ಬೆಂಗಳೂರು,ಜ.2– ತಮ್ಮ ವಿರುದ್ಧ ಬಿಜೆಪಿ ನಾಯಕರ ಟೂಲ್ಕಿಟ್ ಜ.1 ರಿಂದಲೇ ಆರಂಭಗೊಂಡಿದ್ದು, ನನ್ನಿಂದ ರಾಜೀನಾಮೆ ಕೊಡಿಸಲು ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಕಳಂಕ ತರುವ ಹುನ್ನಾರಗಳು ನಡೆಯುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ವಾರಗಳಿಂದಲೂ ಬಿಜೆಪಿ ನಾಯಕರು ಮಾಧ್ಯಮಗಳಲ್ಲಿ ಆರೋಪಗಳ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ. ಆದರೆ ಯಾವುದಕ್ಕೂ ದಾಖಲೆಗಳನ್ನು ನೀಡುತ್ತಿಲ್ಲ ಎಂದು ದೂರಿದರು.
ಈ ಹಿಂದೆ ಕೆ.ಎಸ್.ಈಶ್ವರಪ್ಪ ಅವರ ಪ್ರಕರಣವನ್ನು ನನ್ನ ಪ್ರಕರಣದೊಂದಿಗೆ ತಾಳೆ ಹಾಕಲಾಗುತ್ತಿದೆ. ಆಗ ಆತಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಬರೆದಿದ್ದ ಪತ್ರದಲ್ಲಿ ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ.
ನನ್ನೆಲ್ಲಾ ಆಸೆಗಳನ್ನೂ ಬದಿಗೊತ್ತಿ ಆತಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೆರವು ನೀಡಬೇಕು. ನ್ಯಾಯ ದೊರಕಿಸಿಕೊಡಬೇಕು ಎಂದು ಬರೆದಿದ್ದರು. ಈಗ ಬೀದರ್ನ ಸಚಿನ್ ಪಾಂಚಾಳ್ ಆತಹತ್ಯೆ ಪ್ರಕರಣದಲ್ಲಿ ನನ್ನ ಹೆಸರು ಎಲ್ಲಿಯಾದರೂ ನಮೂದಾಗಿ ದೆಯೇ ಎಂದು ಪ್ರಶ್ನಿಸಿದರು.
ವಿಧಾನಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ರಾಜ್ಯದ ವಿರೋಧಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಪ್ರಿಯಾಂಕ್ ಖರ್ಗೆಯವರ ವ್ಯಕ್ತಿಗತ ವಿರೋಧಪಕ್ಷದ ನಾಯಕರಾಗಿ ದುಡಿಯುತ್ತಿದ್ದಾರೆ. ತಮನ್ನು, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ನಿಂದಿಸುವುದನ್ನು ನಿಲ್ಲಿಸಿದ ತಕ್ಷಣವೇ ನಾರಾಯಣಸ್ವಾಮಿಯವರನ್ನು ಹುದ್ದೆಯಿಂದ ಕಿತ್ತೊಗೆಯ ಲಾಗುತ್ತಿದೆ. ಅದಕ್ಕಾಗಿ ಅವರು ದಿನನಿತ್ಯ ಸಕ್ರಿಯರಾಗಿರಲು ಟೀಕೆ ಮಾಡುತ್ತಿದ್ದಾರೆ ಎಂದರು.
ಕಲಬುರಗಿ ರಿಪಬ್ಲಿಕ್ ಎಂದು ಟೀಕೆ ಮಾಡುವ ಬಿಜೆಪಿ ನಾಯಕರಿಗೆ ತಾವು ನಾಲ್ಕೈದು ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಈವರೆಗೂ ಅದಕ್ಕೆ ಅವರಿಂದ ಉತ್ತರ ಬಂದಿಲ್ಲ. ಕಲಬುರಗಿ ಮುತ್ತಿಗೆ ಕಾರ್ಯಕ್ರಮಕ್ಕೂ ಮುನ್ನ ಉತ್ತರ ನೀಡಿ ನಂತರ ಅವರು ಪ್ರತಿಭಟನೆ ಮಾಡುವುದು ಸೂಕ್ತ ಎಂದು ಹೇಳಿದರು.
ಮುನಿರತ್ನ, ಬಸನಗೌಡ ಪಾಟೀಲ್ ಯತ್ನಾಳ್ ಕನಿಷ್ಟ ಒಂದು ನೋಟಿಸ್ ನೀಡಲು ರಾಜ್ಯಬಿಜೆಪಿಯವರಿಗೆ ಸಾಧ್ಯವಾಗಿಲ್ಲ. ಅವರಲ್ಲಿರುವ ವಿವಿಧ ಬಣಗಳ ರಾಜಕೀಯದಿಂದ ಆಗುವ ಮುಜುಗರ ತಪ್ಪಿಸಲು ತಮ ವಿರುದ್ಧ ಆಧಾರರಹಿತ ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.