ಕಲಬುರಗಿ,ಜ.4-ಗುತ್ತಿಗೆದಾರ ಸಚಿನ್ ಪಾಂಚಾಳ್ ಆತಹತ್ಯೆ ಪ್ರಕರಣ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಇಂದು ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿತು.ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮುಖಂಡರಾದ ಸುನೀಲ್ ವಲ್ಯಾಪುರೆ, ಸಿ.ಟಿ.ರವಿ,
ಎಂ.ರವಿಕುಮಾರ್ ಸೇರಿದಂತೆ ಸುಮಾರು 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪ್ರಿಯಾಂಕ ಖರ್ಗೆ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದರು.
ಇಲ್ಲಿನ ಐವಾನ್-ಇ-ಶಾಹಿ ಪ್ರದೇಶದಲ್ಲಿರುವ ಖರ್ಗೆ ಅವರ ನಿವಾಸಕ್ಕೆ ಬಿಜೆಪಿ ಮುಖಂಡರು ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರೂ ಪೊಲೀಸರು ಅವಕಾಶ ಕೊಡಲಿಲ್ಲ.
ನಗರದ ಜಗತ್ ಸರ್ಕಲ್ನಿಂದ ಎಸ್ಪಿಪಿ ವೃತ್ತದವರೆಗೆ ಮುಂಜಾನೆಯಿಂದಲೇ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ಪ್ರತಿಭಟನಾಕಾರರನ್ನು ಮಾರ್ಗ ಮಧ್ಯದಲ್ಲೇ ತಡೆದರು.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಪ್ರಿಯಾಂಕ ಖರ್ಗೆ ಅವರ ನಿವಾಸವಿರುವ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿತ್ತು.
ಪಕ್ಕದ ಜಿಲ್ಲೆಗಳಾದ ಯಾದಗಿರಿ, ಬೀದರ್ನಿಂದಲೂ ಹೆಚ್ಚುವರಿಯಾಗಿ ಪೊಲೀಸರನ್ನು ಕರೆಸಿಕೊಂಡಿದ್ದರಿಂದ ಕಲಬುರಗಿ ಜಿಲ್ಲೆ ಇಂದು ಅಕ್ಷರಶಃ ಏಳು ಸುತ್ತಿನ ಕೋಟೆಯಾಗಿತ್ತು.
ಖರ್ಗೆಯವರ ನಿವಾಸದ ಸುತ್ತಮುತ್ತ ಯಾವುದೇ ವಾಹನಗಳು ಬಂದರೂ ತಪಾಸಣೆ ನಡೆಸಿಯೇ ಬಿಡಲಾಗುತ್ತಿತ್ತು. ಐಜಿಪಿ, ಕಲಬುರಗಿ ನಗರ ಪೊಲೀಸ್ ಆಯುಕ್ತರು, ಎಸ್ಪಿ ಹಾಗೂ ಡಿವೈಎಸ್ಪಿ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿತ್ತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವುಗಳು ನಡೆಯುತ್ತಿವೆ. ಗುತ್ತಿಗೆದಾರರು, ರೈತರ ಆತಹತ್ಯೆಗಳಾಗುತ್ತಿವೆ. ರಾಜ್ಯದಲ್ಲಿ ಹಣಕ್ಕಾಗಿ ವಸೂಲಿ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿರುವುದು ಪರ್ಸಂಟೇಜ್ ಸರ್ಕಾರ. ಕಾಂಗ್ರೆಸ್ನ ದುರಾಸೆಗೆ ಗುತ್ತಿಗೆದಾರರು ಸಾವನ್ನಪ್ಪುತ್ತಿದ್ದಾರೆ. ಕಾಮಗಾರಿಯಲ್ಲಿ ಕಂಟ್ರಾಕ್ಟರ್ ಬಳಿ ಆಕ್ರಮವಾಗಿ ಹಣ ಸುಲಿಗೆ ಮಾಡುವುದು ಮನೆ ಮಾತಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಲಂಚ ಜಾಸ್ತಿ ಆಗಿದೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಪಾಪರ್ ಆಗಿದೆ. ಎಲ್ಲಾ ದರ ಹೆಚ್ಚಳ ಆಗಿದೆ. ಬಿಜೆಪಿ ಅವರು 10 ವರ್ಷದಿಂದ ತೆರಿಗೆ ಭಾರ ಹಾಕಿಲ್ಲ. ಸಾರಿಗೆ ಇಲಾಖೆಗೆ ನಾನು ಬಂದಾಗ ಸಾವಿರ ಕೋಟಿ ಲಾಭ ಮಾಡಿದ್ದೇನೆ. ಆದರೆ ಈಗ ಏನಾಗಿದೆ? ಎಂದು ಪ್ರಶ್ನಿಸಿದರು.
ಇದು ಮನೆಹಾಳ ಸರ್ಕಾರ. ಸಿಎಂ ಸಿದ್ದರಾಮಯ್ಯ ಸರ್ಕಾರ ಲೂಟಿಕೋರರ ಹಿಡಿತದಲ್ಲಿದೆ. ರಾಜ್ಯ ಸರ್ಕಾರದ ಮೇಲೆ ಸಚಿನ್ ಮನೆಯವರಿಗೆ ನಂಬಿಕೆ ಇಲ್ಲ. ಹಾಗಾಗಿ ನಾವು ಅವರ ಪರವಾಗಿ ಇದ್ದೇವೆ ಎಂದು ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.ವಾಲೀಕಿ ಹಗರಣದಲ್ಲಿ ಈಗಾಗಲೇ ಒಬ್ಬ ಸಚಿವ ರಾಜೀನಾಮೆ ಕೊಟ್ಟಿದ್ದಾರೆ. ಶೀಘ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ತಲೆ ದಂಡ ಆಗುತ್ತದೆ. ಅವರಿಗೂ ಈಗ ನೋಟಿಸ್ ಬರುತ್ತದೆ. ಬಿಜೆಪಿ ಹೋರಾಟದ ಮೂಲಕ ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.