ಬೆಂಗಳೂರು,ಫೆ.24- ಮಕ್ಕಳು, ಮಹಿಳೆಯರು ಹಾಗೂ ತಿಂಡಿ ಪ್ರಿಯರು ಬಾಯಿ ಚಪ್ಪರಿಸಿಕೊಂಡು ತಿನ್ನುವ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿ ರಾಜ್ಯದಲ್ಲೂ ಬ್ಯಾನ್ ಆಗುವ ಸಾಧ್ಯತೆಗಳಿವೆ. ಅತಿಯಾದ ಕಲರ್ ಬಳಕೆ ಹಾಗೂ ರಾಸಾಯನಿಕ ಬೆರಕೆ ಹೊಂದಿರುವ ಚೈನೀಸ್ ತಿಂಡಿಯಾದ ಗೋಬಿ ಮಂಚೂರಿಯನ್ನು ಗೋವಾದಲ್ಲಿ ಈಗಾಗಲೇ ನಿಷೇಧಿಸಲಾಗಿದೆ.
ಅದೇ ರೀತಿ ತಮಿಳುನಾಡಿನ ಸರ್ಕಾರಿ ಪ್ರಯೋಗಾಲಯದಲ್ಲಿ ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ) ಯಲ್ಲಿ ರೋಡಮೈನ್-ಬಿ ಕ್ಯಾನ್ಸರ್‍ಕಾರಕ ಅಂಶ ಇರುವುದು ದೃಢಪಟ್ಟಿರುವುದರಿಂದ ಕ್ಯಾಂಡಿಯನ್ನು ಅಲ್ಲಿ ಬ್ಯಾನ್ ಮಾಡಲಾಗಿದೆ. ಹೀಗಾಗಿ ಕ್ಯಾನ್ಸರ್‍ಕಾರಕ ಅಂಶಗಳಿರುವ ಕಾಟನ್ ಕ್ಯಾಂಡಿ ಮತ್ತು ನಗರದ ಬಹುತೇಕ ರಸ್ತೆ ಬದಿಗಳಲ್ಲಿ ಮಾರಾಟ ಮಾಡುವ ಗೋಬಿ ಮಂಚೂರಿ ಮೇಲೆ ಆಹಾರ ಮತ್ತು ಸುರಕ್ಷತಾ ಇಲಾಖೆ ಅಧಿಕಾರಿಗಳ ಕಣ್ಣು ಬಿದ್ದಿದೆ.
ಕನ್ನಡ ಅನುಷ್ಠಾನಕ್ಕೆ ಸಹಕರಿಸದ ಅಧಿಕಾರಿ ಅಮಾನತು
ಬೀದಿ ಬದಿ ಹಾಗೂ ಹೋಟೆಲ್‍ಗಳಲ್ಲಿ ಮಾರಾಟ ಮಾಡುವ ಗೋಬಿ ಮಂಚೂರಿ ಮತ್ತು ರಸ್ತೆಗಳಲ್ಲಿ ಮಾರುವ ಕಾಟನ್ ಕ್ಯಾಂಡಿಗಳ ಕಲರ್ ಜೆಲ್ಲಿಗಳ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ್ಯಾಂತ ಸಂಗ್ರಹಿಸಿರುವ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯ ಟೆಸ್ಟಿಂಗ್ ವರದಿ 10 ದಿನಗಳ ಬಳಿಕ ಹೊರ ಬೀಳಲಿದೆ. ಒಂದು ವೇಳೆ ಈ ಎರಡು ತಿಂಡಿಗಳಲ್ಲಿ ರಾಸಾಯನಿಕ ಅಂಶ ಇರುವುದು ದೃಢಪಟ್ಟರೆ ರಾಜ್ಯದಲ್ಲೂ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯನ್ನು ಬ್ಯಾನ್ ಮಾಡಲಾಗುವುದು ಎಂದು ಅಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಗೋವಾದಲ್ಲಿ ಗೋಬಿ ಮಂಚೂರಿಯಲ್ಲಿ ರಾಸಾಯನಿಕ ಅಂಶ ಇರುವುದು ಹಾಗೂ ತಮಿಳುನಾಡಿನ ವರದಿಯಲ್ಲಿ ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್‍ಕಾರಕ ಅಂಶ ಇರುವುದು ಸಾಬೀತಾಗಿರುವುದರಿಂದ ನಮ್ಮ ವರದಿಯಲ್ಲೂ ಇದೇ ಫಲಿತಾಂಶ ಬರುವ ಸಾಧ್ಯತೆ ಇರುವುದರಿಂದ ಇನ್ನು ಮುಂದೆ ಜನ ಬಾಯಿ ಚಪ್ಪರಿಸಿಕೊಂಡು ತಿನ್ನುವ ಗೋಬಿ ಮಂಚೂರಿ ಬ್ಯಾನ್ ಆಗೋದು ಬಹುತೇಕ ಖಚಿತ ಎನ್ನುವಂತಾಗಿದೆ.