ಬೆಂಗಳೂರು,ಮಾ.16- ಸಂಪಿಗೆಹಳ್ಳಿಯ ಅಶ್ವಥನಗರದ ಮದರಸಾ ಮೇಲೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ದಾಳಿ ಮಾಡಿ ನೀಡಿರುವ ದೂರನ್ನು ಮಕ್ಕಳ ರಕ್ಷಣಾ ನಿರ್ದೇಶನಾಲಯ(ಸಿಡಬ್ಲ್ಯುಸಿ)ಕ್ಕೆ ವರ್ಗಾಯಿಸಿದ್ದು, ಅವರು ನೀಡುವ ವರದಿ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಈ ದೂರಿನ ಬಗ್ಗೆ ಪರಿಶೀಲನೆ ನಡೆಸಿ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ತನಿಖೆ ನಡೆಸುವುದಾಗಿ ಹೇಳಿದರು. ಮಾನವ ಕಳ್ಳಸಾಗಾಣೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಪ್ರಿಯಾಂಕ್ ಕಂಗೂನ್ ಅವರು ಸಂಪಿಗೆಹಳ್ಳಿ ಸಮೀಪದ ಅಮರಜ್ಯೋತಿ ಲೇಔಟ್ನ ಅಶ್ವಥನಗರದಲ್ಲಿರುವ ಮದರಸಾ ಮೇಲೆ ನಿನ್ನೆ ದಾಳಿ ಮಾಡಿದ್ದಾರೆ.
ಆ ಸಂದರ್ಭದಲ್ಲಿ 20 ಬಾಲಕಿಯರು ಮದರಸಾದಲ್ಲಿ ಪತ್ತೆಯಾಗಿದ್ದಾರೆ. ದಾಳಿ ವೇಳೆ ಕೆಲವು ಗೂಂಡಾಗಳನ್ನು ಕರೆಸಿ ಧಮ್ಕಿ ಹಾಕಲಾಗಿದೆ. ಪೊಲೀಸರ ಮಧ್ಯಪ್ರವೇಶದಿಂದ ಯಾವುದೇ ಗಲಾಟೆ ನಡೆದಿಲ್ಲ. ಮದರಸಾದಲ್ಲಿರುವ ಬಾಲಕಿಯರನ್ನು ಬೆಳೆಸಿ ಗಲ್ ರಾಷ್ಟ್ರಗಳಿಗೆ ಮಾನವ ಕಳ್ಳಸಾಗಾಣೆ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ.
ಮದರಸಾದಲ್ಲಿದ್ದ ಈ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡದೆ ಧಾರ್ಮಿಕ ಶಿಕ್ಷಣ ನೀಡುತ್ತಿದುದು ಗೊತ್ತಾಗಿದೆ. ಯಾವುದೇ ಲೈಸನ್ಸ್ ಇಲ್ಲದೆ ಮದರಸಾ ನಡೆಸುತ್ತಿದ್ದಾರೆ ಎಂಬ ಆರೋಪ ಸಹ ಇದೆ. ಮದರಸಾದಲ್ಲಿದ್ದವರ ಪೈಕಿ ಕೆಲವರು ಅನಾಥರಾಗಿದ್ದರೆ ಇನ್ನು ಕೆಲವು ಬಾಲಕಿಯರು ಪೊಷಕರಿದ್ದು ಅನಾಥರಾಗಿ ಇಲ್ಲಿ ಬೆಳೆಯುತ್ತಿರುವ ವಿಷಯ ತಿಳಿದು ಪ್ರಿಯಾಂಕ್ ಕಂಗೂನ್ ಅವರ ನೇತೃತ್ವದ ತಂಡ ದಾಳಿ ಮಾಡಿದೆ.
ದಾಳಿ ಸಂದರ್ಭದಲ್ಲಿ ಆಯೋಗದ ಮಹಿಳಾ ಆಪ್ತ ಸಮಾಲೋಚಕಿಯರು ಬಾಲಕಿಯರ ಜೊತೆ ಮಾತನಾಡಿದಾಗ ಅನಾಥ ಆಶ್ರಮದ ಮುಖ್ಯಸ್ಥೆ ಸಲ್ಮಾ ಎಂಬುವರು ಕುವೈತ್ನಲ್ಲಿರುವ ಯುವಕರ ಜೊತೆ ಮದುವೆ ಮಾಡಿಸಲು ನಮ್ಮನ್ನು ಬೆಳೆಸಿ ಅಲ್ಲಿಗೆ ಕಳುಹಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಾನವ ಕಳ್ಳಸಾಗಾಣೆದಾರರ ಜೊತೆ ಈ ಮದರಸಾ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ.
ಕಂಗೂನ್ ಟ್ವೀಟ್:
ದಾಳಿಯ ಬಗ್ಗೆ ಎಕ್ಸ್ನಲ್ಲಿ ಪ್ರಿಯಾಂಕ್ ಕಂಗೂನ್ ಅವರು ಟ್ವೀಟ್ ಮಾಡಿದ್ದು, ಮದರಸಾದ ಬಾಲಕಿಯರನ್ನು ಸಿಡಬ್ಲ್ಯಡಿಸಿ ಮುಂದೆ ಹಾಜರುಪಡಿಸಲು ಮುಂದಾದಾಗ ಸಲ್ಮಾ ಎಂಬ ಮಹಿಳೆ ಮತ್ತು ಶಮೀರ್ ಎಂಬಾತ ಗೂಂಡಾಗಳನ್ನು ಕರೆಸಿ ಜಗಳಕ್ಕೆ ಯತ್ನಿಸಿದ್ದು, ಪೊಲೀಸರ ಮಧ್ಯಪ್ರವೇಶದಿಂದ ಗೂಂಡಾಗಳನ್ನು ನಿಯಂತ್ರಿಸಲಾಗಿದೆ.
ಪೊಲೀಸರ ಸಲಹೆ ಮೇರೆಗೆ ತಮ್ಮ ಜೊತೆಯಲ್ಲಿದ್ದ ಮಹಿಳಾ ಅಧಿಕಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಠಾಣೆಗೆ ಬರಲಾಯಿತು ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.