ಚಿಕ್ಕಮಗಳೂರು,ಜೂ.22- ಕಾಫಿ ನಾಡಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಆದರೆ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಸುಪ್ರಸಿದ್ಧ ಪ್ರವಾಸಿತಾಣ ಎತ್ತಿನ ಭುಜಕ್ಕೆ ನಿರ್ಬಂಧ ವಿಧಿಸಿ ಅರಣ್ಯ ಇಲಾಖೆ ಆದೇಶ ವಿಧಿಸಿದೆ.ಜಿಲ್ಲೆಯಾದ್ಯಂತ ಉತ್ತಮವಾಗಿ ಮಳೆಯಾಗುತ್ತಿದ್ದು, ಭಾರಿ ಗಾಳಿ, ಮಳೆ, ಮಂಜಿನೊಂದಿಗೆ ಪ್ರವಾಸಿತಾಣದ ಸೊಬಗನ್ನು ನೋಡುವುದೇ ಒಂದು ವಿಸಯ.
ಆದರೆ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಎತ್ತಿನಭುಜದ ಕಿರಿದಾದ ಪ್ರದೇಶದಲ್ಲಿ ಪ್ರವಾಸಿಗರು ಚಾರಣಕ್ಕೆ ಹೋಗುತ್ತಿದ್ದಾರೆ. ಈ ರಸ್ತೆಯಲ್ಲಿ ಪಾಚಿ ಕಟ್ಟಿದ್ದು, ಅನಾಹುತಗಳು ಸಂಭವಿಸಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಚಾರಣಕ್ಕೆ ಹೋಗುವ ಮಾರ್ಗದಲ್ಲಿ ಪ್ರವಾಸಿಗರ ಸುರಕ್ಷತಾ ಕಾಮಗಾರಿಗೆ ಇಲಾಖೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೂ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ.
ಜಿಲ್ಲೆಯ ಬಾಬಾಬುಡನ್‌ಗಿರಿ, ಮುಳ್ಳಯ್ಯನಗಿರಿ, ಕಲ್ಲತ್ತಗಿರಿ, ಕುದುರೆಮುಖ, ಕೆಮಣ್ಣುಗುಂಡಿ ಸೇರಿದಂತೆ ಈಗ ಪ್ರವಾಸಿತಾಣಗಳಲ್ಲಿ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ವೀಕೆಂಡ್ ಬಂದಿತೆಂದರೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಪ್ರವಾಸಿಗರ ದಂಡೇ ಜಿಲ್ಲೆಗೆ ಆಗಮಿಸುತ್ತಿದೆ.
ಅದರಲ್ಲೂ ಎತ್ತಿನಭುಜ ಪ್ರವಾಸಿಗರ ನೆಚ್ಚಿನ ಪ್ರದೇಶವಾಗಿದೆ. ಕಳೆದ ಶನಿವಾರದಿಂದ ಸೋಮವಾರದವರೆಗೆ ಮೂರು ದಿನಗಳ ಅವಧಿಯಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಅದೇನೇ ಇದ್ದರೂ ಪ್ರವಾಸಿಗರು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಾ ರಜಾದಿನಗಳಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯುವಂತಾಗಲಿ.