ಬೆಂಗಳೂರು,ಮಾ.22- ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಭಿನ್ನಮತೀಯರ ಬಂಡಾಯ ಸೇರಿದಂತೆ ಪಕ್ಷದ ಸ್ಥಿತಿಗತಿಗಳ ಕುರಿತು ರಾಜ್ಯ ಬಿಜೆಪಿ ಘಟಕ ಕೇಂದ್ರ ವರಿಷ್ಠರಿಗೆ ವರದಿ ನೀಡಿದೆ. ಕೆಲವರು ಪಕ್ಷದ ಚೌಕಟ್ಟನ್ನು ದಾಟಿ ಮುಂದೆ ಹೋಗಿರುವುದರಿಂದ ಅವರನ್ನು ನಾವು ಮನವೊಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವರಿಷ್ಠರೇ ಮಧ್ಯಪ್ರವೇಶ ಮಾಡಬೇಕೆಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಪಕ್ಷದ ಹಿರಿಯರಾದ ಕೆ.ಎಸ್.ಈಶ್ವರಪ್ಪ , ಜೆ.ಸಿ.ಮಾಧುಸ್ವಾಮಿ, ಕರಡಿ ಸಂಗಣ್ಣ, ನಮ್ಮ ಸಂಧಾನಕ್ಕಾಗಲಿ ಇಲ್ಲವೇ ಮಾತುಕತೆಗೆ ಜಗ್ಗುತ್ತಿಲ್ಲ. ಅನೇಕ ಬಾರಿ ಅವರ ಜೊತೆ ನಡೆಸಿದ ಸಂಧಾನವು ವಿಫಲವಾಗಿದೆ. ದುಡುಕಿನ ನಿರ್ಧಾರ ಕೈಗೊಳ್ಳುವ ಮೊದಲು ಹಿರಿಯರು ಮಧ್ಯಪ್ರವೇಶಿಸುವಂತೆ ಕೋರಲಾಗಿದೆ.
ಶಿವಮೊಗ್ಗ, ದಾವಣಗೆರೆ, ಕೊಪ್ಪಳ, ಬೆಳಗಾವಿ, ಬೀದರ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಿನ್ನಮತ ತಾರಕಕ್ಕೇರಿದೆ. ಟಿಕೆಟ್ ಸಿಗದವರು ಅತೃಪ್ತಿ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಟಿಕೆಟ್ ಕೊಟ್ಟವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯ ಬಿಜೆಪಿ ಘಟಕದ ಎಲ್ಲ ನಾಯಕರು ಅವರ ಜೊತೆ ಸಂಪರ್ಕ ಸಾಧಿಸಲು ಯತ್ನಿಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಒಂದು ವೇಳೆ ಭಿನ್ನಮತೀಯರು ಸ್ಪರ್ಧೆ ಮಾಡಿದರೆ ಅಧಿಕೃತ ಅಭ್ಯರ್ಥಿಗೆ ಹಿನ್ನಡೆಯಾಗಬಹುದು. ಹೀಗಾಗಿ ತುರ್ತಾಗಿ ಮಧ್ಯಪ್ರವೇಶಿಸುವಂತೆ ಕೋರಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಟಿಕೆಟ್ ವಂಚಿತರಾಗಿರುವ ನಾಯಕರ ಜೊತೆ ವರಿಷ್ಠರು ಸಾಲು ಸಾಲು ಸಭೆ ನಡೆಸಿದರೂ ಅಸಮಾಧಾನದ ಕಿಚ್ಚು ಮಾತ್ರ ಕಡಿಮೆಯಾಗುತ್ತಿಲ್ಲ. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಬದಲಾವಣೆಯ ಕೂಗು ಕೇಳಿ ಬಂದಿದೆ. ಇತ್ತ ಮಗನಿಗೆ ಹಾವೇರಿ-ಗದಗ ಟಿಕೆಟ್ ತಪ್ಪಿದ್ದಕ್ಕೆ ಬಂಡಾಯದ ಬಾವುಟ ಹಿಡಿದಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ತೊಡೆ ತಟ್ಟಿದ್ದಾರೆ.
ಬಂಡಾಯ ಬಾವುಟ ಹಿಡಿದಿರುವ ಕೆಎಸ್ ಈಶ್ವರಪ್ಪ ಬಿಜೆಪಿಯ ಹಿರಿಯ ನಾಯಕ. ತಮ್ಮದೇ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರೂ ಈಶ್ವರಪ್ಪ ಗೈರಾಗುವ ಮೂಲಕ ಬಿಜೆಪಿಗೆ ಮುಜುಗರ ಉಂಟು ಮಾಡಿದ್ದರು.ಎಷ್ಟೇ ಮನವಿ ಮಾಡಿದರೂ ಅತೃಪ್ತರು ಸಮಾಧಾನಗೊಳ್ಳದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಎಲ್ಲರ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್‍ಗೆ ರವಾನಿಸಿದ್ದು, ಎಚ್ಚರಿಕೆ ಸಂದೇಶ ನೀಡುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಹಲವೆಡೆ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಬಂಡಾಯದ ಕೂಗು ಕೇಳಿ ಬರುತ್ತಿದೆ. ಪಕ್ಷ ವಿರೋಧಿ ಚಟುವಟಿಕೆಗಳಿಂದ ಚುನಾವಣೆಯಲ್ಲಿ ಹಿನ್ನಡೆ ಆತಂಕವೂ ಬಿಜೆಪಿಗೆ ಉಂಟಾಗಿದೆಯಂತೆ. ಇದು ಹೀಗೆಯೇ ಮುಂದುವರಿದರೆ 25+ ಗುರಿ ತಲುಪಲು ಹಿನ್ನಡೆಯಾಗುತ್ತದೆ ಎಂದು ಪಕ್ಷದ ವರಿಷ್ಠರು ಆತಂಕ ವ್ಯಕ್ತಪಡಿಸಿದ್ದಾರೆ.
ಪಕ್ಷದ ನಾಯಕರೇ ಒಳೇಟು ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆ ಅತೃಪ್ತರಿಗೆ ಶೀಘ್ರವೇ ಹೈಕಮಾಂಡ್‍ನಿಂದ ಸಂದೇಶ ರವಾನೆಯಾಗುವ ಸಾಧ್ಯತೆಗಳಿವೆ.ಇನ್ನು ಬೆಳಗಾವಿಯದ್ದು ಮತ್ತೊಂದು ಕಥೆ. ಈ ಕ್ಷೇತ್ರದ ಅಭ್ಯರ್ಥಿಯ ಘೋಷಣೆಗೂ ಮುನ್ನವೇ ಸಂಭವನೀಯ ಕ್ಯಾಂಡಿಟೇಟ್ ಆಗಿರೋ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಗೋಬ್ಯಾಕ್ ಅಭಿಯಾನ ಶುರುವಾಗಿದೆ. ಗೋಬ್ಯಾಕ್ ಕ್ಯಾಂಪೇನ್ ವಿರುದ್ಧ ಬಿಜೆಪಿ ನಾಯಕರು ದೂರು ಸಲ್ಲಿಸಿದ್ದಾರೆ. ಬಿಜೆಪಿ ಮಹಾನಗರ ಘಟಕದಿಂದ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ನಾಯಕರಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.