ಬೆಂಗಳೂರು,ಡಿ.26- ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಪಕ್ಷದಲ್ಲಿ ಬಹುತೇಕ ತೆರೆಮರೆಗೆ ಸರಿದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಬಿಜೆಪಿಯನ್ನೇ ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ವಿಧಾನಸಭೆ, ವಿಧಾನ ಪರಿಷತ್‍ನ ನಾಯಕ, ಉಪನಾಯಕ, ಮುಖ್ಯ ಸಚೇತಕ ಹಾಗೂ ಪದಾಧಿಕಾರಿಗಳ ನೇಮಕಾತಿಯಲ್ಲಿ ಬಹುತೇಕ ತಮ್ಮ ಆಪ್ತರನ್ನೇ ನೇಮಿಸಿಕೊಳ್ಳುವಮೂಲಕ ಬಿಜೆಪಿ ಈಗ ಯಡಿಯೂರಪ್ಪನವರ ನಿಯಂತ್ರಣಕ್ಕೆ ಬಂದಿದೆ. ನಳೀನ್‍ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿದ್ದ ವೇಳೆ ಇಡೀ ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದಬ ಬಿ.ಎಲ್. ಸಂತೋಷ್ ಅವರ ನಿಯಂತ್ರಣದಲ್ಲಿತ್ತು.
ಈ ವೇಳೆ ಯಡಿಯೂರಪ್ಪನವರ ಬೆಂಬಲಿಗರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಯಾವಾಗ ವಿಧಾನಸಭೆ ಚುನಾವಣೆಯಲ್ಲಿ ಸಂತೋಷ್ ನಡೆಸಿದ ಪ್ರಯೋಗಗಳು ಸಂಪೂರ್ಣವಾಗಿ ಕೈಕೊಟ್ಟು ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ನಂತರ ಎಚ್ಚೆತ್ತುಕೊಂಡ ದೆಹಲಿ ನಾಯಕರು ಯಡಿಯೂರಪ್ಪನವರಿಗೆ ಮಣೆ ಹಾಕುವ ಅನಿವಾರ್ಯತೆಗೆ ಬಂದಿದ್ದಾರೆ. ಇದೀಗ ಯಡಿಯೂರಪ್ಪನವರು ಪಕ್ಷದ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾಗಿರುವುದರ ಜೊತೆಗೆ ಚುನಾವಣಾ ಸಮಿತಿ ಸದಸ್ಯರೂ ಕೂಡ ಆಗಿದ್ದಾರೆ.
ರಾಜ್ಯದಲ್ಲಿ ಯಡಿಯೂರಪ್ಪನವರನ್ನು ಕಡೆಗಣಿಸಿದರೆ ಬಿಜೆಪಿ ಮತ್ತಷ್ಟು ಪ್ರಪಾತಕ್ಕೆ ಕುಸಿಯಲಿದೆ ಎಂಬುದರ ಅರಿವು ತಿಳಿದೇ ರಾಷ್ಟ್ರೀಯ ನಾಯಕರು ಅವರ ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದರು. ಇದಕ್ಕೆ ಒಳಗೊಳಗೆ ಕೆಲವರು ವಿರೋಧ ವ್ಯಕ್ತಪಡಿಸಿದರೂ ದೆಹಲಿ ನಾಯಕರು ಜಪ್ಪಯ್ಯ ಎನ್ನಲಿಲ್ಲ. ಇನ್ನು ಅತ್ಯಂತ ಪ್ರಮುಖ ಹುದ್ದೆ ಎನಿಸಿದ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಆಯ್ಕೆ ವಿಷಯದಲ್ಲೂ ಯಡಿಯೂರಪ್ಪ ಮೇಲುಗೈ ಸಾಧಿಸಿದರು.
3 ಹೊಸ ಕ್ರಿಮಿನಲ್ ನ್ಯಾಯ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ
ಈ ಸ್ಥಾನದ ಮೇಲೆ ತಮ್ಮ ರಾಜಕೀಯ ಕಡುವೈರಿ ಬಸನಗೌಡ ಪಾಟೀಲ್ ಯತ್ನಾಳ್ ಕಣ್ಣಿಟ್ಟಿದ್ದರೂ ಯಡಿಯೂರಪ್ಪ ತಮ್ಮ ಪರಮಾಪ್ತ ಆರ್.ಅಶೋಕ್‍ಗೆ ಆ ಸ್ಥಾನವನ್ನು ಧಕ್ಕುವಂತೆ ಮಾಡುವಲ್ಲಿ ಯಶಸ್ವಿಯಾದರು. ಸೋಮವಾರ ಪ್ರಕಟಗೊಂಡ ವಿಧಾನಪರಿಷತ್ ಪ್ರತಿಪಕ್ಷದ ನಾಯಕ, ಉಪನಾಯಕ, ಮುಖ್ಯ ಸಚೇತಕರ ಆಯ್ಕೆಯಲ್ಲೂ ಬಿಎಸ್‍ವೈ ಮಾತಿಗೆ ಅಂತಿಮ ಮುದ್ರೆ ಒತ್ತಿದ್ದಾರೆ.
ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಉಪನಾಯಕ ಸುನಿಲ್ ವಲ್ಯಾಪುರೆ, ಮುಖ್ಯ ಸಚೇತಕ ಎನ್.ರವಿಕುಮಾರ್, ವಿಧಾನಸಭೆಯ ಮುಖ್ಯ ಸಚೇತಕ ದೊಡ್ಡನಗೌಡರ್ ಪಾಟೀಲ್ ಅವರ ಆಯ್ಕೆಯಲ್ಲೂ ಬಿಎಸ್‍ವೈ ಛಾಪು ಪ್ರಬಲವಾಗಿದೆ. ಪದಾಧಿಕಾರಿಗಳ ಪಟ್ಟಿ ವಿಷಯಕ್ಕೆ ಬಂದರೆ ಇಲ್ಲೂ ಕೂಡ ಯಡಿಯೂರಪ್ಪನವರೇ ಸುಪ್ರೀಂ ಆಗಿದ್ದಾರೆ. 10 ಉಪಾಧ್ಯಕ್ಷರ ನೇಮಕಾತಿಯಲ್ಲಿ ಆರು ಮಂದಿ ಬಿಎಸ್‍ವೈ ಬಣದವರು.
ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ರಾಜುಗೌಡ ನಾಯಕ್, ಹರತಾಳ್ ಹಾಲಪ್ಪ, ಭೈರತಿ ಬಸವರಾಜ್, ಎನ್.ಮಹೇಶ್ ಮತ್ತು ಎಂ.ರಾಜೇಂದ್ರ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ನಾಲ್ಕು ಮಂದಿ ಪದಾಧಿಕಾರಿಗಳ ನೇಮಕಾತಿಯಲ್ಲೂ ಯಡಿಯೂರಪ್ಪ ಸೂಚಿಸಿದ ಮೂವರಿಗೆ ಸ್ಥಾನ ಸಿಕ್ಕಿದೆ. ಮಾಜಿ ಶಾಸಕರಾದ ಪಿ.ರಾಜೀವ್, ಪ್ರೀತಂ ಗೌಡ, ನಂದೀಶ್ ರೆಡ್ಡಿ ಅವರುಗಳು ಬಿಎಸ್‍ವೈ ಬಣದಲ್ಲಿದ್ದವರು.
ಇಲ್ಲಿ ವಿವಿಧ ಮೋರ್ಚಾಗಳ ನೇಮಕಾತಿಯಲ್ಲೂ ಯಡಿಯೂರಪ್ಪನವರು ಸೂಚಿಸಿದವರಿಗೆ ಮಣೆ ಹಾಕಲಾಗಿದೆ. ಖಜಾಂಚಿಯಾಗಿ ನೂತನವಾಗಿ ನೇಮಕಗೊಂಡಿರುವ ಸುಬ್ಬ ನರಸಿಂಹ ಕೂಡ ಬಿಎಸ್‍ವೈ ಕಡೆಯವರು. ಮುಂದಿನ ವಾರ ಜಿಲ್ಲಾಧ್ಯಕ್ಷರ ನೇಮಕಾತಿ ನಡೆಯಲಿದ್ದು, ಅಲ್ಲೂ ಕೂಡ ಬಹುತೇಕ ಯಡಿಯೂರಪ್ಪನವರ ಬಣಕ್ಕೆ ಮನ್ನಣೆ ಸಿಗುವ ಸಂಭವವಿದೆ. ಪಕ್ಷದೊಳಗೆ ಯಡಿಯೂರಪ್ಪನವರ ಪ್ರಭಾವ ಮುಗಿಯಿತು ಎಂದು ಭಾವಿಸಿದ್ದವರಿಗೆ ಈ ಬೆಳವಣಿಗೆ ನಿದ್ದೆಗೆಡಿಸಿದೆ.