ಹೊಸಪೇಟೆ,ಮೇ 20 – ಒಂದು ಕಾರ್ಯಕ್ರಮದ ಮೂಲಕ ವಿಶ್ವದಲ್ಲಿ ಯಾವ ದೇಶವೂ ಮಾಡದಂಥ ದಾಖಲೆಯನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಇಲ್ಲಿ ನಡೆದ ಪ್ರಗತಿಯತ್ತ ಸಮರ್ಪಣೆ ಸಂಕಲ್ಪ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಸರ್ಕಾರ ಜಾರಿಗೊಳಿಸಿದ ಪಂಚಖಾತ್ರಿ ಯೋಜನೆಗಳು ರಾಜ್ಯದ 1.25 ಕೋಟಿ ಕುಟುಂಬಗಳನ್ನು ಬಡತನರೇಖೆಗಿಂತ ಮೇಲೆತ್ತಿವೆ. ವಿಶ್ವದ ಯಾವ ದೇಶದಲ್ಲೂ ಇಷ್ಟು ಕಡಿಮೆ ಅವಧಿಯಲ್ಲಿ ಬಡತನದಿಂದ ಜನರನ್ನು ಹೊರತಂದ ಕಾರ್ಯಕ್ರಮಗಳು ಲಭ್ಯ ಇಲ್ಲ ಎಂದು ಹೇಳಿದರು.
ಪ್ರತೀ ತಿಂಗಳು ಮಾಸಿಕ ಹಣದ ಗ್ಯಾರಂಟಿ ಮೂಲಕ ಜನರ ಜೀವನವನ್ನು ಸುಧಾರಿಸಲಾಗಿದೆ. ವಾಣಿಜ್ಯ ಕೋರ್ಟ್‌ಗಳಲ್ಲಿ ಶ್ರೀಮಂತರು ಪ್ರಕರಣ ದಾಖಲಿಸಿದ ದಿನಗಳಲ್ಲೇ ತೀರ್ಪು ಪ್ರಕಟವಾಗುವ ಸಮಯವನ್ನು ತಿಳಿಸಲಾಗುತ್ತದೆ. ಆದರೆ ಬಡವರು, ಅಶಕ್ತರು, ನಿರುದ್ಯೋಗಿಗಳು ನ್ಯಾಯಾಲಯದ ಮೆಟ್ಟಿಲೇರಿದರೆ ವರ್ಷಾನುಗಟ್ಟಲೆ ಸಮಯ ವಿಳಂಬವಾಗಿ ಜನ ಸಂಕಷ್ಟಕ್ಕೀಡಾಗುವಂತಾಗುತ್ತದೆ. ಇದಕ್ಕೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾನೂನು ತಿದ್ದುಪಡಿ ತಂದಿದ್ದು, ಅದಕ್ಕೆ ರಾಷ್ಟ್ರಪತಿಯವರ ಅಂಗೀಕಾರ ಪಡೆದುಕೊಳ್ಳಲಾಗಿದೆ ಎಂದರು.
ವಿರೋಧಪಕ್ಷಗಳು ಆಸಹನೆಯಿಂದ ಟೀಕೆ ಮಾಡುತ್ತವೆ. ಆದರೆ ಅದೆಲ್ಲವೂ ಅಪ್ರಸ್ತುತ. ಅರಣ್ಯ ಸಚಿವ ಈಶ್ವರ್‌ಖಂಡ್ರೆ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಮನಸ್ಸಿಲ್ಲ. ಆದರೆ ಶ್ರೀಮಂತರು, ಬೃಹತ್ ಉದ್ಯಮಿಗಳ ಲಕ್ಷಾಂತರ ಕೋಟಿ ರೂ.ಗಳ ಸಾಲಮನ್ನಾ ಮಾಡಲಾಗಿದೆ. ಕೇಂದ್ರ ಸರ್ಕಾರ ಬಡವರ ಶೋಷಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜನಪರ ಕಾರ್ಯಕ್ರಮಗಳ ಮೂಲಕ ಕೋಟ್ಯಂತರ ಜನರಿಗೆ ನೆರವು ನೀಡಲಾಗಿದೆ. 2028 ರ ವಿಧಾನಸಭಾ ಚುನಾವಣೆಯಲ್ಲೂ ಜನರ ಆಶೀರ್ವಾದ ನಮ್ಮ ಪಕ್ಷದ ಮೇಲಿರಲಿದೆ ಎಂದರು.
ಕಂದಾಯ ಸಚಿವ ಕೃಷ್ಣಬೈರೇಗೌಡ, ಕಳೆದ ಎರಡು ವರ್ಷಗಳ ಸತತ ಪರಿಶ್ರಮದ ಫಲವಾಗಿ 1,11,111 ಕುಟುಂಬಗಳಿಗೆ ಇಂದು ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಲಂಬಾಣಿ, ಗೊಲ್ಲ, ಹಾಡಿ ಸೇರಿದಂತೆ ಹಲವಾರು ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿ ಇಂದು ದಾಖಲೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. ನಮ್ಮದು ಸಿದ್ದರಾಮಯ್ಯನವರ ನೇತೃತ್ವದ ನುಡಿದಂತೆ ನಡೆಯುವ ಸರ್ಕಾರ, ಕನಕಪುರದ ಬಂಡೆ ಡಿ.ಕೆ.ಶಿವಕುಮಾರ್ ಅವರ ದೃಢಸಂಕಲ್ಪದ ಸರ್ಕಾರ. ಶಿವರಾಮಯ್ಯ, ಸಿದ್ದಕುಮಾರ ಅವರ ಸರ್ಕಾರ ಎಂದು ವಿವರಿಸಿದರು.