ಬೆಂಗಳೂರು,ಜ.29-ಕರ್ನಾಟಕ ಬಿಜೆಪಿ ಘಟಕದ ಬಣ ರಾಜಕೀಯದ ಪ್ರತ್ಯಾರೋಪ/ಪ್ರತ್ಯಾರೋಪ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಮಧ್ಯ ಪ್ರವೇಶಿಸಲೇ ಬೇಕಾದ ಅನಿವಾರ್ಯತೆಗೆ ಬಿಜೆಪಿ ಹೈಕಮಾಂಡ್ ಸಿಲುಕಿರುವುದರಿಂದ, ರಾಜ್ಯ ಘಟಕದಲ್ಲಿ ಆಮೂಲಾಗ್ರ ಬದಲಾವಣೆಗೆ ತಂತ್ರಗಾರಿಕೆ ರೂಪಿಸಿದೆ.
ಈಗಾಗಲೇ, ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದು ಬಹುತೇಕ ನಿಶ್ಚಿತಗೊಂಡಿದೆ. ಇದೇ ಸಮಯವನ್ನು ಬಳಸಿಕೊಂಡು, ಪ್ರಮುಖವಾಗಿ, ಎರಡು ಬಣಗಳ ನಡುವಿನ ಭಿನ್ನಮತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ಮತ್ತೆರಡು ಪ್ರಮುಖ ವಿಷಯವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಚುನಾವಣೆ ನಡೆದರೆ, ಸೋತ ಬಣಕ್ಕೆ ಹಿನ್ನಡೆಯಾಗುವುದು ಸಹಜ. ಅದಾದ ನಂತರ, ಮತ್ತೆ ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಎನ್ನುವ ಭೀತಿ, ಹೈಕಮಾಂಡಿಗೆ ಎದುರಾಗಿದೆ. ಹಾಗಾಗಿ, ಎರಡೂ ಬಣವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆ.
ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ಉಸ್ತುವಾರಿ ರಾಜ್ಯ ಬಿಜೆಪಿ ಘಟಕದಲ್ಲಿ ಅಷ್ಟೇನೂ ಪರಿಣಾಮವನ್ನು ಬೀರುತ್ತಿಲ್ಲ. ಜೊತೆಗೆ, ಕೆಲವು ದಿನಗಳ ಹಿಂದಿನ ಅವರ ಭೇಟಿ, ರಾಜ್ಯ ಬಿಜೆಪಿಯಲ್ಲಿ ಇನ್ನಷ್ಟು ರಂಪ ರಾಮಾಯಣವಾಗಲು ಕಾರಣವಾಯಿತು. ಜೊತೆಗೆ, ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ, ಅವರನ್ನು ಬಹಿರಂಗವಾಗಿಯೇ ಪಕ್ಷಪಾತಿ ಎಂದು ದೂರಿದ್ದರು.
ಹಾಗಾಗಿ, ಈ ಬಾರಿ ಕೇಂದ್ರ ಕೃಷಿ ಸಚಿವ ಮತ್ತು ಮೋದಿ ಕ್ಯಾಬಿನೆಟಿನ ಚಾಣಾಕ್ಷ ರಾಜಕಾರಣಿ ಎಂದು ಕರೆಯಲಾಗುವ ಶಿವರಾಜ್‌ಸಿಂಗ್ ಚವ್ಹಾಣ್ ಅವರನ್ನು ಸಂಧಾನ ಸೂತ್ರದ ಮೂಲಕ ಬೆಂಗಳೂರಿಗೆ ಕಳುಹಿಸಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿಯಿದೆ. ರಾಜ್ಯಾಧ್ಯಕ್ಷರ ಬದಲಾವಣೆಯ ಜೊತೆಗೆ, ಕೋರ್ ಕಮಿಟಿಯಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ.
ಅಧ್ಯಕ್ಷರ ಚುನಾವಣೆಯಲ್ಲಿ ಸೋಲುವ ಬಣದ ಪ್ರಮುಖರನ್ನೂ ಕೋರ್ ಕಮಿಟಿಯಲ್ಲಿ ಸೇರಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಅದರ ಪ್ರಕಾರ, ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ವಿಜಯೇಂದ್ರ, ಆರ್.ಅಶೋಕ್ ಬಳಿ ಪ್ರತ್ಯೇಕವಾಗಿ ಚರ್ಚೆ ನಡೆಸುವಂತೆ, ಶಿವರಾಜ್ ಸಿಂಗ್ ಅವರಿಗೆ ಸೂಚಿಸುವ ಸಾಧ್ಯತೆಯಿದೆ.
ಇದಲ್ಲದೇ, ಪದಾಧಿಕಾರಿಗಳ ಪಟ್ಟಿಯಲ್ಲೂ ಆಮೂಲಾಗ್ರ ಬದಲಾವಣೆ ತರಲು, ಹೈಕಮಾಂಡ್ ನಿರ್ಧರಿಸಿದೆ. ತಮಗೆ ಬೇಕಾದವರನ್ನು ಆಯ್ಕೆ ಮಾಡಲಾಗಿದೆ ಎನ್ನುವ ಆರೋಪವೂ ವಿಜಯೇಂದ್ರ ಅವರ ಮೇಲಿದೆ. ಹಾಗಾಗಿ, ಈ ವಿಚಾರದ ಮೂಲಕ ಮತ್ತೆ ತೊಂದರೆ ಬರುವುದು ಬೇಡವೆಂದು ಅದಕ್ಕೂ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ವಿಜಯೇಂದ್ರ ವಿರುದ್ದ ಆಕ್ರೋಶ ಹೊರಹಾಕುತ್ತಿರುವ ಬಿ.ಶ್ರೀರಾಮುಲು ಜೊತೆ ಮಾತುಕತೆ ನಡೆಸಲು ಆರ್.ಅಶೋಕ್ ಗೆ ಸೂಚಿಸಲಾಗಿದೆ. ಇಲ್ಲಿ ಮನವೊಲಿಕೆಯ ನಂತರ, ನಡ್ಡಾ ಮತ್ತು ಅಮಿತ್ ಶಾ ಜೊತೆ ಮಾತುಕತೆ ನಡೆಸಲು ದೆಹಲಿಗೆ ಕಳುಹಿಸುವ ಸಾಧ್ಯತೆ ಕೇಳಿ ಬರುತ್ತಿದೆ.
ಒಟ್ಟಿನಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಯ ಜೊತೆಗೆ, ಕೋರ್ ಕಮಿಟಿಯಲ್ಲಿ ಮತ್ತು ಪದಾಧಿಕಾರಿಗಳ ಬದಲಾವಣೆಯನ್ನು ಮಾಡುವ ಮೂಲಕ, ಬೇರಿನಿಂದಲೇ ಬಿಜೆಪಿ ಭಿನ್ನಮತ ಶಮನಕ್ಕೆ ಹೈಕಮಾಂಡ್ ಮುಂದಾಗಿದೆ. ಏನಾದರೂ ಮಾಡಿ, ಭಿನ್ನಮತವನ್ನು ಶಮನಗೊಳಿಸಿ ಎನ್ನುವುದು ಮೂಲ ಬಿಜೆಪಿ ಕಾರ್ಯಕರ್ತರ ನಿವೇದನೆಯಾಗಿದೆ.