ಬೆಂಗಳೂರು,ಜೂ.13- ಕರ್ನಾಟಕವನ್ನು ದೇಶದಲ್ಲೇ ನಂ.1 ಉತ್ಪಾದನಾ ವಲಯವನ್ನಾಗಿ ಅಭಿವೃದ್ಧಿಪಡಿಸಲು ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ತಮ ಇಲಾಖೆಯ 2 ವರ್ಷಗಳ ಸಾಧನೆ ಹಾಗೂ ಭವಿಷ್ಯದ ಪಥ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಯೆಟ್ನಾಂ ಹಾಗೂ ಇತರ ದೇಶಗಳಂತೆ ಕರ್ನಾಟಕದಲ್ಲೂ ಉತ್ಪಾದನಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಈಗ ನಾಲ್ಕನೇ ಸ್ಥಾನದಲ್ಲಿರುವ ರಾಜ್ಯವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಶ್ರೀನಿವಾಸಪುರದಲ್ಲಿ ಫಾರ್ಮ ಪಾರ್ಕ್, ವಿಜಯಪುರದಲ್ಲಿ ಎಲೆಕ್ಟ್ರಿಕಲ್ ಸೆಲ್ ಉತ್ಪಾದನೆ, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್, ಹುಬ್ಬಳ್ಳಿಯಲ್ಲಿ ನವೋದ್ಯಮ ಹಾಗೂ ಭವಿಷ್ಯದ ತಾಂತ್ರಿಕ ಅಭಿವೃದ್ಧಿ, ದಾಬಸ್ಪೇಟೆ-ದೊಡ್ಡಬಳ್ಳಾಪುರ ನಡುವೆ ಆರೋಗ್ಯ, ಶಿಕ್ಷಣ ಸೇವೆಗಳ ಮೂಲಕ ಕ್ಲೀನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಡೆ ವಿಶೇಷ ಪಾರ್ಕ್ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಹುಬ್ಬಳ್ಳಿಯ ಎನ್ಜಿಎಫ್ ಅನ್ನು ಪುನರುಜ್ಜೀವನ ಗೊಳಿಸಲಾಗುವುದು. ಎಂಎಸ್ಐಎಲ್ನ ಚಿಟ್ ಫಂಡ್ ವಹಿವಾಟನ್ನು 5 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
ಮೈಸೂರು ಸ್ಯಾಂಡಲ್ನ ಕೆಎಸ್ಡಿ ಸಿಎಲ್ ವಹಿವಾಟು ಈ ತಿಂಗಳಿನಲ್ಲಿ 180 ಕೋಟಿ ರೂ. ದಾಟಿದ್ದು ಐತಿಹಾಸಿಕ ದಾಖಲೆಯಾಗಿದೆ. ಒಟ್ಟು ವಹಿವಾಟನ್ನು ಮುಂದಿನ 3 ವರ್ಷದಲ್ಲಿ 5 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವ ಗುರಿ ಇದೆ ಎಂದರು. ಬಂಡವಾಳ ಹೂಡಿಕೆಯಲ್ಲಿ ಗಣನೀಯ ಸಾಧನೆಯಾಗಿದೆ. 115 ಒಡಂಬಡಿಕೆಗಳಿಂದ 6,58,660 ಕೋಟಿ ರೂ. ಹೂಡಿಕೆಯಾಗಿದ್ದು, 2,32,771 ಕೋಟಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಏಕಗವಾಕ್ಷಿ ಅನುಮೋದನಾ ಸಮಿತಿ 1,13,200 ಕೋಟಿ ರೂ. ಹೂಡಿಕೆಯ 906 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದ್ದು, 2,23,982 ಉದ್ಯೋಗಗಳು ಸೃಷ್ಟಿಯಾಗುತ್ತವೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 3,550 ಉದ್ಯೋಗಿಗಳು ಭಾಗವಹಿಸಿದ್ದು, 6,23,957 ಕೋಟಿ ರೂ.ಗಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳ ಲಾಗಿದೆ. ಅದರಲ್ಲಿ 4.03 ಲಕ್ಷ ಕೋಟಿ ರೂ. ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಶೇ.75 ರಷ್ಟು ಬೆಂಗಳೂರಿನ ಹೊರವಲಯದಲ್ಲಿದ್ದು, ಶೇ.45 ರಷ್ಟು ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆಯಾಗುತ್ತದೆ ಎಂದರು.
ಬಂಡವಾಳ ಹೂಡಿಕೆದಾರರಿಗೆ ಉದ್ಯೋಗ ಸೃಷ್ಟಿ, ಹೂಡಿಕೆ, ಪರಿಸರ ಸ್ನೇಹಿ ಕ್ರಮಗಳನ್ನು ಆಧರಿಸಿ ವಿವಿಧ ರಿಯಾಯಿತಿ ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತದೆ. ಕೈಗಾರಿಕಾ ಪ್ರದೇಶಗಳಿಗೆ ಸಮರ್ಪಕ ನೀರಿನ ವ್ಯವಸ್ಥೆಗಾಗಿ 3,600 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. 18 ಪ್ರದೇಶಗಳಲ್ಲಿ 44,165 ಎಕರೆಯಲ್ಲಿ ವಿಶೇಷ ಹೂಡಿಕೆ ವಲಯಗಳನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದರು. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಮೂರನೇ ಸ್ಥಾನದಿಂದ ಕರ್ನಾಟಕ, 2024-25ನೇ ಸಾಲಿನಲ್ಲಿ 56 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ 2ನೇ ಸ್ಥಾನಕ್ಕೇರಿದೆ. 1,65,545 ಮಿಲಿಯನ್ ಡಾಲರ್ ರಫ್ತಿನೊಂದಿಗೆ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ ಎಂದು ವಿವರಿಸಿದರು.