Sunday, November 24, 2024
Homeರಾಜ್ಯದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಬೆಂಗಳೂರು,ಏ.10- ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ದಾಖಲೆಯ ಶೇಕಡಾ 81.15 ರಷ್ಟು ಫಲಿತಾಂಶ ಬಂದಿದೆ.ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರದೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದು, ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಫಲಿತಾಂಶ ಏರಿಕೆಯಾಗಿದೆ.

2023 ರಲ್ಲಿ 74.67 ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಶೇ.6.4 ರಷ್ಟು ಏರಿಕೆಯಾಗಿದ್ದು, ದಾಖಲೆಯ 81.15 ರಷ್ಟು ಫಲಿತಾಂಶ ದಾಖಲಾಗಿರುವುದು ವರ್ಷದಿಂದ ವರ್ಷಕ್ಕೆ ಫಲಿತಾಂಶ ಏರಿಕೆಯಾಗುತ್ತಿರುವುದರ ಸಕಾರಾತ್ಮಕ ಬೆಳವಣಿಗೆಯಾಗಿದೆ.ಕಳೆದ ಮಾರ್ಚ್ 1 ರಿಂದ 27 ರವರೆಗೆ ರಾಜ್ಯದ 1,124 ಕೇಂದ್ರಗಳಲ್ಲಿ ನಡೆದ ದ್ವಿತೀಯ ಪಿಯುಸಿ-1 ರ ಪರೀಕ್ಷೆಗೆ ಒಟ್ಟು 6,81,079 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 5,22,690 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್. ಮಂಜುಶ್ರೀ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಘೋಷಿಸಿದರು. ಕಲಾವಿಭಾಗದಲ್ಲಿ ಶೇ.68.36, ವಾಣಿಜ್ಯ ಶೇ.80.94, ವಿಜ್ಞಾನ ಶೇ.89.96 ಫಲಿತಾಂಶ ಹೊರಬಂದಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಎಂದಿನಂತೆ ಈ ಬಾರಿಯೂ ದಕ್ಷಿಣ ಕನ್ನಡ, ಉಡುಪಿ, ವಿಜಯಪುರ ಕ್ರಮವಾಗಿ ಮೊದಲ ಸ್ಥಾನದಲ್ಲಿದ್ದರೆ, ಗದಗ ಕೊನೆಯ ಸ್ಥಾನದಲ್ಲಿದೆ.

ಕಲಾವಿಭಾಗದಲ್ಲಿ ಬೆಂಗಳೂರಿನ ಎನ್‍ಎನ್‍ಕೆಆರ್‍ವಿ ಪಿಯು ಕಾಲೇಜಿನ ಮೇಧಾ ಡಿ. 596, ವಿಜಯಪುರದ ಎಸ್‍ಎಸ್ ಪಿಯು ಕಾಲೇಜಿನ ವೇದಾಂತ್ ಜಯನುಬಾ ನವಿ 596, ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲೂಕಿನ ಕೂಡ್ಲಗಿಯ ಇಂದು ಪಿಯು ಕಾಲೇಜಿನ ಕವಿತಾ ಬಿ.ವಿ. 596 ಅಂಕಗಳನ್ನು ಪಡೆದಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ವಿದ್ಯಾಲಕ್ಷ್ಮಿ 598 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ವಿದ್ಯಾನಿ ಪಿಯು ಕಾಲೇಜಿನ ಜ್ಞಾನವಿ ಎಂ. 597, ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಕುಮದ್ವತಿ ಕಾಲೇಜಿನ ಪವನ್ ಎಂ.ಎಸ್. 596, ಉಡುಪಿಯ ಪೂರ್ಣ ಪ್ರಜ್ಞಾ ಪಿಯು ಕಾಲೇಜಿನ ಹರ್ಷಿತಾ ಎಸ್.ಎಚ್. 596 ಅಂಕ ಪಡೆದಿದ್ದಾರೆ.

ಈ ಬಾರಿ ಪರೀಕ್ಷೆಗೆ ಹಾಜರಾದ 6,22,819 ಹೊಸ ವಿದ್ಯಾರ್ಥಿಗಳ ಪೈಕಿ 5,26,558 (84.59) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತ 36,007 ವಿದ್ಯಾರ್ಥಿಗಳಲ್ಲಿ ಹಾಜರಾದವರ ಪೈಕಿ 15,116 ವಿದ್ಯಾರ್ಥಿಗಳು (41.98), 22,253 ಖಾಸಗಿ ವಿದ್ಯಾರ್ಥಿಗಳ ಪೈಕಿ 10,716 (48.16) ತೇರ್ಗಡೆಯಾಗಿದ್ದಾರೆ.

ಕಲಾ ವಿಭಾಗದಲ್ಲಿ 1,87,891 ಹಾಜರಾದ ವಿದ್ಯಾರ್ಥಿಗಳ ಪೈಕಿ 1,28,448 (68.36), ವಾಣಿಜ್ಯ ವಿಭಾಗದಲ್ಲಿ 2,15,357 ಹಾಜರಾದವರ ಪೈಕಿ 1,74,315 (80.94), ವಿಜ್ಞಾನ ವಿಭಾಗದಲ್ಲಿ 2,77,831 ಹಾಜರಾದವರ ಪೈಕಿ 249927 (89.96) ಫಲಿತಾಂಶ ಪ್ರಕಟಗೊಂಡಿದೆ.ಬಾಲಕರ ಪೈಕಿ ಪರೀಕ್ಷೆಗೆ 3,21,467 ಹಾಜರಾದವರ ಪೈಕಿ 2,47,478 (76.98), ಅದೇ ರೀತಿ ಬಾಲಕಿಯರಲ್ಲಿ 3,59,612 ವಿದ್ಯಾರ್ಥಿನಿಯರಲ್ಲಿ 3,05,212 (84.87) ಫಲಿತಾಂಶ ಹೊರಬಂದಿದೆ.

ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮಾಂತರ ವಿದ್ಯಾರ್ಥಿಗಳು ತಾವು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಕಡಿಮೆ ಇಲ್ಲ ಎಂಬಂತೆ ಹೆಚ್ಚಿನ ಅಂಕ ಪಡೆದಿದ್ದಾರೆ.ನಗರ ಪ್ರದೇಶದಿಂದ 5,32,279 ಹಾಜರಾದವರ ಪೈಕಿ 4,32,060 (81.10), ಅದೇ ರೀತಿ ಗ್ರಾಮಾಂತರ ಪ್ರದೇಶದಿಂದ 1,48,350 ಹಾಜರಾದ ವಿದ್ಯಾರ್ಥಿಗಳಲ್ಲಿ 1,20,630 (81.31) ಉತ್ತೀರ್ಣರಾಗಿದ್ದಾರೆ.

ಈ ಬಾರಿ ಶೇ.85 ಅಥವಾ ಅದಕ್ಕಿಂತ ಹೆಚ್ಚಿನ ಅಂಗಳನ್ನು 1,53,370 ವಿದ್ಯಾರ್ಥಿಗಳು ಪಡೆದಿದ್ದರೆ ಶೇ.85 ಕ್ಕಿಂತ ಕಡಿಮೆ ಹಾಗೂ ಶೇ. 60 ಅಥವಾ ಶೇ.60 ಕ್ಕಿಂತ ಕಡಿಮೆ ಅಂಕವನ್ನು 2,89,733 ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಶೇ.60 ಕ್ಕಿಂತ ಕಡಿಮೆ, ಶೇ.50 ಅಥವಾ ಶೇ.50 ಕ್ಕಿಂತ ಹೆಚ್ಚು ಅಂಕಗಳನ್ನು 72,098, ಶೇ.50 ಕ್ಕಿಂತ ಕಡಿಮೆ ಅಂಕಗಳನ್ನು 37,489 ವಿದ್ಯಾರ್ಥಿಗಳು ಪಡೆದಿದ್ದಾರೆ.ಈ ಬಾರಿ ಅಚ್ಚರಿಯೆಂಬಂತೆ 91 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ. 100 ರಷ್ಟು ಫಲಿತಾಂಶ ಬಂದಿದ್ದರೆ, 2 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

26 ಅನುದಾನಿತ ಪದವಿ ಪೂರ್ವ ಕಾಲೇಜಿನಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದ್ದರೆ, 6 ಕಾಲೇಜುಗಳಲ್ಲಿ ಶೂನ್ಯ, 345 ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.100 ರಷ್ಟು ಹಾಗೂ 26 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಹಾಗೂ ಒಂದು ವಿಭಜಿತ ಪದವಿ ಪೂರ್ವ ಕಾಲೇಜಿನಲ್ಲಿ ಶೇ.100 ರಷ್ಟು ಹಾಗೂ ಒಂದು ಕಾಲೇಜಿನಲ್ಲಿ ಶೂನ್ಯ ಫಲಿತಾಂಶ ಸೇರಿದಂತೆ ಒಟ್ಟು 463 ಕಾಲೇಜಿನಲ್ಲಿ ಶೇ.100 ರಷ್ಟು ಫಲಿತಾಂಶ ಮತ್ತು 35 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.

ಜಿಲ್ಲಾವಾರು
ದಕ್ಷಿಣ ಕನ್ನಡ ಶೇ.95.33
ಉಡುಪಿ ಶೇ.95.24
ವಿಜಯಪುರ ಶೇ.84.69
ಉತ್ತರ ಕನ್ನಡ ಶೇ.89.74
ಕೊಡಗು ಶೇ.90.55
ಬೆಂಗಳೂರು ದಕ್ಷಿಣ ಶೇ.82.3
ಬೆಂಗಳೂರು ಉತ್ತರ ಶೇ.82.25
ಶಿವಮೊಗ್ಗ ಶೇ.83.13
ಚಿಕ್ಕಮಗಳೂರು ಶೇ.83.28
ಬೆಂಗಳೂರು ಗ್ರಾಮಾಂತರ ಶೇ.83.04
ಬಾಗಲಕೋಟೆ ಶೇ.78.79
ಕೋಲಾರ ಶೇ.79.2
ಹಾಸನ ಶೇ.83.14
ಚಾಮರಾಜನಗರ ಶೇ.81.92
ಚಿಕ್ಕೋಡಿ ಶೇ.78.76
ರಾಮನಗರ ಶೇ.78.12
ಮೈಸೂರು ಶೇ.79.89
ಚಿಕ್ಕಬಳ್ಳಾಪುರ ಶೇ.77.77
ಬೀದರ್ ಶೇ.78
ತುಮಕೂರು ಶೇ.74.5
ದಾವಣಗೆರೆ ಶೇ.75.72
ಕೊಪ್ಪಳ ಶೇ.74.8
ಧಾರವಾಡ ಶೇ.73.54
ಮಂಡ್ಯ ಶೇ.77.47
ಹಾವೇರಿ ಶೇ.74.13
ಯಾದಗಿರಿ ಶೇ.62.98
ಬೆಳಗಾವಿ ಶೇ.73.98
ಕಲಬುರಗಿ ಶೇ.69.37
ಬಳ್ಳಾರಿ ಶೇ.69.55
ರಾಯಚೂರು ಶೇ.66.21
ಚಿತ್ರದುರ್ಗ ಶೇ.69.5
ಗದಗ ಶೇ.66.91

RELATED ARTICLES

Latest News