Sunday, September 8, 2024
Homeರಾಜ್ಯಕೆಲಸದ ಅವಧಿ ವಿಸ್ತರಣೆಗೆ ಐಟಿ-ಬಿಟಿ ಉದ್ಯೋಗಿಗಳ ಆಕ್ಷೇಪ

ಕೆಲಸದ ಅವಧಿ ವಿಸ್ತರಣೆಗೆ ಐಟಿ-ಬಿಟಿ ಉದ್ಯೋಗಿಗಳ ಆಕ್ಷೇಪ

ಬೆಂಗಳೂರು,ಜು.22- ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಮಸೂದೆ ಮಂಡನೆಗೆ ಸಿದ್ದತೆ ನಡೆಸಿರುವ ರಾಜ್ಯ ಸರ್ಕಾರ ಇದೀಗ, ಐಟಿ- ಬಿಟಿ ಉದ್ಯೋಗಗಳಿಗೆ ಕೆಲಸದ ಅವಧಿಯನ್ನು 12ರಿಂದ 14 ಗಂಟೆಗೆ ವಿಸ್ತರಿಸುವ ಕುರಿತು ತಿದ್ದುಪಡಿ ತರಲು ಮುಂದಾಗಿದೆ. ಆದರೆ ಸರ್ಕಾರದ ಈ ಕ್ರಮಕ್ಕೆ ಕಾರ್ಮಿಕ ವಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರವು ಕರ್ನಾಟಕ ಶಾಪ್ಸ್ ಆ್ಯಂಡ್ ಎಶ್ಟಾಬ್ಲಿಶ್‍ಮೆಂಟ್ ಆ್ಯಕ್ಟ್‍ಗೆ ತಿದ್ದುಪಡಿ ತಂದು, ರಾಜ್ಯದಲ್ಲಿ ಐಟಿ, ಐಟಿ ಆಧಾರಿತ ಸೇವೆಗಳು ಹಾಗೂ ಬಿಪಿಒಗಳ ಕೆಲಸದ ಅವ„ಯನ್ನು 12ರಿಂದ 14 ತಾಸುಗಳಿಗೆ ಹೆಚ್ಚಿಸುವ ಪ್ರಸ್ತಾಪ ಇಟ್ಟುಕೊಂಡಿದೆ. ಶೀಘ್ರದಲ್ಲೇ ಅಧಿವೇಶನದಲ್ಲಿ ಈ ಕುರಿತು ವಿಧೇಯಕ ಮಂಡಿಸಿ, ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶವಿದೆ ಎಂದು ಮೂಲಗಳು ತಿಳಿಸಿವೆ.

ಐಟಿ ಕ್ಷೇತ್ರದ ಉತ್ತೇಜನಕ್ಕಾಗಿ ರಾಜ್ಯ ಸರ್ಕಾರ ಇಂತಹ ಪ್ರಸ್ತಾಪ ಹೊಂದಿದೆ ಎಂದು ಹೇಳಲಾಗಿದೆ. ಈ ತಿದ್ದುಪಡಿಯಲ್ಲಿ ಐಟಿ ಕಂಪನಿಗಳು ದಿನಕ್ಕೆ 14 ಗಂಟೆ ಕಾರ್ಯನಿರ್ವಹಿಸುವ (12 ಗಂಟೆ ಕೆಲಸ ಹಾಗೂ 2 ಗಂಟೆ ಹೆಚ್ಚುವರಿ ಕೆಲಸ) ಪ್ರಸ್ತಾಪವನ್ನು ಸೇರಿಸಲು ಉದ್ದೇಶಿಸಿದೆ. ಪ್ರಸ್ತುತ ಕಾರ್ಮಿಕ ಕಾನೂನಿನ ಅನ್ವಯ ಹೆಚ್ಚುವರಿ ಒಂದು ಗಂಟೆ ಒಳಗೊಂಡು 9 ಗಂಟೆಗಳ ಕಾಲ ಕೆಲಸ ನಿರ್ವಹಿಸಲು ಅನುಮತಿಸಲಾಗಿದೆ.

ಐಟಿ ವಲಯದ ನೂತನ ಪ್ರಸ್ತಾಪವು, ಐಟಿ/ಐಟಿಇಎಸ್/ಬಿಪಿಒ ವಲಯಗಳಲ್ಲಿ ದಿನಕ್ಕೆ 12 ಗಂಟೆಗಳಿಗೂ ಹೆಚ್ಚು ಸಮಯ ಹಾಗೂ ನಿರಂತರ ಮೂರು ನಿರಂತರ ತಿಂಗಳುಗಳಲ್ಲಿ 125 ಗಂಟೆಗಳು ಮೀರಬಾರದು ಎಂದು ತಿಳಿಸಲಾಗಿದೆ. ಐಟಿ ಕಂಪನಿಗಳ ಪ್ರಸ್ತಾಪದ ಬಗ್ಗೆ ರಾಜ್ಯ ಸರ್ಕಾರ ಚರ್ಚಿಸಿ ಶೀಘ್ರದಲ್ಲೇ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಸ್ತಾಪವು ಸಂಪುಟದಲ್ಲಿ ಚರ್ಚೆಯಾಗುವ ಸಂಭವವಿದೆ.

ತೀವ್ರ ವಿರೋಧ: ಸರ್ಕಾರದ ತೀರ್ಮಾನಕ್ಕೆ ಕರ್ನಾಟಕ ರಾಜ್ಯ ಐಟಿ, ಐಟಿ ಆಧಾರಿತ ಸೇವೆಗಳ ಉದ್ಯೋಗಿಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಐಟಿ ಕಂಪನಿಗಳ 14 ಗಂಟೆ ಕೆಲಸದ ಪ್ರಸ್ತಾಪಕ್ಕೆ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ಉದ್ಯೋಗಿಗಳ ಸಂಘ(ಕೆಐಟಿಯು) ಭಾರೀ ವಿರೋಧ ವ್ಯಕ್ತಪಡಿಸಿದೆ. ಈ ತಿದ್ದುಪಡಿಯು ಪ್ರಸ್ತುತ ಮೂರು ಪಾಳಿಗಳಲ್ಲಿರುವ ಪದ್ಧತಿಯ ಬದಲಿಗೆ ಎರಡು ಪದ್ಧತಿಯನ್ನು ಅನುಮತಿಸುವುದಾಗಿದೆ. ಇದರಿಂದ ಮೂರನೇ ಒಂದು ಭಾಗದಷ್ಟು ಕಾರ್ಮಿಕರನ್ನು ವಜಾಗೊಳಿಸುವ ಹುನ್ನಾರ ವಾಗಿದೆ ಎಂದು ಕೆಐಟಿಯು ತಿಳಿಸಿದೆ.

ಕೆಸಿಸಿಐ ವರದಿಯ ಪ್ರಕಾರ ಐಟಿ ವಲಯದ ಶೇ.45ರಷ್ಟು ಉದ್ಯೋಗಿಗಳು ಒತ್ತಡದಂತ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಶೇ.55ರಷ್ಟು ಮಂದಿ ದೈಹಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಈಗ ಜಾರಿಗೆ ತರಲು ಹೊರಟಿರುವ ತಿದ್ದುಪಡಿ ಉದ್ಯೋಗಿಗಳನ್ನು ಮತ್ತಷ್ಟು ಆಘಾತಕ್ಕೆ ದೂಡುತ್ತದೆ ಎಂದು ಕೆಐಟಿಯು ತಿಳಿಸಿದೆ.

ಐಟಿ ಉದ್ಯೋಗಿಗಳ ಕೆಲಸವನ್ನು ನಾಲ್ಕು ಗಂಟೆ ಹೆಚ್ಚಿಸುವುದರಿಂದ ನೌಕರರ ಖಾಸಗಿ ಹಾಗೂ ವೃತ್ತಿ ಜೀವನದ ಮೇಲೆ ಭಾರಿ ಪರಿಣಾಮ ಬೀರಲಿದೆ. ಉದ್ಯೋಗಿಗಳು ವೃತ್ತಿ ಮಾಡುವ ಬದಲು ಮಷೀನ್‍ಗಳಾಗಿ ಬದಲಾಗುತ್ತಾರೆ. ಅವರ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಲಿದೆ. ಹಾಗಾಗಿ, ರಾಜ್ಯ ಸರ್ಕಾರವು ಪ್ರಸ್ತಾಪವನ್ನು ಪರಿಷ್ಕರಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ವಿರೋಧ ವ್‍ಯಕ್ತವಾಗುತ್ತಿದೆ. ಐಟಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಈಗಾಗಲೇ ಒತ್ತಡ, ಬಿಪಿ, ಶುಗರ್ ಸೇರಿ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈಗ 14 ಗಂಟೆಗೆ ನೌಕರರ ಕೆಲಸದ ಅವಧಿಯನ್ನು ಹೆಚ್ಚಿಸಿದರೆ ನೌಕರರು ಹಣಕ್ಕಿಂತ ಹೆಚ್ಚು ಕಾಯಿಲೆಗಳನ್ನು ಗಳಿಸುತ್ತಾರೆ ಎಂಬುದಾಗಿ ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News