ಬೆಂಗಳೂರು,ನ.10-ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯಿಂದಾಗಿ ರಾಜ್ಯದ 104 ಸಣ್ಣ ಕೆರೆಗಳಿಗೆ ನೀರಿಲ್ಲದೆ ಬತ್ತಿ ಹೋಗಿವೆ. ಅದರಲ್ಲೂ ಕೋಲಾರ ಜಿಲ್ಲೆಯ 31 ಹಾಗೂ ಬೀದರ್ ಜಿಲ್ಲೆಯ 33 ಕೆರೆಗಳಿಗೆ ನೀರಿಲ್ಲ. ರಾಜ್ಯದಲ್ಲಿ ಈ ಎರಡು ಜಿಲ್ಲೆಯಲ್ಲಿ ಹೆಚ್ಚು ಕೆರೆಗಳು ನೀರಿಲ್ಲದೆ ಒಣಗಿವೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ನ.4ರವರೆಗೆ ದಕ್ಷಿಣ ಕರ್ನಾಟಕ ಭಾಗದಲ್ಲಿ 48 ಕೆರೆಗಳಿಗೆ ನೀರು ಬಂದಿಲ್ಲ. ಅದೇ ರೀತಿ ಉತ್ತರ ಕರ್ನಾಟಕದ 56 ಕೆರೆಗಳಿಗೆ ನೀರೇ ಬಂದಿಲ್ಲ. ಹೀಗಾಗಿ ರಾಜ್ಯದಲ್ಲಿ ಒಟ್ಟು 104 ಕೆರೆಗಳಿಗೆ ಮುಂಗಾರು ಹಂಗಾಮಿನಲ್ಲಿ ನೀರೇ ಬಂದಿಲ್ಲ.
ರಾಜ್ಯದಲ್ಲಿ 3673 ಕೆರೆಗಳಿದ್ದು, 428 ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. ಅದರಲ್ಲೂ ಚಿಕ್ಕಬಳ್ಳಾಪುರ, ತುಮಕೂರು, ವಿಜಯನಗರ, ಕೊಪ್ಪಳ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಕೆರೆಗಳಲ್ಲಿ ಹೆಚ್ಚು ನೀರು ಸಂಗ್ರಹವಾಗಿದೆ.
ಬೆಂಗಳೂರಿನಲ್ಲಿ 3 ದಿನ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ
1297 ಕೆರೆಗಳಲ್ಲಿ ಶೇ.30ರಷ್ಟು ನೀರು ಬಂದಿದ್ದರೆ 991 ಕೆರೆಗಳಲ್ಲಿ ಶೇ.50ರಷ್ಟು ನೀರು ಸಂಗ್ರಹವಾಗಿದೆ. 853 ಕೆರೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದೆ. ದಕ್ಷಿಣ ಕರ್ನಾಟಕದ 165 ಕೆರೆಗಳು ಪೂರ್ಣವಾಗಿ ತುಂಬಿದ್ದರೆ, ಉತ್ತರ ಕರ್ನಾಟಕದ 263 ಕೆರೆಗಳು ತುಂಬಿವೆ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಕೆಲವು ಕೆರೆಗಳಿಗೆ ಅಲ್ಪಪ್ರಮಾಣದ ನೀರು ಕೂಡ ಬಂದಿದೆ.
ಮುಂಗಾರು ಮಳೆಯಂತೆ ಹಿಂಗಾರು ಕೂಡ ದುರ್ಬಲಗೊಂಡಿದ್ದು, ರಾಜ್ಯದಲ್ಲಿ ಬರಪರಿಸ್ಥಿತಿ ಮುಂದುವರೆದಿದೆ. ಹೀಗಾಗಿ ಸಣ್ಣಪುಟ್ಟ ಕೆರೆಗಳು ಕೂಡ ಭರ್ತಿಯಾಗುವ ಸಾಧ್ಯತೆ ವಿರಳ. ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ಪ್ರಮುಖ ಜಲಾಶಯಗಳು ಭರ್ತಿಯಾಗಿಲಿಲ್ಲ. ಹೀಗಾಗಿ ನೀರಾವರಿ ಬೆಳೆಗಳಿಗೆ ತೊಂದರೆ ಉಂಟಾಗಿದೆ.