ಬೆಂಗಳೂರು. ಅ.11– ಕನ್ನಡ ಭೂಮಿಯಲ್ಲಿ ಕನ್ನಡ ಕಲಿಕೆ ಕಡ್ಡಾಯ. ಸ್ವಾಭಿಮಾನ, ಹೆಮ್ಮೆ ಇರಬೇಕು. ಈ ನಿಟ್ಟಿನಲ್ಲಿ ಬರುವ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಎಲ್ಲಾ ಶಾಲಾ-ಕಾಲೇಜುಗಳಲ್ಲಿ, ಕಾರ್ಖಾನೆಗಳು, ಐಟಿಬಿಟಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟವನ್ನು ಹಾರಿಸಬೇಕು ಎಂದು ಆದೇಶ ಹೊರಡಿಸಲಾಗಿದೆ ಎಂದು ಡಿಸಿಎಂ ಹಾಗೂ ಬೆಂಗಳೂರು ಉಸ್ತುವಾರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೆಂಗಳೂರಿನಲ್ಲಿ ಶೇ.50 ರಷ್ಟು ಪರಭಾಷಿಗರಿದ್ದಾರೆ. ಹೊರ ರಾಜ್ಯಗಳಿಂದ ಬಂದಿದ್ದಾರೆ. ಅವರು ಇಲ್ಲಿ ಕನ್ನಡ ಕಲಿಯುವುದು ಅವಶ್ಯಕ ಮತ್ತು ಮುಂದಿನ ಪೀಳಿಗೆಗೂ ಕನ್ನಡದ ಸ್ವಾಭಿಮಾನ ಮತ್ತು ಹಿರಿಮೆಯನ್ನು ತಿಳಿಸಲು ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕನ್ನಡ ಬಾವುಟ ಹಾರಿಸುವುದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ನಡೆಸಬೇಕು ಎಂದು ಆದೇಶಿಸಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.
ಐಟಿಬಿಟಿ ಕಂಪನಿಗಳು ಕೂಡ ತಮ್ಮ ಕಟ್ಟಡದ ಮೇಲೆ ಕನ್ನಡ ಧ್ವಜವನ್ನು ಹಾರಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಅವರಿಗೆ ಬಿಟ್ಟಿದ್ದು. ಆದರೆ ಕನ್ನಡ ನಾಡಿನಲ್ಲಿ ಇದ್ದ ಮೇಲೆ ಇಲ್ಲಿನ ನೆಲದ ಬಗ್ಗೆ ಗೌರವ ಇರಬೇಕು. ಕನ್ನಡವೇ ಬದುಕು ಎಂದು ಅರಿಯಬೇಕು. ಈ ನಿಟ್ಟಿನಲ್ಲಿ ಹೇಗೆ ನಾವು ಸ್ವಾತಂತ್ರ‍್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆಯೋ ಅದೇ ರೀತಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು. ವಿಶೇಷವಾಗಿ ಇದರ ಛಾಯಾಚಿತ್ರಗಳನ್ನು ಮುಂದಿನ ದಿನಗಳಲ್ಲಿ ನೀಡುವ ನಂಬರ್‌ಗೆ ಪೋಸ್ಟ್ ಮಾಡಬೇಕು ಎಂದು ಕಟ್ಟಪ್ಪಣೆ ಮಾಡಿದರು.
ಈ ನಡುವೆ ಇದು ಕಡ್ಡಾಯವೇ? ಎಂದು ಪ್ರಶ್ನಿಸಿದಾಗ, ವಿಶೇಷವಾಗಿ ಬೆಂಗಳೂರಿನಲ್ಲಿ ನಾವಿದ್ದೇವೆ. ಇಲ್ಲಿ ನಮ್ಮ ಸಂಸ್ಕೃತಿಯನ್ನು ಇತರರಿಗೂ ತಿಳಿಸಬೇಕು. ಕನ್ನಡ ನಾಡಿನ ಹಿರಿಮೆಯನ್ನು ನಮ್ಮ ಕವಿಗಳು ಹೊಗಳಿದ್ದಾರೆ. ಇದು ಜಗತ್ ಪ್ರಸಿದ್ಧವಾಗಿದೆ. ಹೀಗಿರುವಾಗ ಅವರು ಸಂಭ್ರಮಿಸುವುದು ಅಗತ್ಯವಲ್ಲವೇ ಎಂದರು. ಉಳಿದಂತೆ ಕೇವಲ ಧ್ವಜ ಹಾರಿಸುವುದಷ್ಟೇ ಅಲ್ಲ, ಕಾರ್ಖಾನೆಗಳಲ್ಲಿ, ಅಲ್ಲಿರುವ ಸಿಬ್ಬಂದಿಗಳು, ನೌಕರರಿಗೂ ಕನ್ನಡದ ಪ್ರೀತಿ ಹುಟ್ಟಿಸಬೇಕು ಮತ್ತು ಕನ್ನಡದ ಹಿರಿಮೆಯನ್ನು ಅವರಿಗೆ ತಿಳಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಏಕೀಕರಣಗೊಂಡು 50 ವರ್ಷ ಪೂರ್ಣಗೊಳ್ಳುತ್ತಿರುವುದರಿಂದ ನ.1 ನಮ್ಮ ಕನ್ನಡಿಗರಿಗೆ ವಿಶೇಷವಾದ ಹಬ್ಬ. ಇದನ್ನು ಬೆಂಗಳೂರಿನಲ್ಲಿ ವಿಶೇಷವಾಗಿ ಆಚರಿಸಬೇಕು ಎಂದು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಈಗಾಗಲೇ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡ ವಿಷಯ ಬೋಧನೆ ಮಾಡುವುದು ಕಡ್ಡಾಯವೆಂದು ತಿಳಿಸಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಇದನ್ನು ನೆನಪಿಸುವ ನಿಟ್ಟಿನಲ್ಲಿ ನ.1 ರಂದು ನಗರದಲ್ಲಿ ವಿಜೃಂಭಣೆಯ ಕಾರ್ಯಕ್ರಮ ನಡೆಯಲಿದೆ ಎಂದರು.