ಬೆಂಗಳೂರು,ಅ.31- ಇದು ರಾಜ್ಯ ಕಂಡ ಪ್ರಪ್ರಥಮ ಏಕಪಕ್ಷದ ಸಮ್ಮಿಶ್ರ ಸರ್ಕಾರ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶುರುವಾದ ಕಲೆಕ್ಷನ್ ದಂಧೆ ಈಗ ತಮ್ಮ ಪಕ್ಷದಲ್ಲೇ ಕದನವನ್ನು ಶುರು ಮಾಡಿದೆ. ಇದರ ಪರಿಣಾಮವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸದ್ಯದಲ್ಲೇ ಸಿಎಂ ಸ್ಥಾನ ದಿಂದ ಸಿದ್ದರಾಮಯ್ಯ ಅವರನ್ನು ಇಳಿಸಿ ಸಿಎಂ ಆಗುತ್ತಾರೆ. ಈ ವಿಚಾರವನ್ನು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.
ಪ್ರಿಯಾಂಕ್ ಖರ್ಗೆಯವರು ತಮ್ಮ ತಂದೆಯವರ ಪ್ರಭಾವ ಬಳಸಿ ಎಲ್ಲೆಲ್ಲೂ ತಮ್ಮ ನಿರ್ಧಾರಗಳೇ ನಡೆಯಲಿ ಎನ್ನುತ್ತಿದ್ದಾರೆ. ಇನ್ನೊಂದೆಡೆ ಮೈಸೂರು ಪ್ರವಾಸದ ಪುಕಾರು ಹಬ್ಬಿಸಿ ಕೆಪಿಸಿಸಿ ಅಧ್ಯಕ್ಷರನ್ನೇ ಸತೀಶ್ ಜಾರಕಿಹೊಳಿಯವರು ಅಲುಗಾಡಿಸಿದ್ದಾರೆ. ಮತ್ತೊಂದು ಕಡೆ, ಕೆಲಸ ಬಿಟ್ಟು ವಿದೇಶಕ್ಕೆ ಹಾರಲು ಇತರ ಸನ್ಮಿತ್ರರು ಸಜ್ಜಾಗಿದ್ದಾರೆ ಎಂದು ಬಿಜೆಪಿ ಜಾಲತಾನ ಎಕ್ಸ್‍ನಲ್ಲಿ ಬರೆದುಕೊಂಡಿದೆ.
ಸರ್ದಾರ್ ಪಟೇಲ್‌ಗೆ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ನಮನ
ಅವರ ಪಕ್ಷದಲ್ಲಿ ಕತ್ತಲಾದ ಮೇಲಷ್ಟೇ ಚರ್ಚಿಸಬಹುದಾದ ವಿಚಾರ ಮತ್ತು ಲೆಕ್ಕಾಚಾರಗಳ ಮಾತುಕತೆಗೆ ಆಯ್ದ ಆಮಂತ್ರಿತರ ಡಿನ್ನರ್ ಆಯೋಜಿಸಲಾಗುತ್ತದೆ. ಹಣಕಾಸಿನ ಲೆಕ್ಕಾಚಾರಗಳಿರುವಾಗ ಈ ರೀತಿ ಭಿನ್ನಾಭಿಪ್ರಾಯಗಳು ಸಹಜವಾಗಿ ಇರುತ್ತದೆ. ಕಲೆಕ್ಷನ್ ವ್ಯವಹಾರ ಬದಿಗಿಟ್ಟು, ಹೊರ ರಾಜ್ಯಗಳ ಚುನಾವಣೆಗಳಿಗೆ ಫಂಡ್ ಕಳಿಸಲು ಅಸಾಧ್ಯ ಎಂಬುದನ್ನು ಹೈಕಮಾಂಡ್‍ಗೆ ತಿಳಿಸಿದರೆ ರಾಜ್ಯ ಸರ್ಕಾರ ಸುಲಲಿತವಾಗಿ ನಡೆಯುತ್ತದೆ ಎಂದು ಬಿಜೆಪಿ ಹೇಳಿಕೊಂಡಿದೆ.