ಬೆಂಗಳೂರು, ಜೂ.11- ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವ ಹಿನ್ನೆಲೆಯಲ್ಲಿ ಮುಂಗಾರು ಚುರುಕಾಗಿದ್ದು, ಕಳೆದ ನಾಲ್ಕುದಿನಗಳಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಅಲ್ಲದೆ, ಬಂಗಾಳಕೊಲ್ಲಿಯಲ್ಲಿ ಮೇಲೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ. ಇಂದಿನಿಂದ ಜೂನ್ 15ರವರೆಗೂ ಮಳೆ ಪ್ರಮಾಣ ರಾಜ್ಯದಲ್ಲಿ ಹೆಚ್ಚಾಗುವ ಮುನ್ಸೂಚನೆಗಳಿವೆ.
ನೈರುತ್ಯ ಮುಂಗಾರು ಚುರುಕಾಗಿರುವುದರಿಂದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಗಳನ್ನು ಹವಾಮಾನ ಇಲಾಖೆ ನೀಡಿದೆ. ನಿನ್ನೆ ಹಾಗೂ ಕಳೆದ ರಾತ್ರಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ದಾವಣಗೆರೆ, ಬೆಂಗಳೂರು ನಗರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಸಾಧಾರಣ ವ್ಯಾಪಕ ಮಳೆಯಾಗಿದೆ.
ಮೈಸೂರು, ಯಾದಗಿರಿ, ಕೋಲಾರ ವಿಜಯನಗರ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದ್ದರೆ, ಉತ್ತರ ಕನ್ನಡ, ಹಾವೇರಿ, ಚಿತ್ರದುರ್ಗ, ಹಾಸನ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ತುಮಕೂರು, ರಾಯಚೂರು, ಧಾರವಾಡ, ಗದಗ, ರಾಮನಗರ, ವಿಜಯಪುರ, ಕೊಪ್ಪಳ, ಬಾಗಲಕೋಟೆ, ಬಳ್ಳಾರಿ ಜಿಲ್ಲೆಗಳ ಕೆಲವೆಡೆ ಮಾತ್ರ ಮಳೆಬಿದ್ದಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತ್ಯಲ್ಪ ಮಳೆ ಮಾತ್ರ ಆಗಿದೆ. ಕಾಪು ಗ್ರಾಮ ಪಂಚಾಯ್ತಿಯಲ್ಲಿ 77 ಮಿ.ಮೀ.ನಷ್ಟು ರಾಜ್ಯದಲ್ಲೇ ಅತಿ ಹೆಚ್ಚು ಮಳೆಯಾಗಿದೆ.
ಹವಾಮಾನ ಇಲಾಖೆಯು ಮುಂದಿನ 48 ಗಂಟೆಗಳಲ್ಲಿ ರಾಜ್ಯದ 9 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ ನೀಡಿ ರೆಡ್ ಅಲರ್ಟ್ ಘೋಷಿಸಿದೆ. ಕರಾವಳಿ ಭಾಗದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾವೇರಿ, ಧಾರವಾಡ, ಹಾವೇರಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಮೈಸೂರು, ಹಾಸನ, ದಾವಣಗೆರೆ, ಕೊಪ್ಪ, ರಾಯಚೂರು, ಗದಗ, ವಿಜಯನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.