ಬೆಂಗಳೂರು, ಏ.2– ಡೀಸೆಲ್ ದರ ಪ್ರತಿ ಲೀಟರಿಗೆ 2 ಹೆಚ್ಚಿಸಿರುವುದನ್ನು ತೀವ್ರವಾಗಿ ವಿರೋಧಿಸಿರುವ ಜೆಡಿಎಸ್, ರಾಜ್ಯದ ಅಭಿವೃದ್ಧಿ ಕಾರ್ಯಗಳಲ್ಲಿ ಹಿಂದೆ ಬಿದ್ದಿರುವ ಕಳಪೆ ಕಾಂಗ್ರೆಸ್ ಸರ್ಕಾರವು ದರ ಏರಿಸುವಲ್ಲಿ ಎಲ್ಲರಿಗಿಂತಲೂ ಮುಂದಿದೆ ಎಂದು ಟೀಕಿಸಿದೆ. ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕಳೆದ 10 ತಿಂಗಳಲ್ಲಿ ಡೀಸೆಲ್ ಪ್ರತಿ ಲೀಟರಿಗೆ 5 ರೂ. ಏರಿಕೆ ಮಾಡಿದೆ ಎಂದು ಆರೋಪಿಸಿದೆ.
ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರ್ಕಾರವು ಬೆಲೆ ಏರಿಕೆ ಮೂಲಕ ನಿರಂತರವಾಗಿ ಕನ್ನಡಿಗರ ಸುಲಿಗೆ ಮಾಡುವುದನ್ನು ಅಜೆಂಡವಾಗಿಸಿಕೊಂಡಿದೆ. ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಸೆಸ್ ಅನ್ನು ಶೇ.18.44 ರಿಂದ ಶೇ. 21.17ಕ್ಕೆ ಹೆಚ್ಚಳ ಮಾಡಿದೆ. ಇದರ ಪರಿಣಾಮ ಪ್ರತಿ ಲೀಟರ್ ಡೀಸೆಲ್ ಗೆ 2 ರೂ. ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಮತ್ತೊಮ್ಮೆ ಕತ್ತರಿ ಹಾಕಿದೆ ವಸೂಲಿ ಕೈ ಸರ್ಕಾರ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಜನಪೀಡಕ ಸರ್ಕಾರದಲ್ಲಿ ದಿನೇ ದಿನೇ ಬಡವರ ಜೀವನ ನಿರ್ವಹಣೆ ಅತ್ಯಂತ ಕಷ್ಟವಾಗುತ್ತಿದೆ. ದರ ಏರಿಸುತ್ತ ಜನರಿಗೆ ಬರೆ ಎಳೆಯುತ್ತಿರುವ ದುಷ್ಟ ಕೈ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದ ಜನರು ಬರೆ ಹಾಕುವುದು ಗ್ಯಾರಂಟಿ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.