ಬೆಂಗಳೂರು,ಡಿ.7- ರಾಜ್ಯ ಬಿಜೆಪಿಯೊಳಗೆ ನಡೆಯುತ್ತಿರುವ ಬಣ ಬಡಿದಾಟಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರವಾಲ್ ಪಕ್ಷದ ಚೌಕಟ್ಟು ಮೀರಿ ವರ್ತಿಸದಂತೆ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪಕ್ಷದ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಇತ್ತೀಚಿನ ವಿದ್ಯಮಾನಗಳ ಬಗ್ಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೋರ್ ಕಮಿಟಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಆರ್.ಅಶೋಕ್ ಸೇರಿದಂತೆ ಪ್ರಮುಖರ ಜೊತೆ ಸಭೆ ನಡೆಸಿದರು.
ಇತ್ತೀಚೆಗೆ ಕರ್ನಾಟಕದ ಬಿಜೆಪಿಯೊಳಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕಾರ್ಯಕರ್ತರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಎಲ್ಲೇ ಹೋದರೂ ಇಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಸರ್ಕಾರದ ವಿರುದ್ದ ಸದನದ ಒಳಗೂ ಮತ್ತು ಹೊರಗೂ ಹೋರಾಟ ನಡೆಸಲು ಸಾಕಷ್ಟು ಅಸ್ತ್ರಗಳಿವೆ. ಆದೆ ನಮೊಳಗಿನ ಕಚ್ಚಾಟದಿಂದ ಆಡಳಿತ ಪಕ್ಷಕ್ಕೆ ನಾವೇ ಅಸ್ತ್ರಗಳ ಮೇಲೆ ಅಸ್ತ್ರ ನೀಡುತ್ತಿದ್ದೇವೆ. ಇದು ಪಕ್ಷದ ಸಂಘಟನೆಗೆ ಹಿನ್ನಡೆ ಉಂಟು ಮಾಡಿದೆ ಎಂದು ಅಗರವಾಲ್ ಸಿಡಿಮಿಡಿಗೊಂಡಿದ್ದಾರೆ.
ಒಬ್ಬರ ಮೇಲೆ ಇನ್ನೊಬ್ಬರು ನಿರಂತರವಾಗಿ ಟೀಕೆಗಳ ಮೇಲೆ ಟೀಕೆ ಮಾಡುತ್ತಿದ್ದೀರಿ. ಜನ ನಿಮನ್ನು ನೋಡಿ ಮಾತನಾಡುವಂತಾಗಿದೆ. ಸಾಮಾನ್ಯವಾಗಿ ಯಾವ ಪಕ್ಷ ಆಡಳಿತದಲ್ಲಿರುತ್ತದೆಯೋ ಆ ಪಕ್ಷವನ್ನು ಪ್ರತಿಪಕ್ಷಗಳು ತುದಿಗಾಲಲ್ಲಿ ನಿಲ್ಲಿಸಬೇಕು. ಕರ್ನಾಟಕದಲ್ಲಿ ಪರಿಸ್ಥಿತಿ ಮಾತ್ರ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ. ಅಧಿವೇಶನ ನಡೆಯಲು ಇನ್ನು ಎರಡು ದಿನ ಮಾತ್ರ ಬಾಕಿ ಇದೆ. ಮುಡಾ, ವಕ್‌್ಫ , ವಾಲೀಕಿ ಹಗರಣ ಸೇರಿದಂತೆ ಅನೇಕ ವಿಷಯಗಳನ್ನು ಸದನದಲ್ಲಿ ಚರ್ಚಿಸಬಹುದಿತ್ತು. ನಮೊಳಗಿನ ಕಚ್ಚಾಟವೇ ವಿಪಕ್ಷಗಳಿಗೆ ಆಹಾರವಾಗಿದೆ. ಬರುವ ದಿನಗಳಲ್ಲಿ ಪರಸ್ಪರ ನಿಂದನೆಗೆ ಕಡಿವಾಣ ಹಾಕಿ ಎಂದು ಸೂಚಿಸಿದ್ದಾಗಿ ಮೂಲಗಳು ತಿಳಿಸಿವೆ.
ನಾವು ವಿಜಯೇಂದ್ರ ಬಣ ಅಥವಾ ಯತ್ನಾಳ್ ಬಣ ಎಂದು ಭಾವಿಸಬೇಡಿ ಬಿಜೆಪಿಯಲ್ಲಿ ಇರುವುದು ಒಂದೇ ಬಣ. ಪಕ್ಷ ಒಂದು ಬಾರಿ ನಿರ್ಧಾರ ಮಾಡಿದ ಮೇಲೆ ಯಾರೊಬ್ಬರು ಪ್ರಶ್ನೆ ಮಾಡುವಂತಿಲ್ಲ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ ಮೇಲೆ ಯಾರಿಗೆ ಇಷ್ಟವೋ, ಕಷ್ಟವೋ ಒಪ್ಪಿಕೊಳ್ಳಲೇಬೇಕು. ಅವರ ವಿರುದ್ಧ ಬಹಿರಂಗ ಹೇಳಿಕೆ ನೀಡಬಾರದೆಂದು ತಾಕೀತು ಮಾಡಿದರು.
ಒಬ್ಬರಿಗೆ ಜವಾಬ್ದಾರಿ ಕೊಟ್ಟಿದ್ದರ ಹಿಂದೆ ವರಿಷ್ಠರು ನಾನಾ ಲೆಕ್ಕಾಚಾರಗಳನ್ನು ಹಾಕಿಕೊಂಡಿರುತ್ತಾರೆ. ಅವರ ನಿರ್ಧಾರ ಅಂತಿಮವಾದ ನಂತರ ಬೇರೊಬ್ಬರು ಪ್ರಶ್ನಿಸುವಂತಿಲ್ಲ ಎಂದು ಬಿ.ವೈ ವಿರೋಧಿ ಬಣಕ್ಕೆ ಎಚ್ಚರಿಕೆಯನ್ನು ಕೊಟ್ಟರು.
ಇನ್ನು ವಿಜಯೇಂದ್ರ ಮೇಲೂ ಕೆಲವು ಆರೋಪಗಳು ಕೇಳಿಬಂದಿವೆ. ಅದನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಬೇಕು. ಇನ್ನು ಮುಂದೆ ಬಿಜೆಪಿಯಲ್ಲಿ ಬಣ ಬಡಿದಾಟ ಪುನಾವರ್ತನೆಯಾಗದೆ ಅಂಥವರ ಮೇಲೆ ಶಿಸ್ತು ಕ್ರಮ ಗ್ಯಾರಂಟಿ ಎಂದು ಅಗರ್‌ವಾಲ್ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ಗೊತ್ತಾಗಿದೆ.