ್ಡಲಾಗಿ ಮಲಗಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ಬಸ್ ಸಂಚಾರದಲ್ಲಿ ವ್ಯತ್ಯಯವಾಯಿತು. ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ನಂತರ ಸಂಚಾರ ಸಹಜ ಸ್ಥಿತಿಗೆ ಮರಳಿತು.

ರಾಮನಗರದ ಐಜೂರು ಸರ್ಕಲ್‌ನಲ್ಲಿ ಕನ್ನಡಪರ ಸಂಘಟನೆಗಳು ಮರಾಠಿ ಪುಂಡರ ಅಟ್ಟಹಾಸ ಖಂಡಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಮಂಡ್ಯದಲ್ಲಿ ಕೆರಳಿದ ಕನ್ನಡಪರ ಸಂಘಟನೆಯವರು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಜೆಡಿಎಸ್ ಮುಖಂಡರು ಸಾಥ್ ನೀಡಿದ್ದು ವಿಶೇಷವಾಗಿತ್ತು. ಇಲ್ಲಿನ ಸಂಜಯವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಎಂಇಎಸ್ ಪುಂಡರ ಅಟ್ಟಹಾಸ ಖಂಡಿಸಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಎಂದಿನಂತೆ ವಹಿವಾಟು ನಡೆಯಿತು. ವಾಹನ ಸಂಚಾರ, ರೈಲು ಸಂಚಾರ ಮಾಮೂಲಿಯಾಗಿತ್ತು. ಕನ್ನಡಪರ ಹೋರಾಟಗಾರರು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಅತ್ತಿಬೆಲೆ ಗಡಿಯಲ್ಲಿ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ ದೇವು ನೇತೃತ್ವದಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಕೂಡಲೇ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ಕರವೇ ಶಿವರಾಮೇಗೌಡ ಬಣದ ರಾಜ್ಯ ಉಪಾಧ್ಯಕ್ಷ ಲೋಕೇಶ್‌ಗೌಡ ನೇತೃತ್ವದಲ್ಲಿ ಕಾರ್ಯಕರ್ತರು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿ ಎಂಇಎಸ್ ಪುಂಡರ ಗಡೀಪಾರಿಗೆ ಆಗ್ರಹಿಸಿದರು. ಇನ್ನುಳಿದಂತೆ ಆನೇಕಲ್ ತಾಲ್ಲೂಕಿನಲ್ಲಿ ಗಡಿಭಾಗದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಲಿಲ್ಲ.

ಮರಾಠಿ ಚಲನಚಿತ್ರ ಪ್ರದರ್ಶನ ರದ್ದು:
ಬೆಳಗಾವಿಯಲ್ಲಿ ಮರಾಠಿ ಚಲನಚಿತ್ರ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಟ್ರೇಲರ್ ನಲ್ಲಿ ಬೆಳಗಾವಿ ಮಹಾರಾಷ್ಟ್ರದ್ದು ಎಂದು ಉಲ್ಲೇಖಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮರಾಠಿ ಚಿತ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಫಾಲೋವ‌ರ್ ಸಿನಿಮಾ ಪ್ರದರ್ಶನವನ್ನು ರದ್ದುಪಡಿಸಲಾಗಿದೆ. ಗಡಿವಿವಾದದ ಬಗ್ಗೆ ಬೆಳಕು ಚೆಲ್ಲಲಾಗಿದೆ ಎಂದು ಕರವೇ ಬಣದ ಜಿಲ್ಲಾಧ್ಯಕ್ಷ ವಾಜಿದ್ ಹಿರೇಕೋಡಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬೆಳಗಾವಿ ನಗರದ ಬಿಎ ಪದವೀಧರ ಹರ್ಷವರ್ಧನ್ ಮಲವೆಡೆ ಎಂಬುವರು ನಿರ್ಮಿಸಿರುವ ಚಿತ್ರ ಇದು. ಈ ಚಿತ್ರದ ಟ್ರೇಲರ್‌ನಲ್ಲಿ ಎಳ್ಳೂರು ಮಹಾರಾಷ್ಟ್ರ ನಾಮಫಲಕ ವಿವಾದ ಪ್ರಸ್ತಾಪಿಸಲಾಗಿದೆ. ಅದೇ ರೀತಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ ಎಂಬ ವಿಚಾರ ಉಲ್ಲೇಖವಾಗಿದೆ ಎಂದು ಕರವೇ ಕಾರ್ಯಕರ್ತರು ಚಿತ್ರತಂಡದ ವಿರುದ್ಧ ಕಿಡಿಕಾರಿದ್ದಾರೆ. ಕಾಫಿನಾಡು ಚಿಕ್ಕಮಗಳೂರಿನಲ್ಲೂ ಕೂಡ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳ್ಳಂಬೆಳಿಗ್ಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ತೆರಳಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಒತ್ತಾಯಿಸಿದರು. ಅಲ್ಲದೆ ಬಸ್ಗಳನ್ನು ತಡೆಯುವ ಪ್ರಯತ್ನವನ್ನು ಮಾಡಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಭಾಯಿಸಿದರು.

ಜಿಲ್ಲೆಯಲ್ಲಿ ಶಾಲಾ-ಕಾಲೇಜು, ವಾಹನ ಸಂಚಾರ ಎಂದಿನಂತಿತ್ತು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹನುಮಂತಪ್ಪ ವೃತ್ತದಿಂದ ಆಜಾದ್ ಮೈದಾನದವರೆಗೆ ಮೆರವಣಿಗೆ ನಡೆಸಿ ಬೆಳಗಾವಿಯಲ್ಲಿ ಸಾರಿಗೆ ಬಸ್ ನಿರ್ವಾಹಕನ ಮೇಲೆ ನಡೆದ ಹಲ್ಲೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಬಂದ್ಗೆ ಬೆದರಿ ಮಹಾರಾಷ್ಟ್ರ ಸಾರಿಗೆ ಬಸ್‌ಗಳು ಇಂದು ರಾಜ್ಯಕ್ಕೆ ಬರಲಿಲ್ಲ. ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಎಲ್ಲಿಯೂ ಕೂಡ ಯಾವುದೇ ಅಹಿತಕರ ಘಟನೆಗಳು ನಡೆದಿರುವ ವರದಿಯಾಗಿಲ್ಲ.

ಬಂದ್ ಶಾಂತಿಯುತವಾಗಿದೆ: ಆರ್.ಹಿತೇಂದ್ರ
ಕರ್ನಾಟಕ ಬಂದ್ ಶಾಂತಿಯುತವಾಗಿದೆ. ಈತನಕ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಆರ್.ಹಿತೇಂದ್ರ ಅವರು ತಿಳಿಸಿದರು.ಈ ಸಂಜೆಯೊಂದಿಗೆ ಮಾತನಾಡಿದ ಅವರು, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ವಿವರಿಸಿದರು.

ಜಿಲ್ಲೆಗಳಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಗಳಲ್ಲಿ ಆಯಾ ಜಿಲ್ಲೆಯ ಎಲ್ಲಾ ಎಸ್ಪಿಗಳು ಹಾಗೂ ಕಿರಿಯ ಅಧಿಕಾರಿಗಳು ಗಸ್ತಿನಲ್ಲಿದ್ದಾರೆ. ರಾಜ್ಯದಾದ್ಯಂತ ಸೂಕ್ತ ಬಂದೋಬಸ್ತ್ ಮಾಡಿದ್ದೇವೆ ಎಂದು ಅವರು ಹೇಳಿದರು. ಮಂಡ್ಯ, ಮೈಸೂರು, ಕೊಪ್ಪಳ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದೇವೆ. ಒಟ್ಟಾರೆ ರಾಜ್ಯದಲ್ಲಿ ಬಂದ್ ಶಾಂತಿಯುತವಾಗಿದೆ ಎಂದು ಅವರು ತಿಳಿಸಿದರು.

RELATED ARTICLES

Latest News