ಬೆಂಗಳೂರು,ಜು.25- ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಮೇಲೆ ಹಿಂಸಾಚಾರ, ಅಪಮಾನ ಮಾಡುವುದನ್ನು ನಿಷೇಧಿಸುವ ಮತ್ತು ಇಂತಹ ಕೃತ್ಯಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಹಾಗೂ ವೈದ್ಯಕೀಯ ವೃತ್ತಿ ಪಾಲನೆ ಮಾಡುವವರಿಗೆ ಕಡ್ಡಾಯ ನೋಂದಣಿ ಮಾಡಿಸಬೇಕಾದ ಮಸೂದೆಯನ್ನು ವಿಧಾನಸಭೆಯಲ್ಲಿಂದು ಅಂಗೀಕರಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕೆಲವು ಕಾನೂನು ತಿದ್ದುಪಡಿ ವಿಧೇಯಕವನ್ನು ಕೆಳಮನೆಯಲ್ಲಿ ಮಂಡಿಸಿದರು.
ಪ್ರಸ್ತಾವಿತ ಮಸೂದೆಯಲ್ಲಿ ವೈದ್ಯರು ವೃತ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಾದರೆ, ವೈದ್ಯಕೀಯ ಪರಿಷತ್ತಿನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಒಂದು ವೇಳೆ ನೋಂದಣಿಯಾಗದೆ ವೃತ್ತಿ ಅಭ್ಯಾಸ ಮಾಡುತ್ತಿದ್ದರೆ, ಅಂತಹವರ ವಿರುದ್ಧ ಪರಿಷತ್ ಕ್ರಮ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ವೈದ್ಯಕೀಯ ಪರಿಷತ್ತಿಗೆ ರಿಜಿಸ್ಟರ್ ಹಾಗೂ ಉಪ ರಿಜಿಸ್ಟರ್‌ಗಳನ್ನು ನೇಮಕ ಮಾಡುವ ವ್ಯವಸ್ಥೆಯಲ್ಲೂ ಬದಲಾವಣೆ ತರಲಾಗಿದೆ. ಪರಿಷತ್ತಿಗೆ ಸಭೆ ನಡೆಸುವ ವೇಳೆ, ಸ್ಥಳ ಹಾಗೂ ಕಾರ್ಯವಿಧಾನಗಳ ಬಗ್ಗೆಯೂ ವಿವರಿಸಲಾಗಿದೆ. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು, ಒಂದು ವೇಳೆ ಇಬ್ಬರು ಲಭ್ಯವಿಲ್ಲದ ಸಂದರ್ಭದಲ್ಲಿ ಸದಸ್ಯರು ಸಭೆಯ ಅಧ್ಯಕ್ಷತೆ ವಹಿಸಬಹುದು ಎಂದು ತಿಳಿಸಲಾಗಿದೆ. ಪರಿಷತ್ತಿನ ರಿಜಿಸ್ಟ್ರಾರ್ ಅವರು ವೈದ್ಯಕೀಯ ವೃತ್ತಿಗರ ಪಟ್ಟಿಯನ್ನು ಪ್ರತಿದಿನ ಅಧಿಕೃತ ಜಾಲತಾಣದಲ್ಲಿ ನಿರ್ವಹಿಸಬೇಕು ಮತ್ತು ರಾಷ್ಟ್ರೀಯ ಆಯೋಗಕ್ಕೆ ತಿಳಿಸಬೇಕು ಎಂದು ಮಸೂದೆಯಲ್ಲಿ ಸೂಚಿಸಲಾಗಿದೆ.
ನಕಲಿಯಾಗಿ ವೈದ್ಯಕೀಯ ವೃತ್ತಿ ಮಾಡುವವರಿಗೆ 10 ಸಾವಿರ ರೂಪಾಯಿಂದ ಒಂದು ಲಕ್ಷ ರೂಪಾಯಿಗಳವರೆಗೂ ಜುಲಾನೆ ವಿಧಿಸುವ ಅವಕಾಶ ಕಲ್ಪಿಸಲಾಗಿದೆ.ವೈದ್ಯಕೀಯ ಸೇವಾ ಸಿಬ್ಬಂದಿಯನ್ನು ಹಿಂಸಿಸುವುದು, ಅಪಮಾನ ಮಾಡುವುದು, ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದಕ್ಕೆ ಈ ಮೊದಲು ನಿಗದಿಯಾಗಿದ್ದ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ.
ಪ್ರಸ್ತಾವಿತ ಮಸೂದೆಯಲ್ಲಿ ಮೂರು ವರ್ಷಗಳಿಗಿಂತ ಕಡಿಮೆ ಇಲ್ಲದಂತೆ ಏಳು ವರ್ಷಗಳವರೆಗೂ ವಿಸ್ತರಿಸಬಹುದಾದ ಕಾರಾಗೃಹ ವಾಸ ಹಾಗೂ ಇಪ್ಪತ್ತೈದು ಸಾವಿರ ರೂಪಾಯಿಗಳಿಗಿಂತ ಕಡಿಮೆ ಇಲ್ಲದಂತೆ 2 ಲಕ್ಷಗಳವರೆಗೂ ಜುಲಾನೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅಪರಾಧಗಳಿಗೆ ಪ್ರಚೋದನೆ ನೀಡುವವರೆಗೂ ಇದೇ ತೆರನಾದ ಶಿಕ್ಷೆಯನ್ನು ವಿಧಿಸಲು ಮಸೂದೆಯಲ್ಲಿ ಅವಕಾಶವಿದೆ.
ಇನ್ನು ಮುಂದೆ ವೈದ್ಯಕೀಯ ಸೇವಾ ಸಿಬ್ಬಂದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ, ಆಡಿಯೋ-ವಿಡಿಯೋಗಳಲ್ಲಿ, ಆಸ್ಪತ್ರೆಗಳಲ್ಲಾಗಲಿ ೇಟೋ, ವಿಡಿಯೋ ತೆಗೆಯುವ ಮೂಲಕ ಅಗೌರವಿಸುವ, ದೌರ್ಜನ್ಯ ಎಸಗುವ ಕೃತ್ಯಗಳನ್ನು ನಡೆಸಿದರೆ ಅವು ದಂಡನಾರ್ಹವಾಗಲಿವೆ.
ಪ್ರಮುಖವಾದ ಈ ಮಸೂದೆ ಕುರಿತು ವಿಧಾನಸಭೆಯಲ್ಲಿ ಯಾವುದೇ ಚರ್ಚೆಗಳಾಗಲಿಲ್ಲ. ಮುಡಾ ಹಗರಣವನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರು ಸದನದ ಬಾವಿಯಲ್ಲಿ ಇಳಿದು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.
ಈ ವೇಳೆ ಮಸೂದೆ ಮಂಡನೆ ಆಯಿತು. ಸಭಾಧ್ಯಕ್ಷ ಯು.ಟಿ.ಖಾದರ್ ಜನಪರವಾದ ಮಸೂದೆಗಳು ಮಂಡನೆಯಾಗಿವೆ. ಅವುಗಳ ಮೇಲೆ ಚರ್ಚೆ ಮಾಡಿ ಎಂದು ಮನವಿ ಮಾಡಿದರು. ವಿರೋಧ ಪಕ್ಷದ ನಾಯಕರು ತಮ ಪಟ್ಟನ್ನು ಮುಂದುವರೆದಿದ್ದರಿಂದಾಗಿ ಮಸೂದೆ ಚರ್ಚೆ ಇಲ್ಲದೆ ಅಂಗೀಕಾರಗೊಂಡಿತು.