Friday, January 10, 2025
Homeರಾಜ್ಯಡಿನ್ನರ್‌ ಮೀಟಿಂಗ್‌ಗೆ ಟ್ವಿಸ್ಟ್ : ಜ.13ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್‌‍

ಡಿನ್ನರ್‌ ಮೀಟಿಂಗ್‌ಗೆ ಟ್ವಿಸ್ಟ್ : ಜ.13ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್‌‍

ಬೆಂಗಳೂರು,ಜ.9- ಅಧಿಕಾರ ಹಂಚಿಕೆಯ ಸೂತ್ರ, ಡಿನ್ನರ್‌ ಮೀಟಿಂಗ್‌ ಸೇರಿದಂತೆ ಹಲವಾರು ಗೊಂದಲಗಳಿಂದ ನಗೆಪಾಟಲಿಗೆ ಈಡಾಗಿರುವ ಕಾಂಗ್ರೆಸ್‌‍ ಪಕ್ಷವನ್ನು ತಹಬಂದಿಗೆ ತರಲು ಶಾಸಕಾಂಗ ಸಭೆ ಕರೆದಿರುವುದು ತೀವ್ರ ಕುತೂಹಲ ಕೆರಳಿಸಿದ್ದು, ಮತ್ತೊಂದು ಸುತ್ತಿನ ಜಿದ್ದಾಜಿದ್ದಿನ ರಾಜಕಾರಣಕ್ಕೆ ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ. ಜ.13 ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಚರ್ಚೆ ಮಾಡಲು ದೊಡ್ಡ ಪಟ್ಟಿಯ ಕಾರ್ಯಸೂಚಿಯೇ ಸಿದ್ಧವಾಗಿದೆ. ಬಹಳಷ್ಟು ಶಾಸಕರು ತಮಗೆ ಅನುದಾನ ಸಿಗುತ್ತಿಲ್ಲ ಎಂದು ಪದೇಪದೇ ಹೇಳುತ್ತಿರುವುದು ಒಂದಷ್ಟು ಗೊಂದಲಗಳಿಗೆ ಕಾರಣವಾಗಿದೆ.

ಸಚಿವರುಗಳು ಶಾಸಕರನ್ನು ಕಡೆಗಣಿಸುತ್ತಿದ್ದಾರೆ. ಅನುದಾನವನ್ನೇ ಬಿಡುಗಡೆ ಮಾಡುತ್ತಿಲ್ಲ. ಯಾವ ಅಭಿವೃದ್ಧಿ ಕೆಲಸಗಳೂ ನಡೆಯುತ್ತಿಲ್ಲ. ಪ್ರತಿ ಕ್ಷೇತ್ರಕ್ಕೆ ಸರಾಸರಿ 250 ಕೋಟಿ ರೂ. ಆರ್ಥಿಕ ನೆರವು ಪಂಚಖಾತ್ರಿಗಳ ಮೂಲಕ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಆದರೆ ಇದಕ್ಕೂ, ಶಾಸಕರಿಗೂ ಸಂಬಂಧವೇ ಇಲ್ಲ ಎಂಬಂತಾಗಿದೆ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗಳಿಗೆ ವಿಶೇಷ ಅನುದಾನ ನೀಡಬೇಕು ಎಂದು ಹಲವು ಮಂದಿ ಶಾಸಕರು ಒತ್ತಡ ಹೇರುತ್ತಿದ್ದಾರೆ. ಸಚಿವರ ಕಚೇರಿಗಳಿಗೆ ಭೇಟಿ ನೀಡಿದರೆ ಸರಿಯಾದ ಗೌರವ ಸಿಗುತ್ತಿಲ್ಲ. ಕೆಲವು ಸಚಿವರಂತೂ ಗಂಟೆಗಟ್ಟಲೆ ಕಾಯಿಸುತ್ತಾರೆ. ಯಾವುದೇ ಪ್ರಸ್ತಾವನೆಗಳನ್ನು ಸಲ್ಲಿಸಿದರೂ ಹಣ ಇಲ್ಲ ಎಂಬುದು ಸಿದ್ಧ ಉತ್ತರವಾಗಿದೆ ಎಂಬುದು ಶಾಸಕರ ಅಳಲು.

ಇದಕ್ಕೆ ತಕ್ಕ ಹಾಗೆ ಹಣ ಇಲ್ಲ ಎಂಬುದು ಗೊತ್ತಿದ್ದರೂ ಶಾಸಕರು ಉದ್ದೇಶಪೂರ್ವಕವಾಗಿಯೇ ಹೊಸ ಪ್ರಸ್ತಾವನೆಗಳನ್ನು ತಂದು ಕಿರಿಕಿರಿ ಮಾಡುತ್ತಿದ್ದಾರೆ. ಪ್ರತಿದಿನ ಶಾಸಕರನ್ನು ನಿಭಾಯಿಸುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಸಚಿವರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದರ ನಡುವೆ ನಿಗಮ-ಮಂಡಳಿಗಳ ಸದಸ್ಯರು, ನಿರ್ದೇಶಕರ ನೇಮಕಾತಿಗೆ ವಿಳಂಬವಾಗಿದೆ. ಕೆಲವರನ್ನು ನೇಮಿಸಿರುವುದರಲ್ಲೂ ಗೊಂದಲಗಳಿವೆ. ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ. ಶಾಸಕರ ಅಭಿಪ್ರಾಯಗಳನ್ನು ಮಾನ್ಯ ಮಾಡಿಲ್ಲ ಎಂಬೆಲ್ಲಾ ಆರೋಪಗಳಿವೆ.

ಒಂದೆಡೆ ಆಡಳಿತಾತಕ ವಿಚಾರಗಳು ಗೊಂದಲಕಾರಿಯಾಗಿದ್ದರೆ ಮತ್ತೊಂದೆಡೆ ಅಧಿಕಾರ ಹಂಚಿಕೆಯ ತಗಾದೆಗಳು ಪಕ್ಷಕ್ಕೆ ಹೆಚ್ಚು ಹಾನಿ ಮಾಡುತ್ತಿವೆ. ಒಂದಷ್ಟು ದಿನ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಕುರಿತು ಚರ್ಚೆಯಾಗಿತ್ತು. ಈಗ ಮತ್ತೆ ಅದೇ ಬೇಡಿಕೆಯನ್ನು ಮುನ್ನೆಲೆಗೆ ತರುವ ಚರ್ಚೆಗಳಾಗುತ್ತಿವೆ. ಇದರ ಸುಳಿವರಿತ ಡಿ.ಕೆ.ಶಿವಕುಮಾರ್‌ ಹಂತಹಂತವಾಗಿ ಡಿನ್ನರ್‌ ಮೀಟಿಂಗ್‌ಗಳಿಗೆ ಕಡಿವಾಣ ಹಾಕುತ್ತಿದ್ದಾರೆ. ಈ ವಿಚಾರವಾಗಿಯೇ ಸಚಿವ ಕೆ.ಎನ್‌.ರಾಜಣ್ಣ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು ಹೈಕಮಾಂಡ್‌ ಅನ್ನು ಕೂಡ ದಲಿತ ವಿರೋಧಿ ಎಂದು ಟೀಕಿಸಿದ್ದಾರೆ.

ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಒಬ್ಬೊಬ್ಬರಾಗಿ ಪಕ್ಷವಿರೋಧಿ ಹೇಳಿಕೆಗಳನ್ನು ನೀಡುವ ಸಾಧ್ಯತೆಯಿದ್ದು, ಅದಕ್ಕೆ ಕಡಿವಾಣ ಹಾಕಲೇಬೇಕೆಂಬ ಕಾರಣಕ್ಕಾಗಿ ಶಾಸಕಾಂಗ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಸಚಿವರು ಮತ್ತು ಶಾಸಕರಿಗೆ ಮುಕ್ತವಾಗಿ ಮಾತನಾಡಲು ಅವಕಾಶ ನೀಡಿ ಏಕಕಾಲಕ್ಕೆ ಎಲ್ಲಾ ಗೊಂದಲಗಳನ್ನು ಬಗೆಹರಿಸುವ ಪ್ರಯತ್ನವನ್ನು ರಾಜ್ಯ ನಾಯಕರು ಮಾಡಲಿದ್ದಾರೆ.
ಹೈಕಮಾಂಡ್‌ ಪರವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಜೈಬಾಪು, ಜೈಭೀಮ್‌, ಜೈಸಂವಿಧಾನ್‌ ಘೋಷಣೆಯ ಗಾಂಧಿ ಭಾರತ ಸಮಾವೇಶ ಮುಂದೂಡಿಕೆಯಾಗಿತ್ತು. ಅದಕ್ಕೆ ಮರುದಿನಾಂಕ ನಿಗದಿಯಾಗಿದ್ದು, ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಸೂಚನೆ ನೀಡುವ ಸಲುವಾಗಿ ಶಾಸಕಾಂಗ ಸಭೆ ಕರೆದಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಆದರೆ ಸಭೆಯ ಮೂಲ ಉದ್ದೇಶವೇ ಒಳಬೇಗುದಿಯನ್ನು ತಣಿಸುವುದಾಗಿದೆ ಎಂಬುದಂತೂ ಸ್ಪಷ್ಟ.

RELATED ARTICLES

Latest News