ಬೆಂಗಳೂರು,ಜ.2- ಹೊಸವರ್ಷದ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹಲವು ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಸಚಿವ ಸಂಪುಟದಲ್ಲಿ ಒಂದು ಸ್ಥಾನ ಖಾಲಿ ಉಳಿದಿದ್ದು, ಅದಕ್ಕೆ ಬಿ.ನಾಗೇಂದ್ರ ಅವರನ್ನು ಮರು ಸೇರ್ಪಡೆ ಮಾಡಿಕೊಳ್ಳುವ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಸಂಪುಟದಿಂದ ಮತ್ತಷ್ಟು ಮಂದಿಯನ್ನು ಕೈಬಿಟ್ಟು ಸಂಪುಟ ಪುನರ್ ರಚನೆ ಮಾಡುವ ಚರ್ಚೆಗಳು ನಡೆಯುತ್ತಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ವೇಳೆಯಲ್ಲೂ ಈ ಬಗ್ಗೆ ಚರ್ಚೆಗಳು ನಡೆದಿದ್ದವು. ಬೆಳಗಾವಿಯಲ್ಲಿನ ಕಾಂಗ್ರೆಸ್ ಮಹಾಧಿವೇಶನ ಬಳಿಕ ಹೈಕಮಾಂಡ್ ನಾಯಕರ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮಾಜಿ ಪ್ರಧಾನಿ ಡಾ.ಮನಮೋಹನ್ಸಿಂಗ್ ಅವರ ನಿಧನದಿಂದಾಗಿ ಮಹಾಧಿವೇಶನ ರದ್ದುಗೊಂಡಿದ್ದು, ಹೈಕಮಾಂಡ್ಜೊತೆಗಿನ ಚರ್ಚೆ ಕೂಡ ಮುಂದೂಡಿಕೆಯಾಗಿತ್ತು.
ಸಂಪುಟ ಪುನರ್ರಚನೆಗೆ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದೆ ಎಂದು ಹೇಳಲಾಗಿದೆ.ಕೆಲವು ಸಚಿವರು ಅನಗತ್ಯ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸುತ್ತಿದ್ದು, ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ಉಂಟುಮಾಡುತ್ತಿದ್ದಾರೆ. ಅಲ್ಲದೆ ಇಲಾಖಾವಾರು ಕಾರ್ಯಕ್ಷಮತೆಯಲ್ಲೂ ಕೂಡ ದುರ್ಬಲರು ಎಂಬಂತೆ ಬಿಂಬಿತವಾಗಿದೆ. ಅಂಥವರನ್ನು ಸಂಪುಟದಿಂದ ಕೈಬಿಡಬೇಕು. ಇನ್ನೂ ಕೆಲವು ಸಚಿವರು ಗಂಭೀರ ಸ್ವರೂಪದ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ವಿಶ್ರಾಂತಿ ನೀಡುವ ಅಗತ್ಯವಿದೆ ಎಂಬ ವರದಿಗಳಿವೆ.
ಸಂಪುಟ ಪುನರ್ ರಚನೆಗೆ ಕೈ ಹಾಕಿದರೆ ನಾನಾ ರೀತಿಯ ಚಟುವಟಿಕೆಗಳು ಗರಿಗೆದರುವ ಸಾಧ್ಯತೆಯಿದೆ. 138ಕ್ಕೂ ಹೆಚ್ಚು ಮಂದಿ ಶಾಸಕರಿರುವುದರಿಂದಾಗಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಇದೆ. ಆಪರೇಷನ್ ಕಮಲ, ಮತ್ಯಾವುದೇ ಚಟುವಟಿಕೆಗಳು ನಡೆದರೂ ಅದನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ನ ನಾಯಕತ್ವ ಸಮರ್ಥವಾಗಿದೆ ಎಂಬ ಹಿನ್ನೆಲೆಯಲ್ಲಿ ಸಂಪುಟ ಪುನರ್ ರಚನೆ ನಡೆಸಲೇಬೇಕು ಎಂದು ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.
ನಾಯಕತ್ವ ಬದಲಾವಣೆಯ ಚರ್ಚೆಗಳ ನಡುವೆಯೂ ಸಂಪುಟ ಪುನರ್ ರಚನೆಯಲ್ಲಿ ಬಣ ರಾಜಕೀಯಗಳು ತಲೆದೋರುತ್ತಿವೆ. ಡಿ.ಕೆ.ಶಿವಕುಮಾರ್ರವರು ಸಿದ್ದರಾಮಯ್ಯ ಬಣದ ಕೆಲವು ಸಚಿವರನ್ನು ಕೈಬಿಡಬೇಕು ಎಂಬ ನಿಟ್ಟಿನಲ್ಲಿ ಒಳಗೊಳಗೇ ಚಟುವಟಿಕೆಗಳನ್ನು ಆರಂಭಿಸಿದರೆ ತಮವರನ್ನು ರಕ್ಷಿಸಿಕೊಳ್ಳುವ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದ ವಿರುದ್ಧ ಅಪಸ್ವರ ಎತ್ತುವ ಸಚಿವರನ್ನು ಕಿತ್ತೊಗೆಯುವ ತಯಾರಿ ನಡೆಸಿದ್ದಾರೆ. ಸಂಕ್ರಾಂತಿಯ ವೇಳೆಗೆ ಸಂಪುಟ ಪುನರ್ ರಚನೆ ಎಂಬ ನಿರೀಕ್ಷೆಗಳೊಂದಿಗೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ.