ಬೆಂಗಳೂರು,ಜ.9- ಒಂದು ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಸ್ಪರ್ಧೆ ಮಾಡಲು ಇಬ್ಬರು ಕೇಂದ್ರ ಸಚಿವರು ಒಲವು ತೋರಿದ್ದಾರೆ. ಕೇಂದ್ರ ಸಚಿವರಾದ ವಿ.ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ತಮ ಆಪ್ತರ ಬಳಿ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕೇಂದ್ರದಲ್ಲಿ ಸಚಿವರಾಗಿದ್ದರೂ ರಾಜ್ಯ ರಾಜಕಾರಣದ ಮೇಲೆ ಹೆಚ್ಚು ಆಸಕ್ತಿ ಹೊಂದಿರುವ ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಚುನಾವಣೆಗೆ ನಿಲ್ಲುವ ಬದಲು ತಮನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇರವಾಗಿ ಆಯ್ಕೆ ಮಾಡುವಂತೆ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳು ತೀರಾ ವಿರಳ ಎಂದು ಹೇಳಲಾಗುತ್ತಿದೆಯಾದರೂ ಅಧ್ಯಕ್ಷ ಸ್ಥಾನದ ಮೇಲೆ ಈ ಇಬ್ಬರೂ ಸಚಿವರು ಕಣ್ಣಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ.
ವಿಜಯೇಂದ್ರ ಅವರನ್ನು ವಿರೋಧಿಸುತ್ತಿರುವ ಯತ್ನಾಳ್ ಬಣ ಶೋಭಾ ಇಲ್ಲವೇ ಸೋಮಣ್ಣ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆಸಿದೆ. ಚುನಾವಣೆ ನಡೆದಿದ್ದೇ ಆದರೆ ಬಹುತೇಕ ಜಿಲ್ಲಾಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ವಿಜಯೇಂದ್ರ ಬಣಕ್ಕೆ ನಿಷ್ಠುರರಾಗಿರುವುದರಿಂದ ಚುನಾವಣೆ ನಡೆಯುವ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿದೆ.
ಹಾಗೊಂದು ವೇಳೆ ಚುನಾವಣೆ ನಡೆದಿದ್ದೇ ಆದರೆ ಅದಕ್ಕೆ ಬೇಕಾದ ಅಗತ್ಯ ಪೂರ್ವ ಸಿದ್ಧತೆಗಳನ್ನು ಕೂಡ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅಧ್ಯಕ್ಷ ಸ್ಥಾನದಿಂದ ತಮ ಪುತ್ರನಿಗೆ ಹಿನ್ನೆಡೆಯಾಗಬಾರದು ಎಂಬ ಕಾರಣಕ್ಕಾಗಿ ಆಪ್ತರ ಬಳಿ ಈಗಾಗಲೇ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ರಾಜ್ಯ ರಾಜಕಾರಣದ ಮೇಲೆ ಸೋಮಣ್ಣ ಮತ್ತು ಶೋಭಾ ಕಣ್ಣಿಟ್ಟಿದ್ದರಾದರೂ ಪ್ರಧಾನಿ ನರೇಂದ್ರ ಮೋದಿ ಈ ಇಬ್ಬರನ್ನೂ ಸಂಪುಟದಿಂದ ಹೊರಗಿಡುವುದು ಕಷ್ಟಸಾಧ್ಯ. ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ವೇಳೆಯೇ ಜಾತಿ ಲೆಕ್ಕಾಚಾರ ಹಾಕಿಯೇ ಕರ್ನಾಟಕಕ್ಕೆ ಕೋಟಾವನ್ನು ನಿಗದಿಪಡಿಸಲಾಗಿತ್ತು. ಒಕ್ಕಲಿಗ ಸಮುದಾಯದಿಂದ ಶೋಭಾಕರಂದ್ಲಾಜೆ ಮತ್ತು ವೀರಶೈವ ಸಮುದಾಯದಿಂದ ವಿ.ಸೋಮಣ್ಣ ಅವರಿಗೆ ಸ್ಥಾನ ಕಲ್ಪಿಸಲಾಗಿತ್ತು. ಏಕಾಏಕಿ ತಾವು ರಾಜ್ಯರಾಜಕಾರಣಕ್ಕೆ ಮರಳುತ್ತೇವೆ ಎಂದು ಮೋದಿ ಬಳಿ ಉಭಯ ನಾಯಕರು ಮನವಿ ಮಾಡಿಕೊಂಡರೂ ಇದನ್ನು ಪ್ರಧಾನಿ ಒಪ್ಪುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.
2028 ರ ಕರ್ನಾಟಕ ವಿಧಾನಸಭೆಯನ್ನು ಗಮನದಲ್ಲಿಟ್ಟುಕೊಂಡೇ ಹಲವು ವಿರೋಧದ ನಡುವೆಯೇ ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಏಕಾಏಕಿ ವಿಜಯೇಂದ್ರ ಅವರನ್ನು ಬದಲಾವಣೆ ಮಾಡಿದರೆ ಪಕ್ಷದಿಂದ ದೂರ ಸರಿದಿರುವ ವೀರಶೈವ ಲಿಂಗಾಯತ ಸಮುದಾಯದ ಮತಗಳು ಇನ್ನಷ್ಟು ಛಿದ್ರವಾಗಬಹುದು ಎಂಬ ಕಾರಣಕ್ಕಾಗಿ ಅವರನ್ನೇ ಮುಂದುವರೆಸುವ ಸಾಧ್ಯತೆ ಇದೆ.