ಕೊಪ್ಪಳ,ಏ.9- ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂಬರ್ ಒನ್ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರೂ ಆಗಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ಮಂಗಳವಾರ ಹಮಿಕೊಂಡಿದ್ದ ಜಿಲ್ಲಾ ಮಟ್ಟದ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಇಂದಿನ ಚುನಾವಣೆಗಳಲ್ಲಿ ಕೋಟ್ಯಂತರ ಹಣ ಖರ್ಚಾಗುತ್ತದೆ.
ಸಾಮಾನ್ಯ ವ್ಯಕ್ತಿ ಹಾಗೂ ಪಕ್ಷದ ಕಾರ್ಯಕರ್ತ ಚುನಾವಣೆಗೆ ನಿಲ್ಲಲು ಆಗೋದಿಲ್ಲ.ಇದು ನಾಚಿಕೆಗೇಡು ಹಾಗೂ ಇದು ದೇಶಕ್ಕೆ ದೊಡ್ಡ ಮಾರಕ ಎಂದು ಕಳವಳ ವ್ಯಕ್ತಪಡಿಸಿದರು.
ಇಂದು ಜಾತಿ ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ಈಗಾಗಿ ಜನರು ಚಿಂತನೆ ಮಾಡಿ ಅಭಿವೃದ್ಧಿ ಪರ ಇರೋ ಪಕ್ಷ ಹಾಗೂ ವ್ಯಕ್ತಿಗೆ ಬೆಂಬಲಿಸಬೇಕು. ಇನ್ನೂ ದೇಶದಲ್ಲಿ ನಡೆಯುವ ಭ್ರಷ್ಟಾಚಾರ ಕಡಿಮೆ ಆಗಿಲ್ಲ. ಜನ ಚಿಂತನೆ ಮಾಡದೇ ಇದ್ರೆ ಮುಂದಿನ ದಿನಗಳು ನಮಗೆ ಕಗ್ಗತ್ತಲು ಆವರಿಸಲಿದೆ ಎಂದರು.
ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಠಿಸಿದೆ.ಸಿಎಂ ,ಡಿಸಿಎಂ ಸೇರಿ ಹಲವು ನಾಯಕರು ಎಐಸಿಸಿ ಅಧಿವೇಶನದಲ್ಲಿ ಭಾಗಿಯಾಗಿ ಬಿಜೆಪಿ ವಿರುದ್ದ ವಾಗ್ಧಾಳಿ ನಡೆಸಿದ್ದಾರೆ.ಇತ್ತ ಶಾಸಕ ಬಸವರಾಜ ರಾಯರಡ್ಡಿ ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.