ಬೆಂಗಳೂರು,ಮಾ.22- ಗಡಿ ಮತ್ತು ಭಾಷಾ ವಿವಾದವನ್ನು ಪದೇ ಪದೇ ಕೆಣಕಿ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ( ಎಂಇಎಸ್ )ಯವರ ಅಟಾಟೋಪಗಳಿಗೆ ಕಡಿವಾಣ
ಹಾಕುವಂತೆ ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಕನ್ನಡಿಗರು ಮತ್ತು ಕರ್ನಾಟಕವನ್ನು ಕೆಣಕಿದರೆ ಹುಷಾರ್ ಎಂಬ ಸಂದೇಶವನ್ನು ರವಾನಿಸಲಾಯಿತು.
ಇಂದು ಕನ್ನಡ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಿದ್ದ ಬಂದ್‌ಗೆ ಕೆಲವು ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ, ಇನ್ನು ಕೆಲವು ಕಡೆ ನೀರಸ ಪ್ರತಿಕ್ರಿಯೆ ಕಂಡು ಬಂದಿತು. ಹಲವು ಜಿಲ್ಲೆಗಳಲ್ಲಿ ದೈನಂದಿನ ಜೀವನ ಸಹಜ ಸ್ಥಿತಿಯಲ್ಲೇ ಇತ್ತು. ಬಂದ್‌ಗೂ ನಮಗೂ ಸಂಬಂಧವೇ ಇಲ್ಲ ಎನ್ನುವಂತಹ ವಾತಾವರಣವೂ ಕಂಡುಬಂದಿತು.
ಆಸ್ಪತ್ರೆ, ಮೆಡಿಕಲ್, ಹಾಲು, ಅಗತ್ಯವಸ್ತುಗಳು, ಮೆಟೋ, ಪೆಟೋಲ್ ಬಂಕ್, ಹೋಟೆಲ್, ಎಪಿಎಂಸಿ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಓಲಾ, ಊಬರ್ ಟ್ಯಾಕ್ಸಿ , ಆಟೋಗಳು ನೈತಿಕ ಬೆಂಬಲ ನೀಡಿದ್ದವು.
ಕರ್ನಾಟಕದಲ್ಲಿ ಎಂಇಎಸ್ ನಿಷೇಧ, ಮೇಕೆದಾಟು, ಕಳಸಾ ಬಂಡೂರಿ ಯೋಜನೆಗೆ ಶೀಘ್ರ ಅನುಮತಿ ಸೇರಿದಂತೆ ನಾಡು-ನುಡಿ, ನೆಲ-ಜಲ ವಿಷಯವಾಗಿ ಕನ್ನಡ ಒಕ್ಕೂಟಗಳು ಶನಿವಾರ ಕರ್ನಾಟಕ ಬಂದ್ ಹಮಿಕೊಂಡಿದ್ದವು. ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.
ರಾಜಧಾನಿ ಬೆಂಗಳೂರಿನಲ್ಲಿ ಆರಂಭದಲ್ಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಳಗ್ಗೆಯಿಂದಲೇ ಸಾರ್ವಜನಿಕರ ಸಂಚಾರ ಎಂದಿನಂತಿದ್ದು, ಆಟೋ, ಬಸ್‌ಗಳು ರಸ್ತೆಗಿಳಿದಿದ್ದವು. ಬಂದ್ ಯಶಸ್ಸಿಗಾಗಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳ ಬಳಿ ಕನ್ನಡ ಪರ ಸಂಘಟನೆಗಳು ಮನವಿ ಮಾಡಿದ್ದವು. ಆದರೆ ಬಹುತೇಕ ಸಂಘಟನೆಗಳಿಂದ ನೈತಿಕ ಬೆಂಬಲವಷ್ಟೇ ದೊರೆತಿರುವುದರಿಂದ ಎಂದಿನಂತೆಯೇ ಸಾರ್ವಜನಿಕರು, ಸಾರಿಗೆ ವಾಹನಗಳ ಸಂಚಾರ ಆರಂಭವಾಗಿತ್ತು.
ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿದೆ : ವಾಟಾಳ್
ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದಿರುವ ಕರ್ನಾಟಕ ಸಂಘಟನೆಗಳ ಸಮಿತಿ ಮತ್ತು ಕರುನಾಡ ಕಾರ್ಮಿಕರ ಸೇನೆ ಸದಸ್ಯರು, ಎಂದಿನಂತೆ ಸಂಚರಿಸುವ ವಾಹನ ಸವಾರರಿಗೆ ಗುಲಾಬಿ ಹೂವು ನೀಡುವ ಮೂಲಕ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಎಂದಿನಂತೆ ದೈನಂದಿನ ಕೆಲಸ ಕಾರ್ಯಗಳತ್ತ ಮುಖ ಮಾಡಿರುವ ಸಾರ್ವಜನಿಕರಿಗೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಗುಲಾಬಿ ಹೂವು ವಿತರಿಸಲಾಯಿತು.
ಗಡಿ ಜಿಲ್ಲೆ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್ ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಬೇಕಿದ್ದ ಬಸ್‌ಗಳ ಸಂಚಾರ ಕೂಡ ಬಂದ್ ಆಗಿದೆ. ಇನ್ನುಳಿದಂತೆ ಬೆಳಗಾವಿ ನಗರ, ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ಎಂದಿನಂತೆ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದವು.
ಬೆಂಗಳೂರಲ್ಲಿ ಬಂದ್ ಶಾಂತಿಯುತ, ಯಾವುದೇ ಅಹಿತಕರ ಘಟನೆ ಇಲ್ಲ : ಬಿ.ದಯಾನಂದ
ಮಹಾರಾಷ್ಟ್ರದ ಪುಣೆ, ಥಾಣೆ, ಮುಂಬೈ, ಮೀರಜ್, ಸಾಂಗ್ಲಿಯಿಂದ ಬಸ್ ಸೇವೆ ಸಂಪೂರ್ಣ ಸ್ಥಗಿತವಾಗಿದೆ. ಮಹಾರಾಷ್ಟ್ರದಿಂದ ನಿತ್ಯ ಬೆಳಗಾವಿಗೆ 90 ಬಸ್‌ಗಳು ಆಗಮಿಸುತ್ತಿದ್ದವು. ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ರಾತೋರಾತ್ರಿ ಮಹಾರಾಷ್ಟ್ರ ಸರ್ಕಾರ ತಮ ಬಸ್‌ಗಳನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು. ವ್ಯಾಪಾರ-ವಹಿವಾಟುಗಳಿಲ್ಲದೇ ಬೆಳಗಾವಿಯ ಹೂವು ಮಾರಾಟಗಾರರು ಕಂಗಾಲಾಗಿದ್ದಾರೆ. ಚಿತ್ರದುರ್ಗ, ಶಿರಾ ಭಾಗದಿಂದ ಬೆಳಗಾವಿಗೆ ತರಹೇವಾರಿ ಹೂವುಗಳು ಬರುತ್ತಿದ್ದವು. ಆಬೂಲಿ, ಮೈಸೂರು ಮಲ್ಲಿಗೆ, ಸಾದಾ ಮಲ್ಲಿಗೆ, ತುಳಸಿ ಮಾಲೆ ಅಲ್ಲಿಂದ ತರಿಸಲಾಗುತ್ತಿತ್ತು.ಕೆಲವು ಕಡೆ ಕನ್ನಡ ಪರ ಸಂಘಟನೆಗಳು ಹಾಗೂ ಹೋರಾಟಗಾರರು ಸ್ವಯಂಪ್ರೇರಿತರಾಗಿ ಬಂದ್‌ನಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದರು.
2 ಜಿಲ್ಲೆಗಳಲ್ಲಿ ಮಾತ್ರ ಬೆಂಬಲ :
ಆದರೆ ಎಂಇಎಸ್ ಪುಂಡಾಟ ಖಂಡಿಸಿ ಕರೆ ನೀಡಿರುವ ಬಂದ್‌ಗೆ 17 ಜಿಲ್ಲೆಗಳು ಬೆಂಬಲ ನೀಡಿರಲಿಲ್ಲ. 11 ಜಿಲ್ಲೆಗಳಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾದರೆ, 2 ಜಿಲ್ಲೆಗಳು ಮಾತ್ರ ಸಂಪೂರ್ಣ ಬೆಂಬಲ ನೀಡಿದ್ದವು. ಕರ್ನಾಟಕ ಬಂದ್‌ಗೆ ಬೆಳಗಾವಿ, ಮಂಡ್ಯದಲ್ಲಿ ಮಾತ್ರ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಉಳಿದಂತೆ ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಉಡುಪಿ, ಯಾದಗಿರಿ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಬಳ್ಳಾಪುರ, ಚಿಕ್ಕೋಡಿ, ಕಲಬುರಗಿ, ಹಾಸನ, ಹಾವೇರಿ, ಹುಬ್ಬಳ್ಳಿ, ಕಾರವಾರ, ಮಡಿಕೇರಿ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ಹಾಗೂ ಯಾದಗಿರಿ ಜಿಲ್ಲೆಗಳು ಬಂದ್‌ಗೆ ಬೆಂಬಲ ನಿರಾಕರಿಸಿದ್ದವು.
ಗಣಿ ನಾಡು ಬಳ್ಳಾರಿಯಲ್ಲಿ ಎಂದಿನಂತೆ ಅಂಗಡಿ-ಮುಂಗಟ್ಟಿನಿಂದ ಹಿಡಿದು ಎಲ್ಲವೂ ತೆರೆದಿದ್ದವು. ಬಸ್, ಆಟೋ ಸಂಚಾರವಿದ್ದು ಬಳ್ಳಾರಿ ಮಂದಿ ಬಂದ್‌ಗೆ ಬೆಂಬಲ ನೀಡಿರಲಿಲ್ಲ. ಬೆಳಗ್ಗೆ 10 ಗಂಟೆಗೆ ರಾಯಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನೈತಿಕ ಬೆಂಬಲ ನೀಡಲಾಯಿತು. ರಾಯಲ್ ಸರ್ಕಲ್ ಮೋತಿ ಸರ್ಕಲ್, ಸಂಗಮ್ ಸರ್ಕಲ್ ಸೇರಿದಂತೆ ಬಳ್ಳಾರಿಯ ಬಹುತೇಕ ರಸ್ತೆಗಳಲ್ಲಿ ಪ್ರತಿನಿತ್ಯದಂತೆ ವಾಹನ ಸಂಚಾರ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.
ಧಾರವಾಡ, ಹಾವೇರಿ, ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲಿ ಎಂದಿನಂತೆ ಬಸ್, ಆಟೋ ಸಂಚಾರ ಮತ್ತು ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದವು. ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹೊಟೆಲ್‌ಗಳು ತೆರೆದಿದ್ದವು. ಚಿಕ್ಕೋಡಿಯಲ್ಲಿ ಎಂದಿನಂತೆ ಬೆಳಗ್ಗೆಯಿಂದ ಆಟೋ ಸೇರಿದಂತೆ ವಾಹನಗಳು ಸಂಚರಿಸುತ್ತಿವೆ. ಅಂಗಡಿ ಮುಂಗಟ್ಟುಗಳು ತೆರೆದಿದ್ದವು.
ಮೈಸೂರು ಪ್ರತಿಭಟನೆಗೆ ಸೀಮಿತ :
ಮೈಸೂರಲ್ಲಿ ಪ್ರತಿಭಟನೆಗಷ್ಟೇ ಬಂದ್ ಸೀಮಿತವಾಗಿತ್ತು. ಬೆಳಗ್ಗೆ ರಸ್ತೆ ತಡೆ ಮಾಡಿದ ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದ ಬಳಿಕ ಎಂದಿನಂತೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸೇರಿ ವ್ಯಾಪಾರ-ವಹಿವಾಟು ಆರಂಭವಾಗಿದೆ. ಬಂದ್‌ಗೆ ಬಹುತೇಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೋಟೆಲ್‌ಗಳಿಂದ ನೈತಿಕ ಬೆಂಬಲ :
ಹೋಟೆಲ್ ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಮೈಸೂರು ಜಿಲ್ಲಾ ವಕೀಲರ ಸಂಘ ಸೇರಿ ಹಲವರಿಂದ ನೈತಿಕ ಬೆಂಬಲ ವ್ಯಕ್ತವಾಗಿದೆ. ಸಾರಿಗೆ ಸಂಚಾರ ಎಂದಿನಂತೆಯೇ ಇರಲಿದೆ. ಹೋಟೆಲ್‌ಗಳಲ್ಲಿ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಲಾಗುತ್ತಿದೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಕನ್ನಡ ಪರ ಸಂಘಟನೆಗಳು ಬೆಳ್ಳಂಬೆಳಗ್ಗೆಯೇ ಪ್ರತಿಭಟನೆ ನಡೆಸಿದವು.
ಚಿಕ್ಕಮಗಳೂರಿನಲ್ಲಿ ಕನ್ನಡ ಪರ ಸಂಘಟನೆಗಳು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ಆಕೋಶ ವ್ಯಕ್ತಪಡಿಸಿವೆ. ಕನ್ನಡಿಗರ ಮೇಲೆ ಹಲ್ಲೆಯಾದರೂ ಈ ಸರ್ಕಾರ ಮೌನವಾಗಿದೆ. ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಮುಂದೆ ಉತ್ತರ ಸಿಗಲಿದೆ ಎಂದು ಕನ್ನಡಪರ ಒಕ್ಕೂಟದ ಜಿಲ್ಲಾಧ್ಯಕ್ಷ ರಾಜೇಗೌಡ ಆಕೋಶ ವ್ಯಕ್ತಪಡಿಸಿದ್ದಾರೆ.ಹೋಟೆಲ್, ಅಂಗಡಿಗಳನ್ನು ಪ್ರತಿಭಟನಾಕಾರರು ಬಲವಂತದಿಂದ ಬಂದ್ ಮಾಡಿಸುತ್ತಿದ್ದಾರೆ. ಅಂಗಡಿ, ಹೋಟೆಲ್ ತೆರೆಯದಂತೆ ಹೋರಾಟಗಾರರು ಸೂಚನೆ ನೀಡುತ್ತಿದ್ದರು.
ಧಾರವಾಡದಲ್ಲಿ ಸಹಜ ಸ್ಥಿತಿ :
ಧಾರವಾಡದಲ್ಲಿ ಬಂದ್‌ಗೆ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಎಂದಿನಂತೆಯೇ ಜನಜೀವನ, ವಾಹನ ಓಡಾಟ ಕಂಡುಬಂದಿದೆ. ಬೆಳಗಾವಿಯಲ್ಲಿ ಬಸ್ ನಿರ್ವಾಹಕನ ಮೇಲಿನ ಹಲ್ಲೆ ಖಂಡಿಸಿ ಧಾರವಾಡದಲ್ಲಿ ಈಗಾಗಲೇ ಪ್ರತಿಭಟನೆಗಳು ನಡೆದಿವೆ. ಹೀಗಾಗಿ ಇಂದಿನ ಬಂದ್‌ಗೆ ಬೆಂಬಲ ವ್ಯಕ್ತವಾಗಿಲ್ಲ.ವಿಜಯಪುರ ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಇತರ ಸಂಘ ಸಂಸ್ಥೆಗಳು ಸಾಂಕೇತಿಕವಾಗಿ ಬಂದ್‌ಗೆ ಬೆಂಬಲ ನೀಡಿವೆ.ಕರ್ನಾಟಕ ಬಂದ್‌ಗೆ ಚಾಮರಾಜನಗರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಸಂಚಾರ, ಆಟೋ ಓಡಾಟ, ಹೋಟೆಲ್ ಸೇವೆ ಸೇರಿದಂತೆ ಅಂಗಡಿಗಳು ತೆರೆದಿದ್ದು ಎಂದಿನಂತೆ ಜನಜೀವನ ಇರುವುದು ಕಂಡುಬಂದಿದೆ.
ನೀರಸ ಪ್ರತಿಕ್ರಿಯೆ :
ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದಾವಣಗೆರೆಯಲ್ಲಿಯೂ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್, ಆಟೋಗಳ ಸಂಚಾರ ಎಂದಿನಂತೆ ಆರಂಭವಾಗಿದೆ. ಅಹಿತಕರ ಘಟನೆ ನಡೆಯದಂತೆ ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಕೋಟೆ ನಾಡು ಚಿತ್ರದುರ್ಗದಲ್ಲಿಯೂ ಜನಜೀವನ ಎಂದಿನಂತೆಯೇ ಆರಂಭವಾಗಿದೆ. ಹೂವು, ಹಣ್ಣು, ಬೇಕರಿ, ಗೂಡಂಗಡಿ ವ್ಯಾಪಾರ ವಹಿವಾಟು, ಆಟೋ, ಬಸ್ ಸಂಚಾರ ಮಾಮೂಲಿಯಾಗಿತ್ತು. ಮಂಡ್ಯದ ಸಂಜಯ್ ವೃತ್ತದಲ್ಲಿ ನಡೆದಿರುವ ಪ್ರತಿಭಟನೆಯಲ್ಲಿ, ರಸ್ತೆಯಲ್ಲಿಯೇ ಮಲಗಿ ಪ್ರತಿಭಟನಾಕಾರರು ಆಕೋಶ ವ್ಯಕ್ತಪಡಿಸಿದರು.
ಮೆಜೆಸ್ಟಿಕ್ ಮೆಟೋ ನಿಲ್ದಾಣಕ್ಕೆ ಬಿಗಿ ಭದ್ರತೆ :
ಪ್ರತಿಭಟನಾಕಾರರು ಮೆಟೋ ನಿಲ್ದಾಣಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿರುವ ಕಾರಣ ಮೆಜೆಸ್ಟಿಕ್, ಮೆಟೋ ನಿಲ್ದಾಣಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. 1 ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿತ್ತು.





































ಮರಾಠಿ ಚಲನಚಿತ್ರ ಪ್ರದರ್ಶನ ರದ್ದು
ಟ್ರೇಲರ್‌ನಲ್ಲಿ ಬೆಳಗಾವಿ ಮಹಾರಾಷ್ಟ್ರದ್ದು ಎಂದು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಫಾಲೋವರ್‌ಮರಾಠಿ ಚಿತ್ರದ ವಿರುದ್ಧ ಸಿಡಿದೆದ್ದಿದ್ದಾರೆ. ಗಡಿ ವಿವಾದದ ಬಗ್ಗೆ ಬೆಳಕು ಚೆಲ್ಲುವ ಚಿತ್ರ ಇದಾಗಿದೆ ಎಂದು ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತೀವ್ರ ಆಕ್ರೋಶ ಹಿನ್ನೆಲೆಯಲ್ಲಿ ಚಿತ್ರಪ್ರದರ್ಶನವನ್ನು ರದ್ದುಪಡಿಸಲಾಗಿದೆ.
ಬೆಳಗಾವಿ ನಗರದ ಹರ್ಷದ್ ನಲವಡೆ ನಿರ್ಮಿಸಿರುವ ಸಿನಿಮಾ ಇದ್ದಾಗಿದ್ದು ಬೆಳಗಾವಿ ಐನಾಕ್‌್ಸ ಚಿತ್ರ ಮಂದಿರದಲ್ಲಿ ಇಂದು ರಾತ್ರಿ 8 ಗಂಟೆಗೆ ಮೊದಲ ಪ್ರದರ್ಶನ ನಡೆಯಬೇಕಿತ್ತು. ಈ ಸಿನಿಮಾದ ಟ್ರೇಲರ್ ನಲ್ಲಿ ಯಳ್ಳೂರ ಮಹಾರಾಷ್ಟ್ರ ನಾಮಫಲಕ ವಿವಾದ ಪ್ರಸ್ತಾಪಿಸಲಾಗಿದೆ. ಅದೇ ರೀತಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ ಎಂಬ ವಿಚಾರವನ್ನು ಉಲ್ಲೇಖಿಸಿದ್ದಾರೆ ಎಂದು ಕರವೇ ಕಾರ್ಯಕರ್ತರು ಆರೋಪಿಸಿ, ಚಿತ್ರದ ತಂಡದ ವಿರುದ್ಧ ಕಿಡಿಕಾರಿದರು.
ಸ್ಥಳಕ್ಕೆ ಖಡೇಬಜಾರ್ ಎಸಿಪಿ ಶೇಖರಪ್ಪ, ಸಿಪಿಐ ಅಲ್ತಾಫ್ ಮುಲ್ಲಾ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಕರವೇ ಕಾರ್ಯಕರ್ತರ ಆರೋಪವನ್ನು ಚಿತ್ರದ ತಂಡ ತಳ್ಳಿ ಹಾಕಿದೆ. ನಮ ಬೆಳಗಾವಿ ಹುಡುಗರು 7 ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಇದರಲ್ಲಿ ಯಾವುದೇ ರೀತಿ ಗಡಿ ವಿವಾದ ಇಲ್ಲವೇ ಇಲ್ಲ. ಮೂರು ಜನ ಸ್ನೇಹಿತರ ಸುತ್ತಲೂ ಕಥೆ ಸಾಗುತ್ತದೆ.
ಕನ್ನಡ ಭಾಷೆಯಲ್ಲೇ ಸಿನಿಮಾ ಪ್ರದರ್ಶಿಸುತ್ತಿದ್ದೇವೆ. ಒಂದು ಶೋ ರದ್ದಾದ್ರೆ ಎಷ್ಟು ನಷ್ಟ ಆಗುತ್ತದೆ ಎಂಬುದು ನಮಗೆ ಗೊತ್ತು. ರೋಟರ್ ಡ್ಯಾಮ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿದೆ. ಈಗ ಏಕಾಏಕಿ ಪ್ರದರ್ಶನ ರದ್ದು ಮಾಡಿದ್ದಾರೆ. ಮತ್ತೆ ಭಾನುವಾರ ಪ್ರದರ್ಶನ ಮಾಡುತ್ತೇವೆ. ನೀವೇ ಸಿನಿಮಾ ನೋಡಿ ಹೇಳಿ ಎಂದ ಚಿತ್ರ ತಂಡದ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.