ಬೆಂಗಳೂರು,ಫೆ.16- ಕೃಷಿ ಕ್ಷೇತ್ರವನ್ನು ಸುಸ್ಥಿರ ಹಾಗೂ ಲಾಭದಾಯಕವಾಗಿಸುವ ನಿಟ್ಟಿನಲ್ಲಿ ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿಯನ್ನು ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಸಂಯೋಜನೆಯನ್ನು ಜಾರಿಗೊಳಿಸುವುದು ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿಧಾನಸಭೆಯಲ್ಲಿಂದು ಬಜೆಟ್ ಮಂಡನೆ ವೇಳೆ ಕೃಷಿ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಮಣ್ಣಿನ ಗುಣ ಮತ್ತು ಮಾರುಕಟ್ಟೆ ಬೇಡಿಕೆಯನ್ನು ಆಧರಿಸಿ ಯಾವ ಬೆಳೆ ಬೆಳೆಯಬೇಕೆಂಬ ಕುರಿತು ರೈತರಿಗೆ ಮಾರ್ಗದರ್ಶನ ನೀಡುವುದು ಹೊಸ ಕೃಷಿ ಪದ್ಧತಿ ಹಾಗೂ ತಂತ್ರಜ್ಞಾನ ಕುರಿತು ಅರಿವು ಮೂಡಿಸುವುದು ಮತ್ತು ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಕಲ್ಪಿಸುವುದು ಈ ಹೊಸ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಮತ್ತು ಪೂರಕ ಚಟುವಟಿಕೆ ನೀತಿ ಮತ್ತು ಯೋಜನೆಗಳ ಸಂಯೋಜನೆ ಮತ್ತು ಪರಿಣಾಮಕಾರಿ ಅನುಷ್ಠಾನವಾಗುವಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಪಶು ಸಂಗೋಪನಾ ಇಲಾಖೆಗಳ ನಡುವೆ ಸಮನ್ವಯ ಸಾಸಲು ಸಿಎಂ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕೃಷಿ ಭಾಗ್ಯ ಯೋಜನೆಯನ್ನು ಮರು ಜಾರಿಗೊಳಿಸಲಾಗುತ್ತಿದ್ದು, ಇದಕ್ಕಾಗಿ 200 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಇದಲ್ಲದೆ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳ ತಳಿಗಳನ್ನು ರಕ್ಷಿಸಲು ಮತ್ತು ಸಂಗ್ರಹಿಸಲು ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದ್ದಾರೆ. ಸಿರಿಧಾನ್ಯ ಮತ್ತು ಮೌಲ್ಯವರ್ಧಕ ಉತ್ಪನ್ನಗಳನ್ನು ಅಗ್ರಿಟೆಕ್ ಕಂಪನಿಗಳು ಮತ್ತು ರಿಟೈಲ್ ಚೈನ್‍ಗಳ ಸಹಭಾಗಿತ್ವದೊಂದಿಗೆ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ದೊರಕಿಸಲು ಅನುವು ಮಾಡಿಕೊಡಲಾಗುವುದು. ಇದಕ್ಕಾಗಿ ನಮ್ಮ ಮಿಲೆಟ್ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಸಿಲಾಗುವುದು.
ಪಾಕಿಸ್ತಾನದ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಹೆಸರು ಫೈನಲ್
ಬರಪೀಡಿತ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿ ಮಾಡಲು ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಪ್ರತಿವರ್ಷ 1 ಸಾವಿರದಂತೆ ಒಟ್ಟು 5 ಸಾವಿರ ಸಣ್ಣ ಸರೋವರಗಳನ್ನು ನರೇಗಾ ಯೋಜನೆಯಡಿ ನಿರ್ಮಿಸಲಾಗುವುದು. ರಾಯಚೂರು ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿರುವ ಇ-ಸ್ಯಾಪ್ ತಂತ್ರಾಂಶದ ಸೌಲಭ್ಯವನ್ನು ಎಲ್ಲಾ ರೈತರಿಗೆ ಪರಿಚಯಿಸಲಾಗುವುದು. ಇದಲ್ಲದೆ ರೈತರ ಉತ್ಪನ್ನಗಳು ವ್ಯರ್ಥವಾಗದಂತೆ ತಡೆಯಲು ಹಾಗೂ ಬೆಳೆಗಳಿಗೆ ಸಮರ್ಪಕ ಬೆಲೆ ದೊರಕಿಸುವ ಸಲುವಾಗಿ ಕೃಷಿ ಇಲಾಖೆ ಅೀಧಿನದಲ್ಲಿ ಪ್ರತ್ಯೇಕ ಆಹಾರ ಸಂರಕ್ಷಣಾ ಆಯುಕ್ತಾಲಯ ರಚಿಸಲಾಗುವುದು.
ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ರಫ್ತನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣಾ ಮತ್ತು ರಫ್ತು ನಿಗಮ ನಿಯಮಿತ(ಕೆಪೆಕ್) ಸಂಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಪಿಎಂಎಫ್‍ಎಂಇ ಯೋಜನೆಯಡಿ 80 ಕೋಟಿ ರೂ.ಗಳನ್ನು ನೀಡಲಾಗುವುದು. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರಾಜ್ಯದಲ್ಲಿರುವ ವಿಮಾನನಿಲ್ದಾಣಗಳ ಹತ್ತಿರ ಆಹಾರ ಪಾರ್ಕ್ ಸ್ಥಾಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ ಮತ್ತು ಬೆಂಗಳೂರು ಗ್ರಾಮಾಂತರದ ಪೂಜೇನಹಳ್ಳಿಯಲ್ಲಿ ಇದನ್ನು ಸ್ಥಾಪಿಸಲಾಗುವುದು.ಕೃಷಿವಲಯದ ಸ್ಟಾರ್ಟ್‍ಅಪ್‍ಗಳನ್ನು ಉತ್ತೇಜಿಸಲಾಗುವುದು. ಮಂಡ್ಯ ಜಿಲ್ಲೆಯ ವಿಸಿ ಫಾರ್ಮ್‍ನಲ್ಲಿ ಹೊಸ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ತಜ್ಞರ ಸಮಿತಿ ರಚಿಸಲಾಗುವುದು.