ಬೆಂಗಳೂರು,ಫೆ.7- ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿಕೃಷ್ಣ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ತನಿಖಾ ಸಂಸ್ಥೆಯ ಬೆದರಿಕೆಯಿಂದ ಪಾರಾದಂತಾಗಿದೆ.
ಹೈಕೋರ್ಟ್ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸುದೀರ್ಘ ವಿಚಾರಣೆ ಬಳಿಕ ಇಂದು ತನ್ನ ತೀರ್ಪನ್ನು ಪ್ರಕಟಿಸಿದೆ. ಮುಡಾ ಪ್ರಕರಣವನ್ನು ಈಗಾಗಲೇ ತನಿಖೆ ನಡೆಸುತ್ತಿರುವ ಲೋಕಾಯುಕ್ತ ತನ್ನ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿದೆ.
ಲೋಕಾಯುಕ್ತ ತನಿಖೆಯಲ್ಲಿ ಹಸ್ತಕ್ಷೇಪ ನಡೆದಿದೆ ಎಂದು ಭಾವಿಸಲು ಪೂರಕ ಅಂಶಗಳಿಲ್ಲ. ಹೀಗಾಗಿ ಸಿಬಿಐ ತನಿಖೆ ಅನಗತ್ಯ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಲೋಕಾಯುಕ್ತ ಮತ್ತು ಲೋಕಾಯುಕ್ತ ಸಂಸ್ಥೆಯ ಪ್ರಶ್ನಾರ್ಹವಾದ ಸ್ವಾತಂತ್ರ್ಯದಿಂದ ಬಳಲುತ್ತಿಲ್ಲ. ಲೋಕಾಯುಕ್ತ ಸಂಸ್ಥೆ ನಡೆಸಿರುವ ತನಿಖೆ ಪಕ್ಷಪಾತ ಅಥವಾ ದೋಷಪೂರಿತವಾಗಿದೆ ಎಂದು ಪರಿಶೀಲನೆ ವೇಳೆ ಕಂಡುಬಂದಿಲ್ಲ. ಹೀಗಾಗಿ ತನಿಖೆಯನ್ನು ಮುಂದುವರೆಸಲು ಅಥವಾ ಮರುತನಿಖೆಗೆ ಸಿಬಿಐಗೆ ಆದೇಶಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಲೋಕಾಯುಕ್ತ ಸಂಸ್ಥೆಯು ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಗಳ ಬಗ್ಗೆ ಸುಪ್ರೀಂಕೋರ್ಟ್ ಹಾಗೂ ಹೈಕೋಟ್ಗಳಲ್ಲಿ ಹಲವು ತೀರ್ಪುಗಳಿವೆ. ಈ ಎಲ್ಲಾ ವಿಚಾರಣೆಗಳ ಹಿನ್ನಲೆಯಲ್ಲಿ ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ವಾದ-ಪ್ರತಿವಾದದ ವೇಳೆಯಲ್ಲಿ ಅಭಿಷೇಕ್ ಮನುಸಿಂಘ್ವಿ ಅವರು ಮುಡಾ ಪ್ರಕರಣದ ತನಿಖೆಗೆ ರಾಜ್ಯಪಾಲರು ನೀಡಿರುವ ಪೂರ್ವಾನುಮತಿಯನ್ನು ಹೈಕೋರ್ಟ್ನ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಲಾಗಿದೆ. ನಮ ಅರ್ಜಿಯನ್ನು ವಿಭಾಗೀಯ ಪೀಠ ಪೂರ್ಣ ಅಥವಾ ಭಾಗಶಃ ಒಪ್ಪಿದರೆ ಸಿಬಿಐ ತನಿಖೆಯ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ ಎಂದು ಪ್ರತಿಪಾದಿಸಿದರು.
ಹೈಕೋರ್ಟ್ನ ವಿಚಾರಣೆಯಲ್ಲಿ ಅಕ್ರಮಗಳ ಬಗ್ಗೆ ಅರ್ಜಿದಾರರು ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. ಮುಖ್ಯಮಂತ್ರಿಯಾಗಿರುವ ಕಾರಣಕ್ಕೆ ಸಿಬಿಐ ತನಿಖೆಗೆ ವಹಿಸಬೇಕೆಂದು ಹೇಳಲಾಗುತ್ತಿದೆ. ಆರೋಪಿ ಆಗಿರುವವರ ಸ್ಥಾನಮಾನವನ್ನು ಆಧರಿಸಿ ತನಿಖಾ ಸಂಸ್ಥೆಯನ್ನು ನಿರ್ಧರಿಸಲು ಸಾಧ್ಯವಿಲ್ಲ. ಹಾಗೆಯೇ ದೂರುದಾರರು ಇದೇ ರೀತಿಯ ತನಿಖೆಯಾಗಬೇಕೆಂದು ಸೂಚಿಸಲು ಬರುವುದಿಲ್ಲ. ಸಿಬಿಐ ತನಿಖೆಗೆ ಏಕೆ ನೀಡಬೇಕು ಎಂಬುದಕ್ಕೆ ಸಕಾರಣಗಳಿಲ್ಲ. ಇಡೀ ಪ್ರಕರಣ ರಾಜಕೀಯಗೊಂಡಿರುವುದರಿಂದ ನ್ಯಾಯಾಲಯ ಇಂತಹ ಅಪವಾಖ್ಯಾನಕ್ಕೆ ಅನುಮತಿಸಬಾರದು ಎಂದು ಕೋರಿದರು.
ಪಾರ್ವತಿ ಪರವಾಗಿ ವಾದಿಸಿದ ಪ್ರೊ.ರವಿವರ್ಮಕುಮಾರ್ ಅವರು, ವಿವಾದಿತ ಭೂಮಿಯ ಹಕ್ಕಿನ ಬಗ್ಗೆ ತಪ್ಪಾಗಿ ಅರ್ಥೈಸಿಸಲಾಗಿದೆ. ಸ್ವಯಂಪ್ರೇರಿತ ಅಧಿಕಾರ ಬಳಸಿ ಏಕಸದಸ್ಯ ಪೀಠ ತನ್ನ ಆದೇಶದಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಹಿಂಪಡೆಯಬೇಕು. ಸಿಬಿಐ ಪ್ರಧಾನಮಂತ್ರಿ ಕಾರ್ಯಾಲಯದ ಅಡಿಯಲ್ಲಿ ಬರಲಿದೆ. ಪ್ರಧಾನಿಯವರು ಕಾಂಗ್ರೆಸ್ ಮುಕ್ತ ಭಾರತ ಮಾಡುವ ಗುರಿ ಹೊಂದಿದ್ದಾರೆ. ರಾಜಕೀಯ ಕಾರಣಕ್ಕಾಗಿ ಲೋಕಾಯುಕ್ತದಿಂದ ಸಿಬಿಐ ತನಿಖೆಗೆ ವಹಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವಾದಿಸಿದರು.
ಭೂ ಮಾಲೀಕ ದೇವರಾಜು ಅವರನ್ನು ಪ್ರತಿನಿಧಿಸುವ ವಕೀಲ ದುಶ್ಯಂತ್ ದವೆ, 15 ವರ್ಷಗಳ ಬಳಿಕ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅವರ ಮನವಿ ಆಧರಿಸಿಯೇ ಸೆ.24ರಂದು ಲೋಕಾಯುಕ್ತ ತನಿಖೆಗೆ ವಹಿಸಲಾಗಿದೆ. ಸಿದ್ದರಾಮಯ್ಯನವರಿಗೆ ಮುಜುಗರ ಉಂಟು ಮಾಡುವ ಏಕೈಕ ಉದ್ದೇಶದಿಂದ ದೂರುದಾರರು ಅರ್ಜಿ ಸಲ್ಲಿಸಿದ್ದಾರೆ ಎಂದು ವಾದಿಸಿದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಕಪೀಲ್ ಸಿಬಾಲ್, ಹಾಲಿ ಪ್ರಕರಣದ ತನಿಖೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ತನಿಖೆಯಲ್ಲೇ ದೋಷವಿದೆ ಎಂದು ಹೇಳುವುದು ಅರ್ಥಹೀನ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಲೋಕಾಯುಕ್ತ ಕಳಂಕಿತ ಎನ್ನುವುದಾದರೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ ಕೂಡ ಕಳಂಕಿತ ಎನ್ನಬೇಕಾಗುತ್ತದೆ. ಹೀಗೆ ಪ್ರಶ್ನಿಸುತ್ತಾ ಹೋದರೆ ಸಾಂಸ್ಥಿಕ ತನಿಖಾ ಸಂಸ್ಥೆಗಳ ಸ್ವಾಯತ್ತತೆ ಅರ್ಥ ಕಳೆದುಕೊಳ್ಳುತ್ತದೆ ಎಂದರು.
ಸ್ನೇಹಮಯಿ ಕೃಷ್ಣ ಪರವಾಗಿ ವಾದಿಸಿದ ಮಣೀಂದರ್ ಸಿಂಗ್, ಆರೋಪಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದರಿಂದ ನ್ಯಾಯಯುತ ತನಿಖೆ ನಡೆಯುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಮತ್ತು ನಂಬಿಕೆಯನ್ನು ಪುನರ್ ಸ್ಥಾಪಿಸಲು ಸಿಬಿಐ ತನಿಖೆ ಅಗತ್ಯ ಎಂದು ಪ್ರತಿಪಾದಿಸಿದರು.
ಹಿನ್ನಲೆ: ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಹಾಗೂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾಲೀಕ ದೇವರಾಜ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮುಡಾದಿಂದ 50:50ರ ಅನುಪಾತದಲ್ಲಿ ನಿವೇಶನ ಪಡೆದುಕೊಳ್ಳವಾಗ ಸಿದ್ದರಾಮಯ್ಯ ತಮ ರಾಜಕೀಯ ಪ್ರಭಾವ ಬಳಸಿದ್ದಾರೆ. ನಿವೇಶನ ಹಂಚಿಕೆಯಲ್ಲಿ ಅಕ್ರಮಗಳಾಗಿವೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರಾದ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ, ಪ್ರದೀಪ್ಕುಮಾರ್ ಅವರು ಅಭಿಯೋಜನೆ ಮತ್ತು ತನಿಖೆಗೆ ಅನುಮತಿ ಕೇಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ಇದನ್ನು ಪುರಸ್ಕರಿಸಿದ ರಾಜ್ಯಪಾಲರು ಅರ್ಜಿದಾರರ ಮನವಿಯಂತೆ ತನಿಖೆಗೆ ಅವಕಾಶ ನೀಡಿದ್ದರು. ಮುಂದುವರೆದ ಭಾಗವಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಲೋಕಾಯುಕ್ತ ತನಿಖೆಗೆ ಪ್ರಕರಣವನ್ನು ವಹಿಸಿತ್ತು. ಸಿದ್ದರಾಮಯ್ಯ ಅವರು ತನಿಖೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಈ ಮೊದಲೇ ಹೈಕೋರ್ಟ್ ಅಮಾನ್ಯಗೊಳಿಸಿತ್ತು.
ಹೀಗಾಗಿ ಮೈಸೂರಿನ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದರು. ಈ ನಡುವೆ ದೂರುದಾರ ಸ್ನೇಹಮಯಿ ಕೃಷ್ಣ ಜಾರಿನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಕೇಂದ್ರ ತನಿಖಾ ಸಂಸ್ಥೆಯಿಂದ ವಿಚಾರಣೆ ನಡೆಯಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದರು.
ವಾದ-ಪ್ರತಿವಾದಗಳು ಜೋರಾಗಿ ನಡೆದಿದ್ದವು. ಸಿದ್ದರಾಮಯ್ಯ ಅವರ ಪರವಾಗಿ ಅಭಿಷೇಕ್ ಮನುಸಿಂಘ್ವಿ, ಕಪೀಲ್ ಸಿಬಾಲ್ ವಾದಿಸಿದ್ದರೆ, ಅರ್ಜಿದಾರರ ಪರವಾಗಿ ಮಣೀಂದರ್ ಸಿಂಗ್ ಹಾಗೂ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ವಾದ ಮಂಡಿಸಿದ್ದರು.