ಯಾರಿಗೂ ಬೇಡವಾದ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ.!

Social Share

ಬೆಂಗಳೂರು,ಆ.22- ಪಕ್ಷದಲ್ಲಿ ಇನ್ನೇನು ಮುಗಿದೇ ಬಿಟ್ಟಿತು ಎನ್ನುವಷ್ಟರಲ್ಲಿ ಯಾರೂ ನಿರೀಕ್ಷಿಸದ ರೀತಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಜೆಪಿ ಅತ್ಯುನ್ನತ ಸಂಸದೀಯ ಮಂಡಳಿ ಸ್ಥಾನ ಸಿಗುತ್ತಿದ್ದಂತೆ ರಾಜ್ಯಾಧ್ಯಕ್ಷ ಸ್ಥಾನ ಯಾರಿಗೂ ಕೂಡ ಬೇಡವಾಗಿದೆ.

ಒಂದು ಕಡೆ ಯಡಿಯೂರಪ್ಪ ಅವರು ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯರಾಗಿರುವುದು ಮತ್ತು ರಾಜ್ಯದವರೇ ಆದ ಬಿ.ಎಲ್.ಸಂತೋಷ್ ಕೂಡ ಇದೇ ಸಮಿತಿಯಲ್ಲಿರುವುದರಿಂದ ಬಿಜೆಪಿ ಸಾರಥ್ಯ ವಹಿಸಲು ಅನೇಕರು ಹಿಂದೇಟು ಹಾಕಿದ್ದಾರೆ.

ಇಬ್ಬರು ಪ್ರಬಲರ ನಡುವೆ ನಾವೇಕೆ ಇಲ್ಲದ ಉಸಾಬರಿ ವಹಿಸಿಕೊಳ್ಳೋಣ ಎಂಬ ಮನಸ್ಥಿತಿಯಲ್ಲಿರುವ ಕೆಲವು ಆಕಾಂಕ್ಷಿಗಳು ಈಗ ಹಿಂದಡಿ ಇಡಲಾರಂಭಿಸಿದ್ದಾರೆ. ಯಡಿಯೂರಪ್ಪ ನೇಮಕ ತರುವಾಯ ಈಗ ರಾಜ್ಯ ಬಿಜೆಪಿಯಲ್ಲಿ ಮಾತ್ರವಲ್ಲ ಕೇಂದ್ರ ಮಟ್ಟದಲ್ಲೂ ಕರ್ನಾಟಕ ವಿದ್ಯಮಾನಕ್ಕೆ ಸಂಬಂಧಪಟ್ಟಂತೆ ಈಗ ಎರಡು ಶಕ್ತಿ ಕೇಂದ್ರಗಳು ಸ್ಥಾಪನೆಯಾದಂತಾಗಿದೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕೂಡ ಯಡಿಯೂರಪ್ಪ ಅವರಷ್ಟೇ ಆಯಕಟ್ಟಿನ ಸ್ಥಾನದಲ್ಲಿ ಕೂರಿಸಿದೆ. ಹೀಗಾಗಿ ಈ ಎರಡು ಪ್ರಭಾವಿಗಳ ಮಧ್ಯೆ ಸಿಲುಕಿ ಹೈರಾಣಾಗುವುದಕ್ಕೆ ಬಿಜೆಪಿಯ ಎರಡನೇ ಹಂತದ ನಾಯಕರು ಸಿದ್ದರಿಲ್ಲ.

ಹಾಲಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವಧಿ ಈ ತಿಂಗಳು ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಇಂಧನ ಸಚಿವ ವಿ.ಸುನಿಲ್ ಕುಮಾರ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಅನೇಕರು ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕರೆ ಒಂದು ಕೈ ನೋಡೋಣ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಯಡಿಯೂರಪ್ಪ ಅವರ ಹಠಾತ್ ರಂಗಪ್ರವೇಶದಿಂದ ಇವರೆಲ್ಲರೂ ಈಗ ಬಹುತೇಕ ಶಸ್ತ್ರತ್ಯಾಗಕ್ಕೆ ಸಿದ್ದರಾಗಿದ್ದಾರೆ.

ಚುನಾವಣಾ ವರ್ಷದಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ರಾಜಕೀಯವಾಗಿ ಅನ್ಯಪಕ್ಷಗಳನ್ನು ಹಿಮ್ಮೆಟ್ಟಿಸುವುದಕ್ಕೆ ತಂತ್ರಗಾರಿಕೆಯನ್ನೂ ರೂಪಿಸಬೇಕಾಗುತ್ತದೆ. ಆದರೆ ಇಕ್ಕೆಲಗಳಲ್ಲಿ ಪಕ್ಷದ ಇಬ್ಬರು ಹಿರಿಯರು ನಿಂತಾಗ ತಮ್ಮತನ ತೋರಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ 2ನೇ ಹಂತದ ನಾಯಕರು ರಾಜ್ಯಾಧ್ಯಕ್ಷ ಸ್ಥಾನ ಸದ್ಯ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಬಿಜೆಪಿಯಲ್ಲಿ ಪದ್ದತಿಯಂತೆ ಮೂರು ವರ್ಷಗಳ ಕಾಲ ರಾಜ್ಯಾಧ್ಯಕ್ಷರ ಅಧಿಕಾರದ ಅವಧಿ ಇರುತ್ತದೆ. ಆಗಸ್ಟ್ ತಿಂಗಳಲ್ಲಿ ನಳೀನ್‍ಕುಮಾರ್ ಕಟೀಲ್ ಅವರ ಅವಧಿಯೂ ಮುಕ್ತಾಯವಾಗಲಿದೆ. ಆದರೆ ಅವರನ್ನೇ ಚುನಾವಣೆಯ ವರ್ಷದಲ್ಲೂ ರಾಜ್ಯಾಧ್ಯಕ್ಷರಾಗಿ ಮುಂದುವರಿಸುವ ಸಾಧ್ಯತೆ ಕಡಿಮೆ ಇದೆ. ಈ ನಿಟ್ಟಿನಲ್ಲಿ ನೂತನ ಸಾರಥಿ ಯಾರಾಗುತ್ತಾರೆ ಎಂಬುವುದು ಕುತೂಹಲ ಕೆರಳಿಸಿದೆ.

ನಳೀನ್‍ಕುಮಾರ್ ಕಟೀಲ್ ಉತ್ತಮ ಸಂಘಟಕನಾದರೂ ಮಾಸ್ ಆಗಿ ಜನರನ್ನು ಆಕರ್ಷಿಸಬಹುದಾದ ಶಕ್ತಿ ಹೊಂದಿಲ್ಲ ಎಂಬ ಅಭಿಪ್ರಾಯವಿದೆ. ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗದಲ್ಲಿ ಕಟೀಲ್ ತಮ್ಮ ಛಾಪು ಮೂಡಿಸುವಲ್ಲಿ ವಿಫಲರಾಗಿದ್ದಾರೆ.
ಇದೀಗ ಚುನಾವಣೆ ವರ್ಷವಾಗಿರುವುದರಿಂದ ಮತದಾರರನ್ನು ಸೆಳೆಯಲು ಪ್ರಖರ ಮಾತುಗಾರಿಕೆಯ ಸಾರಥ್ಯ ಅಗತ್ಯವಿದೆ ಎಂಬ ಚಿಂತನೆ ಬಿಜೆಪಿಯದ್ದು. ಈ ನಿಟ್ಟಿನಲ್ಲಿ ಉತ್ತಮ ವಾಗ್ಮಿಗೆ ಸಾರಥ್ಯ ನೀಡಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸುತ್ತಿದ್ದು, ಬಹುತೇಕ ಸಿ.ಟಿ ರವಿ ಹೆಸರು ಮುನ್ನಲೆಗೆ ಬಂದಿದೆ.

ಸದ್ಯ ಸಿ.ಟಿ.ರವಿಯವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಅವರಿಗೆ ಪಕ್ಷದ ರಾಜ್ಯ ಸಾರಥ್ಯವನ್ನು ನೀಡುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಇದರ ಜತೆಗೆ ಎಸ್‍ಸಿ ಎಸ್ ಟಿ ಹಾಗೂ ಹಿಂದುಳಿದ ವರ್ಗದಲ್ಲಿರುವವರ ಹುಡುಕಾಟವೂ ನಡೆದಿದೆ ಎನ್ನುತ್ತಿವೆ ಬಿಜೆಪಿ ಮೂಲಗಳು.

ಸಿ.ಟಿ ರವಿ ತಮ್ಮ ಪ್ರಖರ ಮಾತಿನಿಂದ ಗುರುತಿಸಿಕೊಂಡವರು. ಸಂಘದ ಹಿನ್ನೆಲೆಯಿಂದ ಬಂದ ಸಿ.ಟಿ ರವಿ ರಾಷ್ಟ್ರೀಯ ಮಟ್ಟದಲ್ಲೂ ಸಂಘಟನೆಯ ಅನುಭವ ಇದೆ. ಗೋವಾ, ತಮಿಳುನಾಡು ಉಸ್ತುವಾರಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಖರ ಹಿಂದುತ್ವದ ವಿವಾದಾತ್ಮಕ ಹೇಳಿಕೆಗಳಿಂದಲೂ ಸಿ.ಟಿ ರವಿ ಸುದ್ದಿಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಪಟ್ಟ ಕಟ್ಟುವ ಸಾಧ್ಯತೆ ಹೆಚ್ಚಾಗಿದೆ.

Articles You Might Like

Share This Article